ರಸ್ತೆ ಅಪಘಾತಗಳಿಗೆ ಇಂಜಿನಿಯರ್ಗಳೇ ಮುಖ್ಯ ಕಾರಣ, ಚಾಲಕರನ್ನು ಹರಕೆಯ ಕುರಿ ಮಾಡಲಾಗುತ್ತದೆ : ಹೆದ್ದಾರಿ ಸಚಿವ ನಿತಿನ್ ಗಡ್ಕರಿ
Thursday, August 29, 2024
ಹೊಸದಿಲ್ಲಿ: ರಸ್ತೆ ನಿರ್ಮಾಣದ ತಪ್ಪಿನಿಂದ ಅಪಘಾತಗಳು ಸಂಭವಿಸುತ್ತದೆ. ಆದ್ದರಿಂದ ರಸ್ತೆ ಅಪಘಾತಗಳಿಗೆ ಇಂಜಿನಿಯರ್ಗಳೇ ಮುಖ್ಯ ಕಾರಣ. ಆದರೆ ರಸ್ತೆ ಅಪಘಾತವಾದಾಗ ಚಾಲಕರನ್ನು ಹರಕೆಯ ಕುರಿ ಮಾಡಲಾಗುತ್ತದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಎಫ್ಐಸಿಸಿಐನಿಂದ ಬುಧವಾರ ಆಯೋಜಿಸಿದ್ದ 6ನೇ ವರ್ಷದ ರಸ್ತೆ ಸುರಕ್ಷತೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಯುದ್ಧ ಭಯೋತ್ಪಾದನೆ ಮತ್ತು ನಕ್ಸಲೀಯರ ವಿಧ್ವಂಸಕ ಕೃತ್ಯದಿಂದ ಸಂಭವಿಸುವ ಸಾವಿಗಿಂತಲೂ ದೇಶದಲ್ಲಿ ರಸ್ತೆ ಅಪಘಾತಗಳಲ್ಲಿ ಮೃತಪಡುವವರ ಸಂಖ್ಯೆ ಹೆಚ್ಚಿದೆ. ದೇಶದಲ್ಲಿ ವಾರ್ಷಿಕವಾಗಿ 5 ಲಕ್ಷ ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು, 1.5 ಲಕ್ಷ ಜನರು ಮೃತಪಡುತ್ತಿದ್ದಾರೆ. 3 ಲಕ್ಷ ಜನರು ಗಾಯಗೊಳ್ಳುತ್ತಿದ್ದಾರೆ. ಇದರಿಂದ ದೇಶದ ಜಿಡಿಪಿಗೆ ಶೇ.3ರಷ್ಟು ನಷ್ಟವಾಗುತ್ತಿದೆ' ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಹೆದ್ದಾರಿಗಳಲ್ಲಿ ಬ್ಲಾಕ್ಸ್ಪಾಟ್ ಸಂಖ್ಯೆಯು ಹೆಚ್ಚಳವಾಗುತ್ತಿದೆ. ಇದರಿಂದ ಅಪಘಾತಗಳ ಸಂಖ್ಯೆಯೂ ಏರಿಕೆಯಾಗುತ್ತಿದೆ. ಸುರಕ್ಷತೆಗೆ ಸಂಬಂಧಿಸಿದಂತೆ ಎಲ್ಲಾ ಹೆದ್ದಾರಿಗಳ ಬಗ್ಗೆ ಪರಿಶೀಲನೆ ನಡೆಸುವ ಅಗತ್ಯವಿದೆ. ರಸ್ತೆ ಸಂಚಾರ ನಿಯಮ ಪಾಲಿಸುವ ಮೂಲಕ ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.