-->
ಮನೋಹರ ಪ್ರಸಾದ್ ಪತ್ರಕರ್ತರ ನಡುವಿನ ಸೂಪರ್ ಸ್ಟಾರ್ - ಡಾ.ಎಂ.ಮೋಹನ ಆಳ್ವ

ಮನೋಹರ ಪ್ರಸಾದ್ ಪತ್ರಕರ್ತರ ನಡುವಿನ ಸೂಪರ್ ಸ್ಟಾರ್ - ಡಾ.ಎಂ.ಮೋಹನ ಆಳ್ವ


ಮೂಡುಬಿದಿರೆ:  ಪತ್ರಕರ್ತರುಗಳ ನಡುವಿನ ಸೂಪರ್ ಸ್ಟಾರ್ ಮನೋಹರ ಪ್ರಸಾದ್ ಆಗಿದ್ದರು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಬಣ್ಣಿಸಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮೂಡುಬಿದಿರೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಮೂಡುಬಿದಿರೆ ತಾಲ್ಲೂಕು ಘಟಕದ ಸಹಯೋಗದಲ್ಲಿ ಮಂಗಳವಾರ ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ನಡೆದ 'ಮನೋಹರ ಪ್ರಸಾದ್ ನೆನಪು' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮನೋಹರ ಪ್ರಸಾದ್ ಪತ್ರಕರ್ತರಿಗಿಂತ ಹೆಚ್ಚಾಗಿ ಸಾರ್ವಜನಿಕ ಸಂಪರ್ಕ ಅಧಿಕಾರಿಯಂತೆ ಜನಮಾನಸದಲ್ಲಿ ಬೆರೆತು ಹೋಗಿದ್ದರು. ನಾನು ಮತ್ತು ಮನೋಹರ್ ಸಮಕಾಲೀನರು ಹಾಗೂ ಗ್ರಾಮೀಣ ಸ್ಪಂದನೆಯವರು. ನಮ್ಮದು ಹುಚ್ಚು ಮನಸ್ಸಿನ ಹತ್ತು ಮುಖಗಳು. ಮನೋಹರ್ ಶಿಕ್ಷಕ ಆಗಿರಬೇಕಿತ್ತು. ಅವರದ್ದು ಬಹುಮುಖಿ ವ್ಯಕ್ತಿತ್ವ. ಅವರ ಹೆಸರನ್ನು ವಿರಾಸತ್‌ನಲ್ಲಿ ನಾವು ಈ ಬಾರಿ ಸ್ಮರಿಸಿಕೊಳ್ಳುತ್ತೇವೆ ಎಂದರು‌.

ಅವರಿಗೆ ಅಪೂರ್ವ ಜ್ಞಾಪಕ ಶಕ್ತಿಯಿತ್ತು. ಅವರೊಂದು ವಿಶ್ವಕೋಶ. ನಿರೂಪಕನಾಗಿ ಭಾಷೆ ಮೇಲಿನ ಹಿಡಿತ ಹಾಗೂ ಸ್ವರ ಮಾಧುರ್ಯ ಗಮನ ಸೆಳೆಯುತ್ತಿತ್ತು. ನುಡಿಸಿರಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅದನ್ನು ಕೇಳುವುದೇ ಒಂದು ಸೊಗಸಾಗಿತ್ತು. ಸುಮಾರು 5 ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, 22 ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ, 9 ಮಸ್ತಕಾಭಿಷೇಕ ನಿರೂಪಣೆ ಹಾಗೂ ಆಕಾಶವಾಣಿಯಲ್ಲಿ ಸುಮಾರು 91 ಕಾರ್ಯಕ್ರಮ ನೀಡಿದ್ದರು ಎಂದು ಸ್ಮರಿಸಿದರು.

ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಮಾತನಾಡಿ, ಮನೋಹರ ಪ್ರಸಾದ್ ಅವರ ನಿಧನದಿಂದ ಕರಾವಳಿ ಪತ್ರಿಕೋದ್ಯಮದಲ್ಲಿ ಒಂದು ಶ್ರೇಷ್ಠ ಅಧ್ಯಾಯದ ಒಂದು ಯುಗಾಂತ್ಯವಾಗಿದೆ. ಮನೋಹರ ಪ್ರಸಾದ್ ಬರಹ ಮಾತ್ರವಲ್ಲದೇ ವ್ಯಕ್ತಿತ್ವದ ಮೂಲಕ ಪತ್ರಿಕೋದ್ಯಮಕ್ಕೆ ಹಲವರನ್ನು ಸೆಳೆದವರು. ಮೂರು ತಲೆಮಾರಿನ ಸಾಧಕರನ್ನು ಕಂಡವರು. ಅವರು ತಿಳಿಯುವ ಕುತೂಹಲ ಹಾಗೂ ವಿದ್ಯಾರ್ಥಿ ಮನಸ್ಸು ಹೊಂದಿದ್ದರು.ವೈವಿಧ್ಯಮಯ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡ ಕಾರಣ ತುಳುನಾಡಿನ ರಾಯಭಾರಿಯೇ ಆಗಿದ್ದರು ಎಂದರು.

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಮಾತನಾಡಿ, ಮನೋಹರ ಪ್ರಸಾದ್ ಅವರ ನೆನಪನ್ನು ಚಿರಸ್ಥಾಯಿಗೊಳಿಸುವ ಕಾರ್ಯಕ್ರಮಗಳನ್ನು ನಮ್ಮ ಸಂಘ ಹಮ್ಮಿಕೊಳ್ಳಲಿದೆ ಎಂದರು.

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಇಬ್ರಾಹಿಂ ಅಡ್ಕಸ್ಥಳ, ಜಗನ್ನಾಥ ಶೆಟ್ಟಿ ಬಾಳ, ಇಬ್ರಾಹಿಂ ಅಡ್ಕಸ್ಥಳ, ಅನ್ನು ಮಂಗಳೂರು, ಭಾಸ್ಕರ್ ರೈ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ, ಮೂಡುಬಿದಿರೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸೀತಾರಾಮ ಆಚಾರ್ಯ ಇದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಮೂಡುಬಿದಿರೆ ತಾಲ್ಲೂಕು ಘಟಕದ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ ಕೆ. ಕಾರ್ಯಕ್ರಮ ನಿರೂಪಿಸಿದರು.ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು.

Ads on article

Advertise in articles 1

advertising articles 2

Advertise under the article