ಕಡಬ: ಕುಂತೂರು ಶಾಲಾ ಕಟ್ಟಡ ಕುಸಿತ - ನಾಲ್ವರು ಮಕ್ಕಳಿಗೆ ಗಾಯ
Wednesday, August 28, 2024
ಕಡಬ: ಜಿಸಿಬಿಯಿಂದ ಕಾಮಗಾರಿ ನಡೆಯುತ್ತಿದ್ದ ವೇಳೆ ಕುಂತೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿಂಬದಿಯ ಗೋಡೆ ಸಂಪೂರ್ಣ ಕುಸಿದು ಬಿದ್ದು ನಾಲ್ವರು ವಿದ್ಯಾರ್ಥಿನಿಯರು ಗಾಯಗೊಂಡ ಘಟನೆ ನಡೆದಿದೆ.
ಫಾತಿಮತ್ ಸುಹಾನ, ರಶ್ಮಿ, ದೀಕ್ಷಿತಾ, ಯಶ್ಮಿತಾ ಗಾಯಗೊಂಡ ವಿದ್ಯಾರ್ಥಿನಿಯರು.
ಗಾಯಾಳು ವಿದ್ಯಾರ್ಥಿನಿಯರನ್ನು ಚಿಕಿತ್ಸೆಗಾಗಿ ಪುತ್ತೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿಥಿಲಗೊಂಡಿರುವ ಕಟ್ಟಡದ ಬಳಿ ಜೆಸಿಬಿಯಿಂದ ಕಾಮಗಾರಿ ನಡೆಸಿರುವುದೇ ಅನಾಹುತಕ್ಕೆ ಕಾರಣ ಎನ್ನಲಾಗಿದೆ. ಮಕ್ಕಳು ಆಟವಾಡಲು ಹೊರಗಡೆ ಹೋಗಿದ್ದರಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಶಾಲಾ ಕಟ್ಟಡ ಕುಸಿತಗೊಂಡ ವಿಚಾರದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಿ ತಕ್ಷಣ ಸಮಗ್ರ ವರದಿಯನ್ನು ಸಲ್ಲಿಸುವಂತೆ ಕಡಬ ತಹಶೀಲ್ದಾರರು, ಕಾರ್ಯನಿರ್ವಹಣಾ ಅಧಿಕಾರಿ ಸೂಚಿಸಿದ್ದಾರೆ.
ಘಟನಾ ಸ್ಥಳಕ್ಕೆ ಎಸಿ ಜುಬಿನ್ ಮಹೋಪಾತ್ರ, ಕಡಬ ತಹಶೀಲ್ದಾರ್ ಪ್ರಭಾಕರ ಖಜೂರೆ, ಕಾರ್ಯನಿರ್ವಹಣಾ ಅಧಿಕಾರಿ ಹಾಗೂ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಇನ್ನಿತರ ಅಧಿಕಾರಿಗಳು ಭೇಟಿ ನೀಡಿ ಘಟನೆ ಬಗ್ಗೆ ಪರಿಶೀಲನೆ ನಡೆಸಿದರು. ಘಟನಾ ಸ್ಥಳದಲ್ಲಿ ನೆರೆದಿರುವ ಪೋಷಕರು ಹಾಗೂ ಶಾಲೆಯ ಸಮಿತಿಯವರು ಪೋಷಕರು ಹಾಗೂ ಸಾರ್ವಜನಿಕರಿಗೆ ಅಧಿಕಾರಿಗಳು ಘಟನೆಯ ಬಗ್ಗೆ ಮುಂದೆ ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ವಿವರಣೆ ನೀಡಲಾಯಿತು.