UPPINANGADY: ಮೊಬೈಲ್ನಲ್ಲಿ ಮಾತನಾಡುವುದನ್ನು ಆಕ್ಷೇಪಿಸಿದ್ದಕ್ಕೆ 14 ವರ್ಷದ ಬಾಲಕಿ ಆತ್ಮಹತ್ಯೆ
ಉಪ್ಪಿನಂಗಡಿ: ಕರಾಯ ಗ್ರಾಮದ ಕೊಂಬೆಟ್ಟಿ ಮಾರು ಎಂಬಲ್ಲಿ ಭಾನುವಾರ ರಾತ್ರಿ ಮೊಬೈಲ್ನಲ್ಲಿ ವಿಡಿಯೋ ಕಾಲ್ ಮಾಡಿ ಮಾತನಾಡುವುದನ್ನು ಆಕ್ಷೇಪಿಸಿರುವುದಕ್ಕೆ ತಾಯಿ ಮೇಲೆ ಮುನಿಸಿಕೊಂಡ 14 ವರ್ಷದ ಬಾಲಕಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೃಷಿ ಕೂಲಿ ಕಾರ್ಮಿಕರಾಗಿ ಆಗಮಿಸಿದ್ದ ಜಾರ್ಖಂಡ್ ಮೂಲದ ಕುಟುಂಬದ ಬಾಲಕಿ ನೀಲಮ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡವಳು.
ಜಾರ್ಖಂಡ್ ಮೂಲದ ಲಾತೆಹಾರ್ ಜಿಲ್ಲೆಯ ಜಲ್ತಾ ಪರ್ಸಾರಿ ಲೆಡ್ಡಾ ನಿವಾಸಿಯಾಗಿರುವ ಸರ್ಜು ಬುಯ್ಯಾನ್ ಪತ್ನಿ ಮಗಳೊಂದಿಗೆ ವಾರದ ಹಿಂದೆ ಕರಾಯ ಗ್ರಾಮದ ಕೊಂಬೆಟ್ಟಿ ಮಾರು ಎಂಬಲ್ಲಿನ ಜಗದೀಶ್ ಸರಳಾಯ ಎಂಬವರ ತೋಟದ ಕೆಲಸಕ್ಕೆ ಆಗಮಿಸಿದ್ದು, ಭಾನುವಾರ ರಾತ್ರಿ 7.30ರ ಸುಮಾರಿಗೆ ತೋಟದ ಮಾಲೀಕರು ಒದಗಿಸಿ ವಾಸ್ತವ್ಯದ ಕೋಣೆಯಲ್ಲಿ ನೀಲಮ್ ಕುಮಾರಿ ಮೊಬೈಲ್ನಲ್ಲಿ ಸಂಬಂಧಿ ಕಳೊಂದಿಗೆ ವಿಡಿಯೋ ಕಾಲ್ ಮಾಡಿ ಮಾತನಾಡುತ್ತಿದ್ದುದಕ್ಕೆ ತಾಯಿ ಆಕ್ಷೇಪಿಸಿದ್ದು ಮೊಬೈಲ್ ಕಿತ್ತುಕೊಂಡಿದ್ದರು. ಇದರಿಂದ ಸಿಟ್ಟಾದ ಬಾಲಕಿ ತೋಟದ ಮಾವಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಕೆಯ ತಂದೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.