ಮಕ್ಕಳ ತಟ್ಟೆಯಿಂದ ಮೊಟ್ಟೆ ಕಸಿದ ಆರೋಪ: ಅಂಗನವಾಡಿ ಸಿಬ್ಬಂದಿಗಳಿಬ್ಬರು ಅಮಾನತು
Sunday, August 11, 2024
ಕೊಪ್ಪಳ: ಪುಟಾಣಿಗಳ ತಟ್ಟೆಗೆ ಮೊಟ್ಟೆ ಹಾಕಿ ಬಳಿಕ ವಾಪಸ್ ಕಿತ್ತುಕೊಂಡ ಆರೋಪದ ಮೇಲೆ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಗುಂಡೂರು ಗ್ರಾಮದ ಅಂಗನವಾಡಿ ಕೇಂದ್ರ 2ರ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯನ್ನು ಗೌರವಧನ ಸೇವೆಯಿಂದ ಅಮಾನತು ಮಾಡಲಾಗಿದೆ.
ಕ್ಷೇತ್ರ ವ್ಯಾಪ್ತಿಯ ಕನಕಗಿರಿ ವಲಯದ ಸಿಡಿಪಿಒ ವಿರೂಪಾಕ್ಷಿಗೆ ಇಬ್ಬರನ್ನೂ ಅಮಾನತು ಮಾಡಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚಿಸಿದ್ದಾರೆ.
ಮಧ್ಯಾಹ್ನದ ಊಟಕ್ಕೆ ಕುಳಿತಿದ್ದ ಮಕ್ಕಳ ತಟ್ಟೆಗೆ ಅಂಗನವಾಡಿ ಸಹಾಯಕಿ ಮೊದಲು ಮೊಟ್ಟೆ ಹಾಕಿದ್ದಾರೆ. ಮಕ್ಕಳು ಇನ್ನೇನು ಮೊಟ್ಟೆಯನ್ನು ಬಾಯಲ್ಲಿ ಇಟ್ಟುಕೊಳ್ಳಬೇಕು ಅನ್ನುವಷ್ಟರಲ್ಲಿ ಅದನ್ನು ಕಸಿದುಕೊಂಡು ತಟ್ಟೆಯಿಂದಲೇ ತೆಗೆದು ಹಾಕಿದ ವೀಡಿಯೊ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿತ್ತು.
ಅಂಮಗನವಾಡಿ ಸಿಬ್ಬಂದಿಯ ಈ ಕೃತ್ಯವನ್ನು ಕಂಡು ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ತಿಪ್ಪಣ್ಣ ಅವರು, ಸಿರಸಗಿ ಅಂಗನವಾಡಿ ಕಾರ್ಯಕರ್ತೆ ಲಕ್ಷ್ಮೀ ಜೆ., ಸಹಾಯಕಿ ಶೈನಾಜ್ ಬೇಗಂರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಗುಂಡೂರಿನ ಅಂಗನವಾಡಿ ಕೇಂದ್ರಕ್ಕೆ ಪೂರೈಕೆಯಾಗಿರುವ ಮೊಟ್ಟೆಯನ್ನು ಮಕ್ಕಳ ತಟ್ಟೆಗೆ ಹಾಕಿ ಬಳಿಕ ವಾಪಸ್ ಪಡೆದು ದುರುಪಯೋಗ ಪಡಿಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ' ಎಂದು ಆದೇಶದಲ್ಲಿ ತಿಳಿಸಲಾಗಿದೆ. ಇಲಾಖೆಯ ಜಿಲ್ಲೆಯ ಡಿ.ಡಿ. ತಿಪ್ಪಣ್ಣ ಅವರಿಗೂ ನೋಟಿಸ್ ಜಾರಿ ಮಾಡುವಂತೆ ಸಚಿವೆ ಸೂಚಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಅಂಗನವಾಡಿ ಕಾರ್ಯಕರ್ತೆ ಲಕ್ಷ್ಮೀ ಜೆ, 'ಮಕ್ಕಳಿಗೆ ನೀಡಲಾಗಿದ್ದ ಮೊಟ್ಟೆ ಕೊಳೆತಿದ್ದವು. ಆದ್ದರಿಂದ ವಾಪಸ್ ಪಡೆದು ಬೇರೆ ಮೊಟ್ಟೆ ತಂದು, ಮಕ್ಕಳ ಜೊತೆ ಮನೆಗೆ ಕೊಟ್ಟು ಕಳುಹಿಸಲಾಗಿದೆ. ವಾಸ್ತವದಲ್ಲಿ ಆಗಿದ್ದು ಇಷ್ಟೇ. ಮಕ್ಕಳ ತಟ್ಟೆಯಲ್ಲಿ ಮೊಟ್ಟೆ ಕಸಿಯುವಷ್ಟು ಕ್ರೂರತೆ ನನಗಿಲ್ಲ' ಎಂದು ತಿಳಿಸಿದ್ದಾರೆ