ವಿದ್ಯಾರ್ಥಿಯ ಕ್ಷೌರ ಮಾಡಿ ಹಣೆಗೆ ಗಾಯ- ಶಿಕ್ಷಕನಿಗೆ ಪೋಷಕರಿಂದ ಹಲ್ಲೆ, ಅಮಾನತು
Wednesday, August 7, 2024
ಗದಗ: 'ಕ್ಷೌರ ಮಾಡಿಸಿಲ್ಲ'ವೆಂದು ಕೂದಲು ಕತ್ತರಿಸಲು ಮುಂದಾಗಿ, ವಿದ್ಯಾರ್ಥಿಯ ಹಣೆಗೆ ಗಾಯಗೊಳಿಸಿರುವ ಬೆಟಗೇರಿ ಸೇಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕನನ್ನು ಅಮಾನತುಗೊಳಿಸಿರುವ ಘಟನೆ ಮಂಗಳವಾರ ನಡೆದಿದೆ.
'ಬೆಟಗೇರಿ ಸೇಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಬೆನೊಯ್ ಶಾಲೆಯ ಆರು ವಿದ್ಯಾರ್ಥಿಗಳಿಗೆ ಸೋಮವಾರ ಕ್ಷೌರ ಮಾಡಿದ್ದಾರೆ. ಈ ವೇಳೆ ಏಳನೇ ತರಗತಿ ವಿದ್ಯಾರ್ಥಿಯ ಹಣೆಗೆ ಗಾಯವಾಗಿದೆ. ಮಂಗಳವಾರ ಶಾಲೆಗೆ ಬಂದ ಪೋಷಕರು, ಬೆನೊಯ್ ವರ್ತನೆ ಖಂಡಿಸಿ, ಹೊಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದೀಗ 'ಶಿಕ್ಷಕನನ್ನು ಅಮಾನತು ಮಾಡಲಾಗಿದೆ' ಎಂದು ಬಿಇಒ ಆರ್.ಎಸ್.ಬುರಡಿ ತಿಳಿಸಿದ್ದಾರೆ.
'ಪ್ರಕರಣದ ಕುರಿತು ಸ್ವಯಂ ಪ್ರೇರಿತ ದೂರು ದಾಖಲಿಸಿ, ಮುಂದಿನ ಕ್ರಮವಹಿಸಲಾಗುವುದು' ಎಂದು ಬೆಟಗೇರಿ ಠಾಣೆಯ ಪೊಲೀಸರು ತಿಳಿಸಿದ್ದಾರೆ.