ರಸ್ತೆ ಬದಿಯಲ್ಲಿ ಯುವತಿಯ ಅತ್ಯಾಚಾರ- ಅಲ್ಲೆ ನಿಂತು ವಿಡಿಯೋ ಮಾಡಿದ ದಾರಿಹೋಕರು!
ಭೋಪಾಲ್: ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಹಾಡಹಗಲೇ ಕಾಮುಕನೊಬ್ಬ ಚಿಂದಿ ಆಯುವ ಮಹಿಳೆ ಮೇಲೆ ಅತ್ಯಾಚಾರ ಎಸಗಿರುವ ದಾರುಣ ಘಟನೆ ನಡೆದಿದೆ.
ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರ ತವರು ಉಜ್ಜಯಿನಿಯಲ್ಲಿ ವ್ಯಕ್ತಿಯೊಬ್ಬ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅದಕ್ಕಿಂತ ಹೀನಕೃತ್ಯ ಎಂದರೆ ದಾರಿಹೋಕರು ದೌರ್ಜನ್ಯ ತಡೆಯುವ ಬದಲಾಗಿ ವಿಡಿಯೊ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಉಜ್ಜಯಿನಿಯ ಜನನಿಬಿಡ ಪ್ರದೇಶಗಳಲ್ಲಿ ಒಂದಾದ ಕೊಯ್ದಾ ಫಾಟಕ್ ಪ್ರದೇಶದಲ್ಲಿ ಬುಧವಾರ ಕೃತ್ಯ ನಡೆದಿದೆ. ವೈರಲ್ ಆದ ವಿಡಿಯೊ ಆಧರಿಸಿ ಆರೋಪಿ ಲೋಕೇಶ್‌ನನ್ನು ಉಜ್ಜಯಿನಿ ಪೊಲೀಸರು ಬಂಧಿಸಿದ್ದಾರೆ.
"ಉಜ್ಜಯಿನಿಯಲ್ಲಿ ಚಿಂದಿ ಆಯುವ ಕೆಲಸ ಮಾಡಿಕೊಂಡಿದ್ದ ಮಹಿಳೆಯನ್ನು ಭೇಟಿಯಾದ ಅದೇ ಪ್ರದೇಶದ ಹಣ್ಣು ವ್ಯಾಪಾರಿ ಲೋಕೇಶ್ ಮದುವೆ ಯಾಗುವುದಾಗಿ ನಂಬಿಸಿ ಜತೆಗೆ ಕರೆದೊಯ್ದಿದ್ದಾನೆ. ಸಂತ್ರಸ್ತೆಗೆ ಬಲವಂತವಾಗಿ ಮದ್ಯಪಾನ ಮಾಡಿಸಿದ ಆರೋಪಿ, ಅರೆಪ್ರಜ್ಞಾವಸ್ಥೆಯಲ್ಲಿದ್ದ ಮಹಿಳೆ ಮೇಲೆ ಪಾದಚಾರಿ ಮಾರ್ಗದಲ್ಲೇ ಅತ್ಯಾಚಾರ ಎಸಗಿದ್ದಾನೆ. ಕೃತ್ಯ ತಡೆಯಬೇಕಿದ್ದ ದಾರಿಹೋಕರು, ವಿಡಿಯೊ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ,'' ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕೃತ್ಯ ಖಂಡಿಸಿರುವ ಕಾಂಗ್ರೆಸ್ ನಾಯಕರು, 'ಬಿಜೆಪಿ ಆಡಳಿತದಲ್ಲಿ ಹಾಡಹಗಲೇ ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ,'' ಎಂದು ದೂರಿದ್ದಾರೆ. "ಉಜ್ಜಯಿನಿಯಂತಹ ಪುಣ್ಯ ಭೂಮಿಯಲ್ಲಿ ಮಹಿಳೆಯ ಮಾನ ನಡು ರಸ್ತೆಯಲ್ಲಿ ಹರಾಜಾಗಿದೆ. ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲೇ ಮಹಿಳೆಗೆ ರಕ್ಷಣೆ ಇಲ್ಲದಿರುವಾಗ ರಾಜ್ಯದ ಇತರೆ ಕಡೆ ಯಾವ ಸ್ಥಿತಿ ಇರಬಹುದು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಮಾನ ಮರ್ಯಾದೆ ಇದ್ದರೆ ಸಿಎಂ ಮೋಹನ್ ಯಾದವ್ ರಾಜೀನಾಮೆ ನೀಡಲಿ,'" ಎಂದು ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜೀತು ಪಟ್ಟಾರಿ ಆಗ್ರಹಿಸಿದಾರೆ.