'ಭಟ್ ಎನ್ ಭಟ್' ಯೂಟ್ಯೂಬ್ ಚ್ಯಾನೆಲ್ ಖ್ಯಾತಿಯ ಸುದರ್ಶನ್ ಭಟ್ ಶೀಘ್ರವೇ ದಾಂಪತ್ಯ ಜೀವನಕ್ಕೆ - ಮದುವೆ ಡೇಟ್ ಅನೌನ್ಸ್
ಮಂಗಳೂರು: ಭಟ್ ಎನ್ ಭಟ್ ಯೂಟ್ಯೂಬ್ ಚ್ಯಾನೆಲ್ ಖ್ಯಾತಿಯ ಸುದರ್ಶನ್ ಭಟ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕರಾವಳಿಯ ಸಾಂಪ್ರದಾಯಿಕ ಶೈಲಿಯ ತಮ್ಮ ಅಡುಗೆ ಮೂಲಕವೇ ಕೋಟ್ಯಾಂತರ ಮನೆ ತಲುಪಿರುವ ಸುದರ್ಶನ್, ಸಂಪ್ರದಾಯಿಕ ಅಡುಗೆ ಹೇಳಿಕೊಡುತ್ತ, ಯುವಕರೂ ರುಚಿಕಟ್ಟಾಗಿ ಅಡುಗೆ ಮಾಡ್ಬಹುದು ಎಂಬುದನ್ನು ಮತ್ತೆ ಸಾಬೀತುಪಡಿಸಿದ್ದಾರೆ. ಇದೀಗ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಎಲ್ಲರಿಗೂ ಯಾವ ರೀತಿ ಮಾದರಿಯಾಗಿರಬೇಕು ಎಂಬುದಕ್ಕೂ ರೋಲ್ ಮಾಡೆಲ್ ಆಗಿದ್ದಾರೆ.
ಸದ್ಯವೇ ಅವರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮದುವೆಯ ವಿಚಾರದಲ್ಲೂ ಸುದರ್ಶನ್ ಎಲ್ಲರ ಗಮನ ಸೆಳೆದಿದ್ದಾರೆ. ನೋಡಲು ಸಾಧ್ಯವಾಗದ ಬಟ್ಟೆತೊಟ್ಟ, ವಿದೇಶದಲ್ಲೆಲ್ಲೋ ಪ್ರೀ ವೆಡ್ಡಿಂಗ್ ವಿಡಿಯೋ ಶೂಟ್ ಮಾಡಿಸುವ ಜೋಡಿಯ ಮಧ್ಯೆ ಸುದರ್ಶನ್ ಭಟ್ ಮತ್ತು ಅವರ ಭಾವಿ ಪತ್ನಿ ಕೃತಿಯವರ ವಿಶಿಷ್ಟವೆನಿಸುವ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ವೈರಲ್ ಆಗಿದೆ.
ಸುದರ್ಶನ್ ಭಟ್ ಭಾವೀ ಪತ್ನಿ ಕೃತಿಯವರು ವೃತ್ತಿಯಲ್ಲಿ ಅಧ್ಯಾಪಕಿ. ಸದ್ಯ ಇವರ ಪ್ರೀ ವೆಡ್ಡಿಂಗ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಆಗಿದೆ. ಒಂದು ವಿಡಿಯೋದಲ್ಲಿ ಸುದರ್ಶನ್ ವೃತ್ತಿಗೆ ಆದ್ಯತೆ ನೀಡಿದ್ರೆ ಈ ವಿಡಿಯೋದಲ್ಲಿ ಕೃತಿ ವೃತ್ತಿಗೆ ಮಹತ್ವ ನೀಡಲಾಗಿದೆ. ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಇಂಗ್ಲೀಷ್ ಪಾಠ ಹೇಳುವ ಕೃತಿ ಸ್ಟಾಫ್ ರೂಮ್‌ಗೆ ಬಂದು ಡಬ್ಬ ಹುಡುಕ್ತಾರೆ. ಆದ್ರೆ ಬ್ಯಾಗ್ ನಲ್ಲಿ ಡಬ್ಬ ಇರೋದಿಲ್ಲ. ಈ ವೇಳೆ ಸುದರ್ಶನ್ ಭಟ್ ತಮ್ಮ ಸ್ಟೈಲ್ ಚೇಂಜ್ ಮಾಡಿ ಅಲ್ಲಿಗೆ ಬರ್ತಾರೆ. ತಲೆಗೆ ಮುಂಡಾಸ ಸುತ್ತಿಕೊಂಡು, ಲುಂಗಿಯುಡುತ್ತಿದ್ದ ಸುದರ್ಶನ್ ಭಟ್ ಸ್ಟೈಲ್ ಈ ಬಾರಿ ಚೇಂಜ್ ಆಗಿದೆ. ಪ್ಯಾಂಟ್ ಮತ್ತು ಶರ್ಟ್‌ನಲ್ಲಿ ಡಿಸೇಂಟ್ ಆಗಿ ಕಾಣುವ ಭಟ್ರು, ಬೈಕ್ ಹತ್ತಿ ಶಾಲೆಗೆ ಬರ್ತಾರೆ. ಅವರ ಜೊತೆ ಘಮಘಮಿಸುವ ಡಬ್ಬ ಕೂಡ ಇರುತ್ತೆ. ಅದನ್ನು ನೋಡಿ ಖುಷಿಯಾಗುವ ಕೃತಿ, ಡಬ್ಬದಲ್ಲಿದ್ದ ಪಲಾವ್ ವಾಸನೆ ತೆಗೆದುಕೊಳ್ತಾರೆ. ಕೊನೆಯಲ್ಲಿ ಸುದರ್ಶನ್ ಭಟ್ ಬೈಕ್ ಏರುವ ಕೃತಿ ಮೇಡಂ, ಶಾಲೆಯಿಂದ ಹೊರಗೆ ಹೋಗ್ತಾರೆ.
ವಿಡಿಯೋ ಕೊನೆಯಲ್ಲಿ ಸುದರ್ಶನ್ ಭಟ್ ತಮ್ಮ ಮದುವೆ ಯಾವಾಗ ಎಂಬ ಗುಟ್ಟನ್ನು ಬಿಟ್ಕೊಟ್ಟಿದ್ದಾರೆ. ಇದೇ ಅಕ್ಟೋಬರ್ ನಾಲ್ಕರಂದು ಕೃತಿ ಹಾಗೂ ಸುದರ್ಶನ್ ಭಟ್ ಮದುವೆ ನಡೆಯಲಿದೆ. ಅವರ್ ಡೇಟ್ ಅಂತ 4/10/2024ರ ದಿನಾಂಕ ಬರೆಯಲಾಗಿದೆ.
ಇನ್ಸ್ಟಾಗ್ರಾಂನಲ್ಲಿ ಸುದರ್ಶನ್ ಭಟ್ ಮತ್ತು ಕೃತಿ ಇಬ್ಬರೂ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಭಿನ್ನವಾಗಿ ಮೂಡಿಬಂದಿರುವ ಈ ವಿಡಿಯೋಗೆ ಜನರು ಮೆಚ್ಚುಗೆ ಸೂಚಿಸಿದ್ದಾರೆ. ನಿಮ್ದು ಲವ್ ಮ್ಯಾರೇಜಾ ಅಥವಾ ಅರೆಂಜ್ ಮ್ಯಾರೇಜಾ ಅಂತಾ ಫಾಲೋವರ್ಸ್ ಪ್ರಶ್ನೆ ಕೇಳಿದ್ದಾರೆ. ಭಟ್ರಿಗೆ ಅಡುಗೆ ಮಾಡೋ ಜೊತೆಗೆ ಇನ್ನುಮುಂದೆ ಅಕ್ಕೋರಿಗೆ ಊಟಾನೂ ತಗೊಂಡೋಗೋ ಕೆಲಸ ಎಂದು ಇನ್ನೊಬ್ಬರು ಕಾಲೆಳೆದಿದ್ದಾರೆ. ಒಟ್ಟನಲ್ಲಿ ಸುದರ್ಶನ್ ಭಟ್ ಅವರ ಸ್ಟೈಲ್, ವಿಶಿಷ್ಟ್ಯವಾಗಿ ಮೂಡಿಬಂದ ಪ್ರಿವೆಡ್ಡಿಂಗ್ ವಿಡಿಯೋ ಶೂಟ್ ಗೆ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆಗಸ್ಟ್ 23ರಂದು ಕೃತಿ ಮತ್ತು ಸುದರ್ಶನ್ ಎಂಗೇಜ್ಮೆಂಟ್ ನಡೆದಿದ್ದು, ಜೋಡಿ ಮದುವೆ ತಯಾರಿಯಲ್ಲಿ ಬ್ಯುಸಿಯಿದೆ. ಇಬ್ಬರು ನೂರ್ಕಾಲ ಒಟ್ಟಿಗೆ ಬಾಳಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ. ಹಾಗೆಯೇ ಸುದರ್ಶನ್ ಮತ್ತು ಕೃತಿ ಮದುವೆ ಫೋಟೋ, ವಿಡಿಯೋಗೆ ಕಾಯ್ತಿದ್ದಾರೆ.
ಸುದರ್ಶನ್ ಭಟ್, ಕಾಸರಗೋಡಿದ ಸೀತಂಗೋಳಿಯವರು. ಕೃತಿ ಕಡಬ ತಾಲೂಕಿನ ಬೆಳಂದೂರಿನವರು. ಖಾಸಗಿ ಶಾಲೆ ಶಿಕ್ಷಕಿಯಾಗಿ ಕೆಲಸ ಮಾಡ್ತಿದ್ದಾರೆ. ಭಟ್ ಎನ್ ಭಟ್ ಚಾನೆಲ್ ಯಶಸ್ಸಿಗೆ ಮನೆಯ ಎಲ್ಲ ಸದಸ್ಯರು ಕೆಲಸ ಮಾಡ್ತಿದ್ದಾರೆ. ಕಾನೂನು ಕಲಿತಿರುವ ಸುದರ್ಶನ್ ಭಟ್ ಅಡುಗೆ ಮಾಡಿದ್ರೆ, ಸಹೋದರ ಎಡಿಟಿಂಗ್ ಜವಾಬ್ದಾರಿ ಹೊತ್ತಿದ್ದಾರೆ. ಅಕ್ಕ ಕೂಡ ಸಬ್ ಟೈಟಲ್ ಸೇರಿದಂತೆ ಯುಟ್ಯೂಬ್ ಕೆಲಸದಲ್ಲಿ ಸಹಾಯ ಮಾಡ್ತಾರೆ.