ಇಬ್ಬರು ಗಂಡು ಮಕ್ಕಳ ಮೃತದೇಹವನ್ನು 15ಕಿ.ಮೀ. ಹೊತ್ತು ಸಾಗಿದ ಹೆತ್ತವರು
Friday, September 6, 2024
ಮುಂಬೈ: ಸಕಾಲದಲ್ಲಿ ಚಿಕಿತ್ಸೆ ದೊರೆಯದೆ ಇಬ್ಬರು ಗಂಡು ಮಕ್ಕಳನ್ನು ಕಳೆದುಕೊಂಡ ಹೆತ್ತವರು ಆಸ್ಪತ್ರೆಯಿಂದ ಅವರ ಮೃತದೇಹಗಳನ್ನು 15 ಕಿ.ಮೀ. ಹೊತ್ತು ಸಾಗಿರುವ ಮನಕಲಕುವ ಘಟನೆಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಹಾರಾಷ್ಟ್ರದ ಗಡ್ಡಿರೋಲಿಯಲ್ಲಿ ಅಹೇರಿ ತಾಲೂಕಿನ ದಂಪತಿ ತಮ್ಮ ಮಕ್ಕಳಿಬ್ಬರ ಮೃತದೇಹಗಳನ್ನು ಹೊತ್ತೊಯ್ಯುತ್ತಿರುವ ವೀಡಿಯೊವನ್ನು ಕಾಂಗ್ರೆಸ್ ಮುಖಂಡ ವಿಜಯ್ ವಾಡೆಟ್ಟಿವಾರ್ ಹಂಚಿಕೊಂಡಿದ್ದಾರೆ. 10 ವರ್ಷದೊಳಗಿನ ಇಬ್ಬರು ಗಂಡು ಮಕ್ಕಳು ಜ್ವರಕ್ಕೆ ತುತ್ತಾಗಿದ್ದರು. ಆದರೆ ಅವರಿಗೆ ಸಕಾಲದಲ್ಲಿ ಚಿಕಿತ್ಸೆ ದೊರೆಯದೆ ಆರೋಗ್ಯ ಹದಗೆಟ್ಟು ಬಳಲಿದ್ದರು.
ಇದರಿಂದ ಕಂಗೆಟ್ಟ ದಂಪತಿ ಕೊನೆಗೆ ಗಡ್ಡಿರೋಲಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಮಕ್ಕಳಿಬ್ಬರ ಪ್ರಾಣ ಪಕ್ಷಿ ಹಾರಿಹೋಗಿದೆ.
ಇದ್ದ ಇಬ್ಬರು ಮಕ್ಕಳನ್ನು ಕಳೆದುಕೊಂಡ ನತದೃಷ್ಟ ದಂಪತಿ ಕಣ್ಣೀರಲ್ಲಿ ಕೈತೊಳೆದಿದ್ದಾರೆ. ಅವರ ಗೋಳು ಮುಗಿಲುಮುಟ್ಟಿದೆ. ಆದರೆ ಆ ಮಕ್ಕಳ ಮೃತದೇಹವನ್ನು ಸಾಗಿಸಲು ಆಂಬ್ಯುಲೆನ್ಸ್ ಸಿಗದೆ ಅವರು 15ಕಿ.ಮೀ. ದೂರದ ಗಡ್ಡಿರೋಲಿಗೆ ಕೆಸರಿನಲ್ಲಿಯೇ ನಡೆದು ಹೋಗಿದ್ದಾರೆ. ಇದರ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿ ವೈರಲ್ ಆಗಿದೆ. ನೆಟ್ಟಿಗರು ಸರ್ಕಾರ ಮತ್ತು ಆಡಳಿತವನ್ನು ಟೀಕಿಸುತ್ತಿದ್ದಾರೆ.