ತಿಂಗಳಿಗೆ 30ಲಕ್ಷ ಲಂಚಕ್ಕೆ ಪೀಡಿಸಿ, ಗುತ್ತಿಗೆದಾರನ ಪತ್ನಿಯನ್ನು ತನ್ನೊಂದಿಗೆ ಮಲಗಲು ಕಳಿಸು ಎಂದ ಬಿಜೆಪಿ ಶಾಸಕ ಮುನಿರತ್ನ ಅರೆಸ್ಟ್
Saturday, September 14, 2024
ಬೆಂಗಳೂರು: ಬಿಬಿಎಂಪಿ ಗುತ್ತಿಗೆದಾರ ಚಲುವರಾಜು ಎಂಬವರಿಗೆ ಅವಾಚ್ಯ ಪದಗಳಿಂದ ನಿಂದಿಸಿ ಮಾತನಾಡಿದ್ದ ಬಿಜೆಪಿ ಶಾಸಕ ಮುನಿರತ್ನ ಅವರ ಆಡಿಯೋ ವೈರಲ್ ಆಗಿತ್ತು. ಚಲುವರಾಜುರಿಂದ ತಿಂಗಳಿಗೆ 30 ಲಕ್ಷ ಲಂಚ ಕೇಳಿದ್ದಲ್ಲದೆ, ಅವರ ಪತ್ನಿಯನ್ನು ತನ್ನೊಂದಿಗೆ ಮಲಗಲು ಕಳಿಸು ಎಂದು ಅವಾಚ್ಯವಾಗಿ ನಿಂದಿಸಿದ್ದರು. ಈ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಾಗುತ್ತಿದ್ದಂತೆ ಆಂಧ್ರಪ್ರದೇಶಕ್ಕೆ ಎಸ್ಕೆಪ್ ಆಗಲು ಯತ್ನಿಸಿದ ಬೆಂಗಳೂರಿನ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಕೋಲಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆಡಿಯೋ ವೈರಲ್ ಬೆನ್ನಲ್ಲೇ ಮುನಿರತ್ನ ವಿರುದ್ಧ ಕೊಲೆ ಬೆದರಿಕೆ, ಜಾತಿ ನಿಂದನೆ ಆರೋಪದಲ್ಲಿ ವಯಾಲಿಕಾವಲ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಆದ್ದರಿಂದ ಬಂಧನ ಭೀತಿ ಎದುರಿಸುತ್ತಿದ್ದ ಶಾಸಕ ಮುನಿರತ್ನ ಕೋಲಾರ ಮೂಲಕ ಆಂಧ್ರಪ್ರದೇಶಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದರು. ಕೋಲಾರ ಮೂಲಕ ಕಾರಿನಲ್ಲಿ ತೆರಳುತ್ತಿದ್ದಾಗಲೇ ಖಚಿತ ಮಾಹಿತಿ ಪಡೆದು ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ. ಮೊಬೈಲ್ ಟವರ್ ಲೊಕೇಶನ್ ಟ್ರೇಸ್ ಮಾಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು ಸಿಟಿ ಪೊಲೀಸ್ ಕಮೀಷನರ್ ಸೂಚನೆ ಮೇರೆಗೆ ಮುನಿರತ್ನ ಅವರನ್ನು ವಶಕ್ಕೆ ಪಡೆಯಲಾಗಿದೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದು, ಅವರನ್ನು ಬೆಂಗಳೂರಿಗೆ ಕರೆತರುತ್ತಿದ್ದಾರೆ.
ಘನತ್ಯಾಜ್ಯ ಗುತ್ತಿಗೆ ನೀಡುವ ವಿಚಾರದಲ್ಲಿ ತಿಂಗಳಿಗೆ 36 ಲಕ್ಷ ನೀಡಬೇಕೆಂದು ಶಾಸಕ ಮುನಿರತ್ನ ಡಿಮ್ಯಾಂಡ್ ಇಟ್ಟಿದ್ದು ಅಷ್ಟು ಹಣ ಇಲ್ಲವೆಂದು ಗುತ್ತಿಗೆದಾರ ಬೇಡಿಕೊಳ್ಳುವ ಆಡಿಯೋ ವೈರಲ್ ಆಗಿತ್ತು. ಇದು ಮಾಧ್ಯಮದಲ್ಲಿ ಬರುತ್ತಿದ್ದಂತೆ ಮುನಿರತ್ನ ವಿರುದ್ಧ ಆಕ್ರೋಶ ಕೇಳಿಬಂದಿತ್ತು. ಆನಂತರ, ಸ್ವತಃ ಗುತ್ತಿಗೆದಾರನೇ ಶಾಸಕ ಮುನಿರತ್ನ ಸರ್ಕಾರಿ ಅಧಿಕಾರಿ ವಿಜಯಕುಮಾರ್, ಕಾರ್ಯದರ್ಶಿ ಅಭಿಷೇಕ್, ಶಾಸಕರ ಆಪ್ತ ವಸಂತ ಕುಮಾರ್ ವಿರುದ್ಧ ವಯ್ಯಾಲಿಕಾವಲ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು. ಹೊಲೆಯನ ರೀತಿ ಮಾಡ್ತಿದ್ದೀಯಲ್ಲಾ ಎಂದು ಜಾತಿ ನಿಂದನೆ ಮಾಡಿರುವುದೂ ಆಡಿಯೋದಲ್ಲಿತ್ತು. ಈ ಬಗ್ಗೆ ಅದೇ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿ ಶಾಸಕನನ್ನು ಬಂಧಿಸಿದ್ದಾರೆ.