ಬಿಗ್‌ಬಾಸ್ 11ನೇ ಆವೃತ್ತಿ ಹೆಸರಿಗಷ್ಟೇ ಕನ್ನಡದ ಶೋ: ತಮಿಳು, ಮರಾಠಿಗರ ಕಪಿಮುಷ್ಟಿಗೆ ಬೇಸತ್ತ ಕಿಚ್ಚ ಸುದೀಪ್
ಬೆಂಗಳೂರು: ಕನ್ನಡದ ಬಿಗ್ ಬಾಸ್ 11ನೇ ಆವೃತ್ತಿ ಶುರುವಾದ ಬಳಿಕ ಒಂದಲ್ಲಾ ಒಂದು ಕಾರಣಕ್ಕೆ ಸುದ್ದಿಯಾಗುತ್ತಿದೆ. ಸ್ವರ್ಗ-ನರಕ ಕಾನ್ಸೆಪ್ಟ್‌ನ ಬಗ್ಗೆ ಬಂದ ಆಕ್ಷೇಪದಿಂದ ಶೋ ಮಧ್ಯದಲ್ಲಿಯೇ ಇದನ್ನು ಕೈಬಿಡಲಾಗಿದೆ. ಇದರ ಬೆನ್ನಲ್ಲೇ ಕಿಚ್ಚ ಸುದೀಪ್ ಈ ಶೋನಿಂದ ಹೊರಬರುವ ತೀರ್ಮಾನವನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಟ್ವಿಟರ್‌ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಕಿಚ್ಚ ಸುದೀಪ್, 11ನೇ ಆವೃತ್ತಿಯ ಅಂತ್ಯಕ್ಕೆ ಬಿಗ್‌ಬಾಸ್‌ನಲ್ಲಿ ತಮ್ಮ ಪ್ರಯಾಣವನ್ನು ಕೊನೆ ಮಾಡಲಿದ್ದೇನೆ ಎಂದಿದ್ದಾರೆ.
ವಿಶೇಷವೆಂದರೆ, ಈ ಬಾರಿಯ ಶೋ ಆರಂಭದಿಂದಲೂ ಕಿಚ್ಚ ಸುದೀಪ್ ಅವರಲ್ಲಿ ಎಂದಿನ ಚಾರ್ಮ್ ಇರಲಿಲ್ಲ. ಸ್ಪರ್ಧಿಗಳ ಆಟಾಟೋಪಕ್ಕೆ ಎಚ್ಚರಿಕೆ ನೀಡುವ ಕೆಲಸವನ್ನೂ ಮಾಡುತ್ತಿರಲಿಲ್ಲ. ಇದರ ಬೆನ್ನಲ್ಲೇ ಅವರು ಶೋ ತೊರೆಯುವ ನಿರ್ಧಾರ ಮಾಡಿದ್ದೇಕೆ ಎನ್ನುವ ಚರ್ಚೆ ಶುರುವಾಗಿದೆ. ಮೂಲಗಳ ಪ್ರಕಾರ ಇದಕ್ಕೆ ಹಲವು ಕಾರಣಗಳಿವೆ. ಅದರಲ್ಲೂ ಹೆಸರಿಗಷ್ಟೇ ಇದು ಕನ್ನಡದ ಶೋ ಆಗಿದ್ದು, ಇಡೀ ಶೋನ ಹ್ಯಾಂಡಲ್ ಮಾಡುತ್ತಿರುವವರು ತಮಿಳು ಹಾಗೂ ಮರಾಠಿಗರು ಆಗಿರುವ ಕಾರಣ ಸುದೀಪ್ ಈ ನಿರ್ಧಾರ ಮಾಡಿದ್ದಾರೆ.
ಮೂಲಗಳ ಪ್ರಕಾರ, ಬಿಗ್ ಬಾಸ್ ಶೋನಲ್ಲಿ ಆಗುತ್ತಿರುವ ಬದಲಾವಣೆಗಳು ಹಾಗೂ ಬೆಳವಣಿಗೆಗಳ ಬಗ್ಗೆ ಕಿಚ್ಚ ಸುದೀಪ್‌ಗೆ ದೊಡ್ಡ ಮಟ್ಟದ ಅಸಮಾಧಾನ ಉಂಟಾಗಿದೆ. ಕನ್ನಡತನಕ್ಕೆ ತಕ್ಕಂತೆ ಶೋನಲ್ಲಿ ಸಣ್ಣಪುಟ್ಟ ಬದಲಾವಣೆಗೂ ಒಪ್ಪದಿದ್ದರಿಂದ ಸುದೀಪ್‌ಗೆ ಬೇಸರವಾಗಿದೆ. ಇದೇ ಕಾರಣಕ್ಕೆ ಅವರು ಬಿಗ್‌ಬಾಸ್ ತೊರೆಯಲಿದ್ದಾರೆ ಎಂಬ ಮಾಹಿತಿ ಬಂದಿದೆ.
ಹಿಂದಿಯಲ್ಲಿ ಇದ್ದಂತೆ, ತೆಲುಗು-ತಮಿಳಿನಲ್ಲಿ ಇದ್ದಂತೆ ಕನ್ನಡದಲ್ಲಿ ಬಿಗ್ ಬಾಸ್ ಮಾಡಲು ಆಗೋದಿಲ್ಲ. ಸಣ್ಣ ಪುಟ್ಟ ಬದಲಾವಣೆಗಳು ಮಾಡಬೇಕಾಗುತ್ತದೆ. ಇದಕ್ಕೆ ಶೋನ ಆಯೋಜಕರು ಒಪ್ಪುತ್ತಿಲ್ಲ. ಇದು ಹೆಸರಿಗಷ್ಟೇ ಕಲರ್ಸ್ ಕನ್ನಡದ ರಿಯಾಲಿಟಿ ಶೋ ಆಗಿದ್ದು, ತಮಿಳು ಹಾಗೂ ಮರಾಠಿಗರ ಕಪಿಮುಷ್ಠಿಯಲ್ಲಿ ಈ ಬಾರಿಯ ಬಿಗ್ ಬಾಸ್ ಶೋ ನಡೆಯುತ್ತಿದೆ ಎನ್ನುವ ಆರೋಪಗಳಿದೆ.
ಶೋ ಡೈರೆಕ್ಟರ್ ಪ್ರಕಾಶ್ ತಮಿಳು ವ್ಯಕ್ತಿ. ಶೋ ಆಯೋಜಕಿ ಸುಶ್ಮಾ ಮರಾಠಿ ಮಹಿಳೆ. ಈ ಬಾರಿಯ ಶೋನಲ್ಲಿ ಕನ್ನಡ ತನಕ್ಕೆ ಧಕ್ಕೆ ಉಂಟಾಗಿರುವ ಆರೋಪವಿದೆ. ಸಾಮಾನ್ಯವಾಗಿ ಮನೆಯ ಒಳಗೆ ಕನ್ನಡ ಮಾತನಾಡಬೇಕು ಅನ್ನೋದು ಕಡ್ಡಾಯ ನಿಯಮ. ಈ ಬಾರಿ ಸ್ವತಃ ಬಿಗ್‌ಬಾಸ್‌ನಿಂದ ಕನಿಷ್ಠ ಅಂಥದ್ದೊಂದು ಎಚ್ಚರಿಕೆ ಕೂಡ ಸ್ಪರ್ಧಿಗಳಿಗೆ ಸಿಕ್ಕಿಲ್ಲ. ಕಂಟೆಸ್ಟೆಂಟ್‌ಗಳಿಗೆ ಕನ್ನಡ ಬಳಕೆಗೆ ಸುದೀಪ್ ಮನವಿ ಮಾಡಿದ್ದರಂತೆ. ಆದರೂ ಸಹ ಕಂಟೆಸ್ಟೆಂಟ್ಸ್ ಇಂಗ್ಲಿಷ್ ಭಾಷೆಯನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಇದು ಅವರ ಆಕ್ರೋಶಕ್ಕೆ ಕಾರಣವಾಗಿದೆ.
ನರಕ ಕಾನ್ಸೆಪ್ಟ್ ಅಂದಾಗ ನರಕದ ಭಾಗದಲ್ಲಿ ಮಹಿಳೆಯರಿಗೆ ಟಾಯ್ಲೆಟ್ ವ್ಯವಸ್ಥೆ ಮಾಡಲು ಕಿಚ್ಚ ಸುದೀಪ್ ಹೇಳಿದ್ದರು. ಕಿಚ್ಚನ ಮಾತಿಗೆ ಕ್ಯಾರೆ ಅನ್ನದ ಬಿಗ್ ಬಾಸ್ ಆಯೋಜಕರು ಅದಕ್ಕೆ ವ್ಯವಸ್ಥೆ ಕಲ್ಪಿಸಿರಲಿಲ್ಲ. ನರಕದಲ್ಲಿನ ಸ್ಪರ್ಧಿಗಳನ್ನು ವೀಕೆಂಡ್ ಎಪಿಸೋಡ್ ವೇಳೆ ಎಲ್ಲರ ಜೊತೆ ಒಂದಾಗಿ ಕೂರಿಸಿ ಮಾತನಾಡಿಸಬೇಕು ಎಂದು ಸುದೀಪ್ ತಿಳಿಸಿದ್ದರಂತೆ. ಇದೂ ಕೂಡ ಕಿಚ್ಚನ ಮಾತಿಗೆ ವಿರುದ್ಧವಾಗಿಯೇ ನಡೆದಿದೆ.
ಸ್ಪರ್ಧಿಗಳಿಗೆ ಬರುವ ಲೀಗಲ್ ನೋಟಿಸ್ ಗಳ ಬಗ್ಗೆಯೂ ಸುದೀಪ್ ಗೆ ಅಸಮಾಧಾನ ಉಂಟಾಗಿದೆ. ಅದಕ್ಕೆ ಉತ್ತರ ನೀಡುವ ಲೀಗಲ್ ಟೀಮ್ ಸ್ಟ್ರಾಂಗ್ ಆಗಿಲ್ಲ. ಕ್ರಿಯೇಟಿವ್ ಪೋರ್ಷನ್ ಗಷ್ಟೇ ಕಲರ್ಸ್ ಕನ್ನಡ ಸೀಮಿತವಾಗಿದ್ದು, ಕಮರ್ಷಿಯಲ್ ನಿರ್ಧಾರಗಳನ್ನ ತೆಗೆದುಕೊಳ್ಳೋದು ಮುಂಬೈ ಮೂಲದ ಎಂಡಮಾಲ್ ಕಂಪನಿಯ ಕೈಯಲ್ಲಿದೆ.
ಇನ್ನು A23 ರಮ್ಮಿ ಬಿಗ್ ಬಾಸ್ ಶೋಗೆ ಕಮರ್ಷಿಯಲ್ ಪಾರ್ಟನರ್ ಆಗಿದ್ದು, ಶೋ ಆರಾಂಭಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲೇ ಇದಕ್ಕೆ ವಿರೋಧ ವ್ಯಕ್ತವಾಗಿತ್ತು. ಇದನ್ನ ಡಿಸ್ಪ್ಲೇ ಬೋರ್ಡ್ ನಲ್ಲಿ ಕೆಳಗಡೆ ಬಳಸಲು ಕಿಚ್ಚ ಸಲಹೆ ನೀಡಿದ್ದರಂತೆ. ರಮ್ಮಿಯನ್ನ ಸುದೀಪ್ ಅವರೇ ಪದೇ ಪದೆ ಉಚ್ಚರಿಸೋ ಮೂಲಕ ಸಮಾಜಕ್ಕೆ ಕೆಟ್ಟ ಸಂದೇಶವೊಂದು ಹೋದ ಗಿಲ್ಟ್ ಕಾಡುತ್ತಿದೆಯಂತೆ. ಹಾಗಾಗಿ ಬದಲಾವಣೆಗೆ ಸುದೀಪ್ ಮನವಿ ಮಾಡಿದ್ದರಂತೆ. ಆದರೆ ಅದಕ್ಕೂ ಕ್ಯಾರೆ ಎನ್ನಲಿಲ್ಲ.
ಈ ಎಲ್ಲಾ ಕಾರಣಗಳಿಂದಾಗಿ ಸುದೀಪ್ ಇನ್ನು ಮುಂದೆ ಬಿಗ್ ಬಾಸ್ ನಡೆಸದೇ ಇರಲು ತೀರ್ಮಾನ ಮಾಡಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.ಇದರ ಬಗ್ಗೆ ಟ್ವೀಟ್ ಮಾಡಿದ್ದ ರೂಪೇಶ್ ರಾಜಣ್ಣ ಕೂಡ, ಕನ್ನಡ ಬಳಕೆಯ ವಿಚಾರವಾಗಿ ಸುದೀಪ್‌ಗೆ ಬೇಸರವಾಗಿದೆ ಅದಕ್ಕಾಗಿ ಈ ನಿರ್ಧಾರ ಮಾಡಿದ್ದಾರೆ ಎಂದು ಫೇಸ್‌ಬುಕ್ ಲೈವ್‌ನಲ್ಲಿ ಹೇಳಿದ್ದರು.