ಕೃಷಿ ಪಂಪ್‌ಸೆಟ್ ಮೀಟರ್ ಅಳವಡಿಕೆ: ಆದೇಶ ಹಿಂದಕ್ಕೆ ಪಡೆಯಲು ರೈತ ಸಂಘ ಒತ್ತಾಯ
ಕೃಷಿ ಪಂಪ್‌ಸೆಟ್ ಮೀಟರ್ ಅಳವಡಿಕೆ: ಆದೇಶ ಹಿಂದಕ್ಕೆ ಪಡೆಯಲು ರೈತ ಸಂಘ ಒತ್ತಾಯ
ರೈತರು ಬಳಸುವ ಕೃಷಿ ಪಂಪ್‌ಸೆಟ್ ಮೀಟರ್ ಅಳವಡಿಸಿ ಶುಲ್ಕ ವಿಧಿಸಲು ಹೊರಟಿರುವ ರಾಜ್ಯ ಸರ್ಕಾರದ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಆಕ್ರೋಶ ವ್ಯಕ್ತಪಡಿಸಿದೆ.
ಈ ಆದೇಶವನ್ನು ತಕ್ಷಣದಿಂದ ಹಿಂದಕ್ಕೆ ಪಡೆಯುವಂತೆ ರೈತ ಸಂಘದ ಮುಖಂಡರು ಒತ್ತಾಯಿಸಿದ್ದಾರೆ.
ಈ ಹಿಂದೆ ಗುಂಡೂರಾವ್ ಸರ್ಕಾರ ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸುವ ನಿರ್ಧಾರ ಕೈಗೊಂಡಿತ್ತು. ಆಗ ರೈತರು ರಾಜ್ಯ ಸರ್ಕಾರದ ವಿರುದ್ಧ ದಂಗೆ ಎದ್ದಿದ್ದರು ಎಂಬುದನ್ನು ರೈತ ಸಂಘದ ನಾಯಕರು ನೆನಪಿಸಿದರು.
ಆಗಿನ ಹೋರಾಟದ ಸಂದರ್ಭದಲ್ಲಿ ರೈತರ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸುವುದಿಲ್ಲ. ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ಹೇಳಿದ್ದ ಗುಂಡೂರಾವ್ ಸರ್ಕಾರ ತಮ್ಮ ಮಾತಿನಂತೆ ನಡೆದುಕೊಂಡಿತ್ತು ಎಂದು ಹೇಳಿದ ಸಂಘಟನೆಯ ನಾಯಕರು, ಈಗ ಐದು ಭಾಗ್ಯಗಳನ್ನು ಕೊಟ್ಟಿರುವ ಸಿದ್ದರಾಮಯ್ಯ ಸರ್ಕಾರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ. ತಮ್ಮ ಮೇಲಿನ ಹೊರೆಯನ್ನು ತಗ್ಗಿಸಲು ರೈತರಿಂದ ಹಣ ವಸೂಲಿ ಮಾಡಲು ಹೊರಟಿರುವುದು ದುರದೃಷ್ಟಕರ ಎಂದು ವಿಷಾದ ವ್ಯಕ್ತಪಡಿಸಿದರು.
ಒಂದು ವೇಳೆ, ಇಂತಹ ಕ್ರಮಕ್ಕೆ ಮುಂದಾದರೆ, ರಾಜ್ಯವ್ಯಾಪಿ ಬೃಹತ್ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ ಅವರು, ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕೋರಿ ಅರ್ಜಿ ಸಲ್ಲಿಸಿದರೆ ಉಚಿತ ಸಂಪರ್ಕ ನೀಡುವಂತೆ ಆದೇಶ ಹೊರಡಿಸಬೇಕು ಎಂದು ಅವರು ತಾಕೀತು ಮಾಡಿದರು.