MANGALORE: 13 ವರ್ಷದ ಬಾಲಕಿಯ ಹತ್ಯೆ ಪ್ರಕರಣ ಆರೋಪಿ ಬಂಧನ- ಅತ್ಯಾಚಾರಕ್ಕೆ ಯತ್ನಿಸಿದ್ದ ಆರೋಪಿ
ಮಂಗಳೂರು: ಮಂಗಳವಾರ ಜೋಕಟ್ಟೆಯಲ್ಲಿ13 ವರ್ಷದ ಬಾಲಕಿಯ ಹತ್ಯೆ ಪ್ರಕರಣದ ಆರೋಪಿಯನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಬಾಲಕಿಯ ಅತ್ಯಾಚಾರಕ್ಕೆ ಯತ್ನಿಸಿದಾಗ ಆಕೆ ವಿರೋಧ ವ್ಯಕ್ತಪಡಿಸಿದಾಗ ಆತ ಕೊಲೆ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ.
ಬೆಳಗಾವಿ ಜಿಲ್ಲೆ ಮೂಲದ ಪ್ರಸ್ತುತ ಮಂಗಳೂರಿನ ತೋಕೂರು ಗ್ರಾಮದ ಜೋಕಟ್ಟೆ ಬಾಡಿಗೆ ನಿವಾಸಿ ಫಕೀರಪ್ಪ ಹಣಮಪ್ಪ ಮಾದರ(51) ಬಂಧಿತ ಆರೋಪಿ.
ಪಣಂಬೂರು ಠಾಣಾ ವ್ಯಾಪ್ತಿಯ ಜೋಕಟ್ಟೆಯ ಬಾಡಿಗೆ ಮನೆಯೊಂದರಲ್ಲಿ ಬೆಳಗಾವಿ ಮೂಲದ ಹನುಮಂತ ಎಂಬವರು ವಾಸ್ತವ್ಯವಿದ್ದರು. ಕೈನೋವಿನ ಚಿಕಿತ್ಸೆಗೆಂದು ಬೆಳಗಾವಿಯಿಂದ ಬಂದಿದ್ದ ಅವರ ಸಹೋದರನ ಪುತ್ರಿ 13ವರ್ಷದ ಬಾಲಕಿ ಕಳೆದ 4ದಿನಗಳಿಂದ ಅವರ ಮನೆಯಲ್ಲಿ ವಾಸ್ತವ್ಯವಿದ್ದಳು. ಆಗಸ್ಟ್ 6ರಂದು ಎಂದಿನಂತೆ ಮನೆಯಲ್ಲಿದ್ದ ಎಲ್ಲರೂ ಕೆಲಸಕ್ಕೆ ಹೋಗಿದ್ದರು. ಬೆಳಗ್ಗೆ 10.30ರ ವೇಳೆಗೆ ಬಾಲಕಿಯ ತಾಯಿ ಪಕ್ಕದ ಮನೆಯವರಿಗೆ ಕರೆ ಮಾಡಿ ಬಾಲಕಿಗೆ ಪೋನ್ ಕೊಡಲು ಹೇಳಿದ್ದಾರೆ. ಅದರಂತೆ ಅವರು ಫೋನ್ ಕೊಡಲು ಬಂದಾಗ ಬಾಡಿಗೆ ಮನೆಯಲ್ಲಿ ಬಾಲಕಿಯ ಕುತ್ತಿಗೆಗೆ ಬಟ್ಟೆಯಿಂದ ಬಿಗಿದು ಯಾರೋ ಕೊಲೆ ಮಾಡಿದ ರೀತಿ ಕಂಡುಬಂದಿದೆ. ವಿಚಾರ ತಿಳಿದು ಹನುಮಂತ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಫಕೀರಪ್ಪನನ್ನು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಆರೋಪಿ ಫಕೀರಪ್ಪ ಕಳೆದ ಆರು ತಿಂಗಳಿನಿಂದ ಜೋಕಟ್ಟೆ ಪರಿಸರದಲ್ಲಿ ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡಿಕೊಂಡಿದ್ದ. ಈತ ಮೃತ ಬಾಲಕಿಯ ಚಿಕ್ಕಪ್ಪನಿಗೆ ಪರಿಚಿತನಾಗಿದ್ದ. ಆದ್ದರಿಂದ ಜೋಕಟ್ಟೆಯ ಬಾಡಿಗೆ ಮನೆಗೆ ಆಗಾಗ ಬಂದು ಹೋಗುತ್ತಿದ್ದ. ಅದೇ ರೀತಿ ಆಗಸ್ಟ್ 6ರಂದು ಬೆಳಗ್ಗೆ ಮನೆಯಲ್ಲಿ ಬಾಲಕಿ ಒಬ್ಬಳೆ ಇದ್ದಾಗ ಬಂದಿದ್ದಾನೆ. ಬಳಿಕ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ್ದಾನೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದಕ್ಕೆ ಬಾಲಕಿಯನ್ನು ಕೊಲೆ ಮಾಡಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ.