ವಿಂಗ್ ಕಮಾಂಡರ್ ವಿರುದ್ಧ ಅತ್ಯಾಚಾರದ ಆರೋಪ - ದೂರಿನಲ್ಲಿ ಅಧಿಕಾರಿಯ ಕಾಮುಕತೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಮಹಿಳಾ ಅಧಿಕಾರಿ
Wednesday, September 11, 2024
ಶ್ರೀನಗರ: ಭಾರತೀಯ ವಾಯುಪಡೆಯ ಮಹಿಳಾ ಫೈಯಿಂಗ್ ಅಧಿಕಾರಿಯೊಬ್ಬರು ವಿಂಗ್ ಕಮಾಂಡರ್ ತನ್ನ ಮೇಲೆ ಅತ್ಯಾಚಾರದ ನಡೆಸಿದ್ದಾರೆಂದು ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ವಿಂಗ್ ಕಮಾಂಡರ್ ಅಧಿಕಾರಿಯಿಂದ ತಾನು ಕಳೆದೆರಡು ವರ್ಷಗಳಿಂದ ಲೈಂಗಿಕ ದೌರ್ಜನ್ಯ, ಮಾನಸಿಕ ಕಿರಿಕಿರಿ ಅನುಭವಿಸುತ್ತಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಈ ಇಬ್ಬರೂ ಅಧಿಕಾರಿಗಳನ್ನು ಶ್ರೀನಗರದಲ್ಲಿ ನಿಯೋಜಿಸಲಾಗಿದೆ.
2023 ಡಿಸೆಂಬರ್ 31ರಂದು ಅಧಿಕಾರಿಗಳ ಮೆಸ್‌ನಲ್ಲಿ ಹೊಸ ವರ್ಷದ ಪಾರ್ಟಿ ಆಯೋಜಿಸಲಾಗಿತ್ತು. ಈ ವೇಳೆ ಅವರು ಉಡುಗೊರೆ ಸ್ವೀಕರಿಸಿದ್ದೀರಾ ಎಂದು ಕೇಳಿದರು. ಅದಕ್ಕೆ ತಾನು ಯಾವುದೇ ಗಿಫ್ಟ್ ಸ್ವೀಕರಿಸಿಲ್ಲ ಎಂದು ಹೇಳಿದೆ. ಆಗ ವಿಂಗ್ ಕಮಾಂಡರ್ ಉಡುಗೊರೆ ರೂಮ್‌ನಲ್ಲಿದೆ ಎಂದು ಹೇಳಿ ಅಲ್ಲಿಗೆ ಕರೆದೊಯ್ದರು. ಬಳಿಕ ಬಲವಂತವಾಗಿ ದೈಹಿಕ ಸಂಬಂಧ ಬೆಳೆಸಿ ಕಿರುಕುಳ ನೀಡಿದ್ದಾರೆ ಎಂದು ಮಹಿಳಾ ಅಧಿಕಾರಿ ತಿಳಿಸಿದ್ದಾರೆ.
ವಿಂಗ್ ಕಮಾಂಡರ್ ಅವರ ಈ ವರ್ತನೆಯನ್ನು ಪದೇಪದೆ ನಿರಾಕರಿಸಿ, ಸಾಧ್ಯವಿರುವ ಎಲ್ಲ ರೀತಿಯಲ್ಲಿ ಅದನ್ನು ವಿರೋಧಿಸಲು ಪ್ರಯತ್ನಿಸಿದೆ. ಕೊನೆಗೆ ಆತನನ್ನು ತಳ್ಳಿ ಓಡಿಹೋದೆ. ನನಗೆ ಏನಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಂಡೆ. ಆತಂಕದಲ್ಲಿ ಏನು ಮಾಡಬೇಕೆಂದು ತಿಳಿದಿರಲಿಲ್ಲ. ಈ ಹಿಂದೆಯೂ ಅಂಥಹ ಘಟನೆಗಳು ನಡೆದಿದ್ದರಿಂದ ವರದಿ ಮಾಡುವ ಧೈರ್ಯ ಬರಲಿಲ್ಲ ಎಂದು ಮಹಿಳಾ ಅಧಿಕಾರಿ ತಿಳಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.
ಈ ಘಟನೆಯ ಬಳಿಕ ಕಚೇರಿಗೆ ಬಂದ ವಿಂಗ್ ಕಮಾಂಡರ್ ಏನೂ ಆಗಿಲ್ಲ ಎಂಬಂತೆ ವರ್ತಿಸುತ್ತಿದ್ದರು. ಅವರ ಕಣ್ಣುಗಳಲ್ಲಿ ಯಾವುದೇ ಪಶ್ಚಾತ್ತಾಪವಿರಲಿಲ್ಲ ಎಂದು ದೂರುದಾರೆ ಹೇಳಿದ್ದಾರೆ. ಈ ವಿಚಾರವನ್ನು ಇಬ್ಬರು ಮಹಿಳಾ ಅಧಿಕಾರಿಗಳೊಂದಿಗೆ ಹಂಚಿಕೊಂಡೆ. ಆಗ ಅವರು ನೀಡಿದ ಸೂಚನೆ ಮೇರೆಗೆ ದೂರು ನೀಡಿದ್ದೇನೆ. ಸೇನೆಗೆ ಸೇರಿದ ನನ್ನಂಥಹ ಅವಿವಾಹಿತ ಹುಡುಗಿಯನ್ನು ಈ ರೀತಿ ಕೀಳಾಗಿ ನಡೆಸಿಕೊಂಡಿರುವುದಕ್ಕೆ ಉಂಟಾಗಿರುವ ಮಾನಸಿಕ ಹಿಂಸೆಯನ್ನು ಪದಗಳಲ್ಲಿ ಹೇಳಲಾರೆ ಎಂದಿದ್ದಾರೆ.
ದೂರಿನ ನೀಡಿದ ಬಳಿಕ ಘಟನೆಯ ಬಗ್ಗೆ ತನಿಖೆ ನಡೆಸಲು ಕರ್ನಲ್ ಶ್ರೇಣಿಯ ಅಧಿಕಾರಿಗೆ ಆದೇಶಿಸಲಾಗಿದೆ ಎಂದು ಅವರು ಹೇಳಿದರು. ಜನವರಿಯಲ್ಲಿ ವಿಂಗ್ ಕಮಾಂಡರ್ ಮತ್ತು ತನ್ನ ಹೇಳಿಕೆ ದಾಖಲಿಸಲು ಎರಡು ಬಾರಿ ತನ್ನೊಂದಿಗೆ ಕುಳಿತುಕೊಳ್ಳುವಂತೆ ಮಾಡಲಾಗಿತ್ತು. ಆದರೆ ಹಿರಿಯ ಅಧಿಕಾರಿಯ ಉಪಸ್ಥಿತಿಗೆ ವಿಂಗ್ ಕಮಾಂಡರ್ ಆಕ್ಷೇಪ ವ್ಯಕ್ತಪಡಿಸಿದರು. ನಂತರ ಆಡಳಿತದ ತಪ್ಪುಗಳನ್ನು ಮರೆಮಾಚಲು ತನಿಖೆಯನ್ನು ಮುಚ್ಚಲಾಯಿತು ಎಂದು ಅವರು ತಿಳಿಸಿದ್ದಾರೆ.
ಹಲವು ಬಾರಿ ಮನವಿ ಮಾಡಿದರೂ ಐಸಿ (ಆಂತರಿಕ ಸಮಿತಿ) ತನ್ನ ಕೆಲಸವನ್ನು ಸರಿಯಾಗಿ ಮಾಡಿಲ್ಲ. ಏಕೆಂದರೆ ಫಲಿತಾಂಶವನ್ನು ನಿಷ್ಪಕ್ಷಪಾತವಾಗಿ ಇಡಬೇಕು ಎಂದು ಉನ್ನತ ಮಟ್ಟದಿಂದ ಸೂಚನೆ ಬಂದಿತ್ತು. ಎಲ್ಲರೂ ಅಪರಾಧಿಗೆ ಸಹಾಯ ಮಾಡುತ್ತಿದ್ದರು. ಅಧಿಕಾರಿಗಳು ವಿಂಗ್ ಕಮಾಂಡರ್‌ಗೆ ಸಹಾಯ ಮಾಡಿದ್ದಾರೆ ಎಂದು ದೂರುದಾರರ ಆರೋಪವಾಗಿದೆ. ಮಧ್ಯಂತರ ಪರಿಹಾರಕ್ಕೆ ಮನವಿ ಮಾಡಿ ಹಲವು ಬಾರಿ ರಜೆ ಕೇಳಿದರೂ ಪ್ರತಿ ಬಾರಿಯೂ ರಜೆಯನ್ನು ನಿರಾಕರಿಸಲಾಗಿತ್ತು. ಪ್ರತ್ಯೇಕ ಪೋಸ್ಟಿಂಗ್‌ಗಾಗಿ ಮಾಡಿರುವ ಮನವಿಯನ್ನು ನಿರಾಕರಿಸಲಾಗಿದೆ.