-->
VIDEO- ಮಂಗಳೂರು ಪಾಲಿಕೆಯಲ್ಲಿ ಬಸ್ಸಿಗೆ ಕಲ್ಲೆಸೆತ ಚರ್ಚೆ ಕೋಲಾಹಲ- ಮಾಜಿ ವಿಪಕ್ಷ ನಾಯಕನ ಆಕ್ರೋಶಕ್ಕೆ  ಮೈಕ್ ತುಂಡು

VIDEO- ಮಂಗಳೂರು ಪಾಲಿಕೆಯಲ್ಲಿ ಬಸ್ಸಿಗೆ ಕಲ್ಲೆಸೆತ ಚರ್ಚೆ ಕೋಲಾಹಲ- ಮಾಜಿ ವಿಪಕ್ಷ ನಾಯಕನ ಆಕ್ರೋಶಕ್ಕೆ ಮೈಕ್ ತುಂಡು





ಮಂಗಳೂರು : ಕೆಲ ದಿನಗಳ ಹಿಂದೆ ನಗರದಲ್ಲಿ ಕಾಂಗ್ರೆಸ್ ನಡೆಸಿದ್ದ ಪ್ರತಿಭಟನೆಯಲ್ಲಿ ಬಸ್‌ಗೆ ಕಲ್ಲು ತೂರಿದ್ದ ಪ್ರಕರಣ ಶನಿವಾರ ನಡೆದ ಮಂಗಳೂರು ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ವಾಗ್ವಾದಕ್ಕೆ ಕಾರಣವಾಗಿ ಸದನದಲ್ಲಿ ಕೋಲಾಹಲವುಂಟಾಯಿತು.

 

ಈ ಸಂದರ್ಭ ಪ್ರತಿಪಕ್ಷದ ನಾಯಕರಿಗೆ ಮಾತನಾಡಲು ಮೇಯರ್ ಅವಕಾಶ ನೀಡಿಲ್ಲ ಎಂದು ಆರೋಪಿಸಿ ಪ್ರತಿಪಕ್ಷದ‌ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಇದೇ ವೇಳೆ ಮೇಯರ್ ವಿರುದ್ಧ ಧಿಕ್ಕಾರ ಕೂಗಿದರು‌. ಇದಕ್ಕೆದುರಾಗಿ ಆಡಳಿತರೂಢ ಬಿಜೆಪಿ ಸದಸ್ಯರು ಕಾಂಗ್ರೆಸ್ ವಿರುದ್ಧ ಧಿಕ್ಕಾರ ಕೂಗಿದರು.  


 ರಾಜ್ಯಪಾಲರ ವಿರುದ್ದ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದ ವೇಳೆ ಅಲ್ಪಸಂಖ್ಯಾತರಿಗೆ ಸೇರಿದ ಬಸ್ ಮೇಲೆ ಕಲ್ಲು ಎಸೆದಿದ್ದಾರೆ. ಬಸ್‌ನಲ್ಲಿದ್ದ ಅಲ್ಪಸಂಖ್ಯಾತ ಮಹಿಳೆ ಕಲ್ಲು ತಾಗಿ ಗಾಯಗೊಂಡಿದ್ದಾರೆ’ ಎಂದು ಬಿಜೆಪಿ ಸದಸ್ಯೆ ಸಂಗೀತಾ ನಾಯಕ್ ಆರೋಪಿಸಿದರು‌. ಕಲ್ಲು ತೂರಾಟ ಪ್ರಕರಣದಲ್ಲಿ ಭಾಗಿಯಾಗಿ, ಜಾಮೀನಿನ ಮೇಲೆ ಬಿಡುಗಡೆಯಾಗಿರುವ ನಾಮ‌ನಿರ್ದೇಶಿತ ಸದಸ್ಯರನ್ನು ಸಭೆಯಿಂದ ಹೊರಕ್ಕೆ ಕಳುಹಿಸಬೇಕು ಎಂದು ಬಿಜೆಪಿ ಸದಸ್ಯೆ ಶಕೀಲ ಕಾವ ಆಗ್ರಹಿಸಿದರು.‌ಸಾಮಾನ್ಯ ಸಭೆಯಲ್ಲಿ ಪ್ರತಿಪಕ್ಷದ ನಾಯಕರಿಗೆ ಮಹತ್ವದ ಸ್ಥಾನವಿದ್ದು, ಹಿಂದಿನ ಸಭೆಯ ನಡಾವಳಿ ಮಂಡಿಸಿದ ನಂತರ ಪ್ರತಿಪಕ್ಷದ ನಾಯಕರಿಗೆ ಮಾತನಾಡಲು ಅವಕಾಶ ನೀಡದ ಮೇಯರ್ ಕ್ರಮ‌ ಸರಿಯಲ್ಲ, ಅಭಿವೃದ್ಧಿ ವಿಚಾರ ಚರ್ಚೆಗೆ ಅವಕಾಶ ನೀಡುತ್ತಿಲ್ಲ ಎಂದು ಪ್ರತಿಪಕ್ಷದ ನಾಯಕ ಪ್ರವೀಣ್ ಚಂದ್ರ ಆಳ್ವ ಆಕ್ಷೇಪಿಸಿದರು.‌




 ಈ‌ ವೇಳೆ ಧರಣಿ ಕುಳಿತ ಪ್ರತಿಪಕ್ಷದ ಸದಸ್ಯರು ಮಾತನಾಡಲು ಸ್ಥಳದಲ್ಲೇ ಮೈಕ್ ತರಿಸಿಕೊಂಡರು. ಅದು ಆನ್ ಆಗದಿದ್ದಾಗ ಕಾಂಗ್ರೆಸ್ ಸದಸ್ಯರೊಬ್ಬರು ಮೈಕ್ ಅನ್ನು ನೆಲಕ್ಕೆ ಬಿಸಾಡಿದಾಗ ಮೈಕ್ ತುಂಡಾಯಿತು. ಇದರಿಂದ ಕೆರಳಿದ ಆಡಳಿತ ಪಕ್ಷದ ಸದಸ್ಯರು ಮತ್ತೆ ಗದ್ದಲ ಎಬ್ಬಿಸಿದರು. ‘ಕಾಂಗ್ರೆಸ್ ಸದಸ್ಯರು ಇಲ್ಲೂ ಗೂಂಡಾಗಿರಿ ಮಾಡುತ್ತಿದ್ದಾರೆ’ ಎಂದು ಶಕೀಲ ಕಾವ, ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ ಆರೋಪಿಸಿದರು‌. ಮೇಯರ್ ಸಭೆಯನ್ನು ಮೊಟಕುಗೊಳಿಸಿ ಎದ್ದು ನಡೆದರು.‌

Ads on article

Advertise in articles 1

advertising articles 2

Advertise under the article