ಅಭಿಮಾನಿಗಳಿಗೆ ಐಫೋನ್15 ಗಿಫ್ಟ್ - ಖ್ಯಾತ ಯೂಟ್ಯೂಬರ್ ಪೂಜಾ ಕೆ ರಾಜ್ ಹೆಸರಿನಲ್ಲಿ ಸೈಬರ್ ವಂಚಕರಿಂದ ಹಗಲು ದರೋಡೆ
Friday, October 4, 2024
ಬೆಂಗಳೂರು: ಜನಪ್ರಿಯ ಕನ್ನಡ ಯೂಟ್ಯೂಬರ್‌ಗಳಾದ ಸತೀಶ್ ಈರೇಗೌಡ್ರು ಮತ್ತು ಅವರ ಪತ್ನಿ ಪೂಜಾ ಕೆ ರಾಜ್ ಆನ್‌ಲೈನ್ ಸ್ಕ್ಯಾಮ್ ಅನ್ನು ಎದುರಿಸುತ್ತಿದ್ದಾರೆ. ಸೈಬರ್ ವಂಚಕರು ತಮ್ಮ ಹೆಸರನ್ನು ದುರ್ಬಳಕೆ ಮಾಡಿಕೊಂಡು ಅಮಾಯಕರಿಗೆ ಸಂದೇಶ ಮೋಸ ಮಾಡುತ್ತಿದ್ದಾರೆ ಎಂದು ಈಗಾಗಲೆ ಒಂದೆರಡು ಸಲ ವಿಡಿಯೋ ಮಾಡಿ ಜನರಿಗೆ ಎಚ್ಚರಿಕೆ ನೀಡಿದ್ದರು. ಆದರೂ ಮೋಸ ಮಾಡುವವರ ಮೆಸೇಜ್ ನೋಡಿ ಕೆಲವರು ಮರುಳಾಗಿ ಹಣ ಕಳೆದುಕೊಂಡಿದ್ದಾರೆ. ಆದ್ದರಿಂದ ಹಣ ಕಳೆದುಕೊಂಡಿರುವ ವ್ಯಕ್ತಿಯನ್ನು ಫೋನ್ ಕಾಲ್‌ಗೆ ತೆಗೆದುಕೊಂಡು ಯೂಟ್ಯೂಬ್‌ನಲ್ಲಿ ಸಂಪೂರ್ಣ ಘಟನೆಯ ವಿಡಿಯೋ ಅಪ್ಲೋಡ್ ಮಾಡಿದ್ದಾರೆ.
ಪೂಜಾ ಕೆ ಆರ್ ಹೆಸರಿನಲ್ಲಿ ಕೆಲವು ದುಷ್ಕರ್ಮಿಗಳು ನಕಲಿ ಖಾತೆ ತೆರೆದಿದ್ದಾರೆ. ಪೂಜಾ ಮತ್ತು ಸತೀಶ್ ಅಕೌಂಟ್‌ನಲ್ಲಿ ರೆಗ್ಯೂಲರ್ ಆಗಿ ಕಾಮೆಂಟ್ ಮತ್ತು ಲೈಕ್ ಮಾಡುವವರನ್ನು ಗುರಿಯಾಗಿಟ್ಟುಕೊಂಡು ಮೆಸೇಜ್ ಮಾಡಿದ್ದಾರೆ. ನಮ್ಮನ್ನು ಇಷ್ಟು ವರ್ಷದಿಂದ ಸಪೋರ್ಟ್ ಮಾಡುತ್ತಿರುವುದಕ್ಕೆ ವಂದನೆಗಳು ಅಲ್ಲದೆ ನಿಮ್ಮ ಪ್ರೀತಿಗೆ ನಾವು ಗೌರವ ಕೊಡಬೇಕು ಎಂದು ಐ ಪೋನ್ ಗಿಫ್ಟ್ ಮಾಡುತ್ತಿದ್ದೀವಿ ಎಂದು ಮಹಿಳೆಯೊಬ್ಬರಿಗೆ ದುಷ್ಕರ್ಮಿಗಳು ಮೆಸೇಜ್ ಮಾಡಿದ್ದಾರೆ. ಇದನ್ನು ನಂಬಿದ ಮಹಿಳೆ ಪುಂಡರ ಮೆಸೇಜ್‌ಗೆ ರಿಪ್ಲೈ ಮಾಡಿದ್ದಾರೆ. ಅವರು ಕೇಳಿದಂತೆ ಹಣ ಕಳುಹಿಸಿದ್ದಾರೆ. ಯಾವಾಗ ದಿನದಿಂದ ದಿನಕ್ಕೆ ಹೆಚ್ಚಿಗೆ ಹಣ ಕೇಳಲು ಶುರು ಮಾಡಿದ್ದಾರೆ ಆಗ ಈ ಮಹಿಳೆಗೆ ಅನುಮಾನ ಶುರುವಾಗಿದೆ. ನಾನು ಹಣ ಕಳುಹಿಸುವುದಿಲ್ಲ ಪ್ಯಾಕೇಜ್ ಬೇಡ ಎಂದು ನಿರಾಕರಿಸಿದಾಗ ದಯವಿಟ್ಟು ನನ್ನನ್ನು ನಂಬಿ ಎಂದು ಮೆಸೇಜ್ ಮಾಡಿದ್ದಾರೆ. ಘಟನೆ ಗಂಭೀರವಾಗುತ್ತಿದ್ದಂತೆ ಪೂಜಾ ಕೆ ರಾಜ್ ಮತ್ತು ಸತೀಶ್ ಈರೇಗೌಡರನ್ನು ಸಂಪರ್ಕ ಮಾಡಿ ಸಂಪೂರ್ಣ ಘಟನೆಯನ್ನು ಹಂಚಿಕೊಂಡಿದ್ದಾರೆ.
ಸತೀಶ್ ಈರೇಗೌಡರ ಸಲಹೆ ಮೇಲೆ ಮಹಿಳೆ ದೂರು ನೀಡಲು ಮುಂದಾಗಿದ್ದಾರೆ.ಈ ರೀತಿ ದರೋಡೆ ಹಲವು ದಿನಗಳಿಂದೆ ನಡೆಯುತ್ತಿದ್ದ ಕಾರಣ ಯೂಟ್ಯೂಬ್ ದಂಪತಿಗಳು ಆಗಾಗ ವಿಡಿಯೋ ಮಾಡಿ ಜನರಿಗೆ ಅರಿವು ಮೂಡಿಸುತ್ತಿದ್ದರು. ಆದರೂ ಜನರು ನಂಬಿ ಮೋಸ ಹೋಗಿದ್ದಾರೆ. ಈ ರೀತಿ ಘಟನೆಗಳು ಇಲ್ಲಿಗೆ ನಿಲ್ಲಬೇಕು ಎಂದು ಸತೀಶ್ ಈರೇಗೌಡರು ಕೂಡ ಸೈಬರ್ ಕ್ರೈಂನಲ್ಲಿ ದೂರು ನೀಡಲು ಮುಂದಾಗಿದ್ದಾರೆ.