-->
ಅತ್ಯಾಚಾರ ಸಂತ್ರಸ್ತೆ ಅಪಹರಣ ಆರೋಪ; ಮಾಜಿ ಸಚಿವ ರೇವಣ್ಣ ಜಾಮೀನು ಆದೇಶ ಎತ್ತಿಹಿಡಿದ ಹೈಕೋರ್ಟ್

ಅತ್ಯಾಚಾರ ಸಂತ್ರಸ್ತೆ ಅಪಹರಣ ಆರೋಪ; ಮಾಜಿ ಸಚಿವ ರೇವಣ್ಣ ಜಾಮೀನು ಆದೇಶ ಎತ್ತಿಹಿಡಿದ ಹೈಕೋರ್ಟ್

ಬೆಂಗಳೂರು: ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಂದ ಅತ್ಯಾಚಾರಕ್ಕೊಳಗಾಗಿದ್ದಾರೆ ಎನ್ನಲಾಗಿದ್ದ ಮಹಿಳೆಯೊಬ್ಬರನ್ನು ಅಪಹರಿಸಿದ ಆರೋಪದಲ್ಲಿ ಜೆಡಿಎಸ್ ಶಾಸಕ, ಮಾಜಿ ಸಚಿವ ಹೆಚ್​.ಡಿ. ರೇವಣ್ಣ ಅವರಿಗೆ ವಿಚಾರಣಾ ನ್ಯಾಯಾಲಯ ಮಂಜೂರು ಮಾಡಿದ್ದ ಜಾಮೀನನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.

 ಅಷ್ಟು ಮಾತ್ರವಲ್ಲದೆ, ಹೆಚ್ ಡಿ ರೇವಣ್ಣ ಅವರಿಗೆ ಮಂಜೂರು ಮಾಡಲಾಗಿದ್ದ ಜಾಮೀನು ರದ್ದು ಕೋರಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಸಲ್ಲಿಸಿರುವ ಅರ್ಜಿಯನ್ನು ವಜಾಗೊಳಿಸಿದೆ. ಜೊತೆಗೆ, ಮಹಿಳೆಯ ಅಪಹರಣಕ್ಕೆ ಕಾರಣರಾಗಿದ್ದ ಇತರ ಆರೋಪಿಗಳಾದ ಹಾಸನದ ಸತೀಶ್ ಬಾಬಣ್ಣ ಮತ್ತಿತರರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಮಾನ್ಯ ಮಾಡಲಾಗಿದೆ. ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಸಹ ಮಂಜೂರು ಮಾಡಲಾಗಿದೆ.
ರೇವಣ್ಣ ಅವರಿಗೆ ಮಂಜೂರು ಮಾಡಲಾಗಿರುವ ಜಾಮೀನು ರದ್ದು ಕೋರಿ SIT ಸಲ್ಲಿಸಿದ್ದ ಅರ್ಜಿ ಹಾಗೂ ಅಪಹರಣ ಪ್ರಕರಣದಲ್ಲಿ ಜಾಮೀನು ಕೋರಿ ಇತರ ಆರು ಆರೋಪಿಗಳು ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಅರ್ಜಿ ವಿಚಾರಣೆ ವೇಳೆ SIT ಪರ ವಕೀಲರು, ಮಹಿಳೆಯ ಅಪಹರಣ ಪ್ರಕರಣದಲ್ಲಿ ರೇವಣ್ಣ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಪ್ರಕರಣದಲ್ಲಿ ರೇವಣ್ಣ ಅವರ ಪಾತ್ರವಿರುವುದು ತನಿಖೆಯ ವೇಳೆ ಸಾಬೀತಾಗಿದೆ. ತನಿಖಾಧಿಕಾರಿಗಳು ಹಾಗೂ ನ್ಯಾಯಾಲಯದ ಮುಂದೆ ಸಂತ್ರಸ್ತ ನೀಡಿರುವ ಹೇಳಿಕೆಯಲ್ಲಿ ರೇವಣ್ಣ ವಿರುದ್ಧದ ಆರೋಪ ಮಾಡಿದ್ದಾರೆ. ಈ ಆರೋಪವನ್ನು ದಾಖಲಿಸಿಕೊಂಡ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಅಲ್ಲದೆ, ಐಪಿಸಿ 364ಎ ಪ್ರಕಾರ ಯಾವುದೇ ವ್ಯಕ್ತಿಯ ಅಪಹರಣದ ಬಳಿಕ ಆ ವ್ಯಕ್ತಿಯ ಜೀವ ಭಯವು ಇರಲಿದೆ. ಈ ಹಿನ್ನೆಲೆಯಲ್ಲಿ ಜಾಮೀನು ರದ್ದುಪಡಿಸಬೇಕು ಎಂದು ಅರ್ಜಿ ಸಲ್ಲಿಸಿದ್ದರು.

ಇದಕ್ಕೆ ಆಕ್ಷೇಪಿಸಿದ ರೇವಣ್ಣ ಪರ ಹಿರಿಯ ವಕೀಲರು, ಜಾಮೀನು ಮಂಜೂರು ಮಾಡುವುದು ಮತ್ತು ರದ್ದುಪಡಿಸುವ ಪ್ರಕ್ರಿಯೆ ಸಂಪೂರ್ಣವಾಗಿ ವಿಭಿನ್ನವಾಗಿರಲಿದೆ. ಅಲ್ಲದೆ, ಇಡೀ ಪ್ರಕರಣದಲ್ಲಿ ರೇವಣ್ಣ ಅವರ ಯಾವುದೇ ಪಾತ್ರವಿಲ್ಲ. ಆದರೆ, ಸಂತ್ರಸ್ತೆಯನ್ನು ಅಪಹರಣ ಮಾಡಿದ್ದ ಸತೀಶ್ ಬಾಬಣ್ಣ ಎಂಬುವರು ರೇವಣ್ಣ ನಿಮ್ಮನ್ನು ಕರೆದುಕೊಂಡು ಬರುವುದಕ್ಕೆ ಹೇಳಿದ್ದಾರೆ ಎಂದು ತಿಳಿಸಿದ್ದಾರೆ ಎಂಬ ಆರೋಪ ಇದೆ. ಇದು ಶಿಕ್ಷಾರ್ಹ ಅಪರಾಧವಲ್ಲ. ಜತೆಗೆ, ಐಪಿಸಿ ಸೆಕ್ಷನ್ 362ರ ಪ್ರಕಾರ ಅಪಹರಣಕ್ಕೊಳಗಾದವರಿಗೆ ವಂಚನೆ ಮಾಡುವ ಉದ್ದೇಶವಿರಬೇಕು. ಈ ಪ್ರಕರಣದಲ್ಲಿ ಆ ಉದ್ದೇಶವಿಲ್ಲ. ಸಂತ್ರಸ್ತೆಯಾಗಿರುವವರು ರೇವಣ್ಣ ಮನೆಯ ಕೆಲಸದವರಾಗಿದ್ದಾರೆ. ಆದ್ದರಿಂದ, ಮೋಸ ಮಾಡುವ ಹಾಗೂ ಬೆದರಿಕೆಯೊಡ್ಡುವ ಉದ್ದೇಶವಿಲ್ಲ. ಆದ್ದರಿಂದ, ಅರ್ಜಿ ವಜಾಗೊಳಿಸಬೇಕು ಎಂದು ಪೀಠಕ್ಕೆ ಮನವಿಯನ್ನು ಮಾಡಿದ್ದರು.

ಪ್ರಕರಣದ‌ ಇತರೆ ಆರೋಪಿಗಳಾದ ಸತೀಶ್ ಬಾಬು, ಹೆಚ್​.ಕೆ. ಸುಜಯ್, ಹೆಚ್​.ಎನ್. ಮಧು, S T. ಕೀರ್ತಿ, ಹೆಚ್​.ಡಿ ಮಾಯು ಗೌಡ, ಕೆ.ಎ. ರಾಜಗೋಪಾಲ್ ಅವರ ಅರ್ಜಿಗಳನ್ನು ಮಾನ್ಯ ಮಾಡಿದ ಹೈಕೋರ್ಟ್, ಎಲ್ಲ ಆರೋಪಿಗಳು ತಲಾ 5 ಲಕ್ಷ ರೂ. ಮೊತ್ತದ ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತದ ಭದ್ರತಾ ಖಾತ್ರಿ ಒದಗಿಸಬೇಕು. ತನಿಖೆಗೆ ಸಹಕರಿಸಬೇಕು, ಸಾಕ್ಷ್ಯಗಳ ಮೇಲೆ ಪ್ರಭಾವ ಬೀರಬಾರದು ಎಂಬ ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿದೆ.

Ads on article

Advertise in articles 1

advertising articles 2

Advertise under the article