ಬೆಂಗಳೂರು: 11ನೇ ಸೀಸನ್ ನಂತರ ಬಿಗ್‌ಬಾಸ್ ನಿರೂಪಣೆಗೆ ಸುದೀಪ್ ವಿದಾಯ ಘೋಷಿಸಿದ ಸುದೀಪ್
Monday, October 14, 2024
ಬೆಂಗಳೂರು: ಕನ್ನಡದ ಪ್ರಸಿದ್ಧ ರಿಯಾಲಿಟಿ ಶೋ ಬಿಗ್ ಬಾಸ್ ಕಾರ್ಯಕ್ರಮದ ಮೊದಲ ಸೀಸನ್‌ನಿಂದ ಈವರೆಗೂ ಕಿಚ್ಚ ಸುದೀಪ್ ಅವರೇ ನಿರೂಪಣೆ ಮಾಡಿದ್ದಾರೆ. ಇದೀಗ 11ನೇ ಸೀಸನ್ ನಡೆಯುತ್ತಿದೆ. ಈ ಸೀಸನ್ ಬಳಿಕ ಕಾರ್ಯಕ್ರಮದ ನಿರೂಪಕನ ಸ್ಥಾನಕ್ಕೆ ವಿದಾಯ ಹಾಡುವುವುದಾಗಿ ಸ್ವತಃ ಸುದೀಪ್ ಅವರೇ ಘೋಷಿಸಿದ್ದಾರೆ.
ಈ ಕುರಿತು ತಮ್ಮ ಅಧಿಕೃತ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಸುದೀಪ್, 'ಬಿಗ್ ಬಾಸ್ ಕನ್ನಡ 11 ಕಾರ್ಯಕ್ರಮಕ್ಕೆ ತೋರಿದ ಉತ್ತಮ ಪ್ರತಿಕ್ರಿಯೆಗೆ ಎಲ್ಲರಿಗೂ ಧನ್ಯವಾದಗಳು. ಕಾರ್ಯಕ್ರಮಕ್ಕೆ ದೊರೆತ ಟಿಆರ್‌ಪಿ ನನ್ನ ಬಗ್ಗೆ ಮತ್ತು ಈ ಶೋ ಬಗ್ಗೆ ಎಷ್ಟು ಪ್ರೀತಿ ಇಟ್ಟುಕೊಂಡಿದ್ದೀರಿ ಎಂಬುದನ್ನು ತಿಳಿಸುತ್ತದೆ. ಈ 10+ 1 ವರ್ಷಗಳ ಪಯಣವನ್ನು ಅಂತ್ಯಗೊಳಿಸಿ ಹೊಸ ಹಾದಿಯತ್ತ ಸಾಗುವ ಸಮಯವಾಗಿದೆ. ನಿರೂಪಕನಾಗಿ ಇದು ನನ್ನ ಕೊನೆಯ ಬಿಗ್ ಬಾಸ್. ಇಷ್ಟು ವರ್ಷಗಳ ಕಾಲ ಬಿಗ್ ಬಾಸ್ ಕಾರ್ಯಕ್ರಮವನ್ನು ನೋಡಿದ ನೀವು ಮತ್ತು ಕಲರ್ಸ್‌ನವರು ನನ್ನ ನಿರ್ಧಾರವನ್ನು ಗೌರವಿಸುತ್ತೀರಿ ಎಂದು ನಂಬಿದ್ದೇನೆ. ಈ ನಿರ್ಧಾರ ಅತ್ಯುತ್ತಮ ಆಗುವಂತೆ ಮಾಡೋಣ. ನಿಮ್ಮೆಲ್ಲರನ್ನೂ ಮನರಂಜಿಸುತ್ತೇನೆ' ಎಂದು ಬರೆದುಕೊಂಡಿದ್ದಾರೆ.
11ನೇ ಸೀಸನ್‌ನ ಆರಂಭದಲ್ಲಿ ಸುದೀಪ್ ಬದಲು ಹೊಸ ನಿರೂಪಕರು ಬರುತ್ತಾರೆ ಎಂಬ ಸುದ್ದಿ ಹಬ್ಬಿತ್ತಾದರೂ ಕೊನೆಯಲ್ಲಿ ಅವರೇ ನಿರೂಪಣೆ ಮಾಡುವುದಾಗಿ ಬಹಿರಂಗವಾಗಿತ್ತು. ಆದರೆ ಈಗ, ನಿರೂಪಕನಾಗಿ ಮುಂದಿನ ಸೀಸನ್‌ಗಳಲ್ಲಿ ತಾವು ಮುಂದುವರಿಯುವುದಿಲ್ಲ ಎಂದು ಅಧಿಕೃತ ಘೋಷಣೆ ಮಾಡುವ ಮೂಲಕ ಸುದೀಪ್ ಅಚ್ಚರಿ ನೀಡಿದ್ದಾರೆ.