ಬೆಳ್ತಂಗಡಿ: ಮನೆಯಂಗಳದಲ್ಲಿಯೇ ನಿವೃತ್ತ ಶಿಕ್ಷಕನ ಹೆಣ ಉರುಳಿಸಿದ ಭಂಡ ಅಳಿಯ-ಮೊಮ್ಮಗ - ಆಸ್ತಿಗಾಗಿ ಕೃತ್ಯ
Sunday, August 25, 2024
ಬೆಳ್ತಂಗಡಿ: ಹಾಡಹಗಲೇ ನಿವೃತ್ತ ಶಿಕ್ಷಕ ಬೆಳಾಲು ಎಸ್.ಪಿ.ಬಾಲಕೃಷ್ಣ ಭಟ್‌ರನ್ನು ಮನೆಯಂಗಳದಲ್ಲಿಯೇ ಕೊಚ್ಚಿ ಕೊಲೆಗೈದ ಪ್ರಕರಣವನ್ನು ಬೇಧಿಸಿರುವ ಖಾಕಿಪಡೆ ಅವರ ಅಳಿಯ - ಮೊಮ್ಮಗನನ್ನು ಬಂಧಿಸಿ ಕಂಬಿ ಹಿಂದೆ ಕಳುಹಿಸಿದೆ.
ಕಾಸರಗೋಡು ನಿವಾಸಿಗಳಾದ ರಾಘವೇಂದ್ರ ಕದಿಲಾಯ(53), ಮುರುಳಿಕೃಷ್ಣ(20) ಬಂಧಿತ ಆರೋಪಿಗಳು.
ಆ.21ರಂದು ಬೆಳ್ತಂಗಡಿಯ ಬೆಳಾಲು ಗ್ರಾಮದ ಮನೆಯಂಗಳದಲ್ಲಿಯೇ ನಿವೃತ್ತ ಶಿಕ್ಷಕ 73ವರ್ಷದ ಬೆಳಾಲು ಎಸ್.ಪಿ.ಬಾಲಕೃಷ್ಣ ಭಟ್‌ರವರ ಬರ್ಬರ ಹತ್ಯೆಯಾಗಿತ್ತು. ಮನೆಯೊಳಗಿನಿಂದಲೇ ಅಟ್ಟಾಡಿಸಿಕೊಂಡು ಬಂದು ಮಾರಾಕಾಸ್ತ್ರದಿಂದ ಅವರನ್ನು ಕೊಚ್ಚಿ ಕೊಲೆಗೈಯಲಾಗಿತ್ತು. ಇದಕ್ಕೆ ಹರಿದ ರಕ್ತವೇ ಸಾಕ್ಷಿಯಾಗಿತ್ತು. ಮಕ್ಕಳಿದ್ದರೂ ಬಾಲಕೃಷ್ಣ ಭಟ್‌ರವರು ಮನೆಯಲ್ಲಿ ಒಂಟಿಯಾಗಿ ಜೀವನ ನಡೆಸುತ್ತಿದ್ದರು. ಮೊದಲು ಅವರ ಸಣ್ಣಪುತ್ರನ ಮೇಲೆ ಅನುಮಾನ ವ್ಯಕ್ತವಾಗಿತ್ತು. ಆದರೆ ಧರ್ಮಸ್ಥಳ ಪೊಲೀಸರು ಸಿಸಿ ಕ್ಯಾಮರಾ, ಮೊಬೈಲ್ ಲೊಕೇಷನ್ ಆಧರಿಸಿ ತನಿಖೆ ನಡೆಸಿದಾಗ ನಿಜವಾದ ಆರೋಪಿಗಳು ಯಾರೆಂದು ಪತ್ತೆಯಾಗಿದೆ.
ಕೊಲೆ ನಡೆಸಿದವರು ಸ್ವತಃ ಬಾಲಕೃಷ್ಣ ಭಟ್‌ರವರ ಮಗಳ ಪತಿ ಹಾಗೂ ಮಗಳ ಪುತ್ರ. ಪುತ್ರಿಗೆ ಆಸ್ತಿ ನೀಡಲಿಲ್ಲವೆಂದು ಮನೆಗೆ ಬಂದ ಅಳಿಯ ಹಾಗೂ ಮೊಮ್ಮಗ ಸೇರಿ ಅವರನ್ನು ಕೊಲೆಗೈದಿದ್ದಾರೆ. ಕೊಲೆ ಬಳಿಕ ಈ ವಿಚಾರವನ್ನು ಅಪ್ಪ, ಮಗ ಬಾಲಕೃಷ್ಣ ಭಟ್‌ರವರ ಪುತ್ರಿ ವಿಜಯಲಕ್ಷ್ಮಿಯವರಲ್ಲಿ ಬಾಯಿಬಿಟ್ಟಿರಲಿಲ್ಲ. ತಾವೇ ಕೊಲೆಗೈದು ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿ ನಾಟಕದ ಕಣ್ಣೀರು ಸುರಿಸಿದ್ದರು.
ಬಂಧಿತರನ್ನು ಕೋರ್ಟ್ ರಜೆ ಹಿನ್ನೆಲೆ ನ್ಯಾಯಾಧೀಶರ ಮನೆಯಲ್ಲಿಯೇ ಹಾಜರುಪಡಿಸಲಾಗಿದೆ. ನ್ಯಾಯಾಧೀಶರು ನ್ಯಾಯಾಂಗ ಬಂಧನ ವಿಧಿಸಿದ್ದು, ಹೆಚ್ಚಿನ ವಿಚಾರಣೆಗೆ ಧರ್ಮಸ್ಥಳ ಪೊಲೀಸರು ಆರೋಪಿಗಳನ್ನು ಆ.27ರಂದು ಕಸ್ಟಡಿಗೆ ಪಡೆಯಲಿದ್ದಾರೆ.