ದೀಪಾವಳಿಗೆ ಮುನ್ನವೇ 1.85ಕೋಟಿ ಫಲಾನುಭವಿಗಳಿಗೆ ಉಚಿತವಾಗಿ ದೊರಕಲಿದೆ ಎಲ್‌ಪಿಜಿ ಸಿಲಿಂಡರ್
ನವದೆಹಲಿ: ದೀಪಾವಳಿಗೆ ಮುನ್ನವೇ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ ಮಹಿಳೆಯರಿಗೆ ಬಂಪರ್ ಕೊಡುಗೆಯನ್ನು ಘೋಷಿಸಿದೆ. ದೀಪಾವಳಿಗೆ ಉತ್ತರ ಪ್ರದೇಶ ಸರ್ಕಾರ ಪ್ರಧಾನಮಂತ್ರಿ ಉಜ್ವಲಾ ಯೋಜನೆಯಡಿ 1.85 ಕೋಟಿ ಫಲಾನುಭವಿಗಳಿಗೆ ಉಚಿತವಾಗಿ ಎಲ್‌ಪಿಜಿ ಸಿಲಿಂಡರ್ ನೀಡಲಾಗುತ್ತದೆ ಎಂದು ಘೋಷಣೆ ಮಾಡಿದೆ.
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಉಜ್ವಲಾ ಯೋಜನೆಯಡಿ ಹೆಸರು ದಾಖಲಿಸಿಕೊಂಡಿರುವ ಎಲ್ಲಾ ಲಾಭಾರ್ಥಿಗಳಿಗೆ ಯಾವುದೇ ಶುಲ್ಕವಿಲ್ಲದೇ ರಾಜ್ಯ ಸರ್ಕಾರದಿಂದಲೇ ಎಲ್‌ಪಿಜಿ ಸಿಲಿಂಡರ್ ವಿತರಣೆ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಎಲ್ಲಾ ಪ್ರಕ್ರಿಯೆಗಳನ್ನು ಸರಿಯಾದ ಸಮಯಕ್ಕೆ ಪೂರೈಸಬೇಕು. ದೀಪಾವಳಿಗೆ ಮೊದಲೇ ಎಲ್ಲಾ ಫಲಾನುಭವಿಗಳ ಮನೆಗಳಿಗೆ ಎಲ್‌ಪಿಜಿ ಸಿಲಿಂಡರ್ ತಲುಪಿರಬೇಕು ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಕಳೆದ ವರ್ಷವೂ ಸಹ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ದೀಪಾವಳಿಗೆ ಉಚಿತ ಎಲ್‌ಪಿಜಿ ಸಿಲಿಂಡರ್ ತಲುಪಿಸಿತ್ತು. ಕಳೆದ ವರ್ಷ 85 ಲಕ್ಷವಿದ್ದ ಫಲಾನುಭವಿಗಳ ಸಂಖ್ಯೆ ಈ ಬಾರಿ 1.85 ಕೋಟಿಗೆ ಏರಿಕೆಯಾಗಿದೆ. ಇದು ಕೇವಲ ಪ್ರಧಾನಮಂತ್ರಿ ಉಜ್ವಲಾ ಯೋಜನೆಯಡಿ ಹೆಸರು ದಾಖಲಿಸಿಕೊಂಡ ಮಹಿಳೆಯರಿಗೆ ಮಾತ್ರ ಉಚಿತ ಸಿಲಿಂಡರ್ ಸಿಗುತ್ತದೆ.
ಪ್ರಧಾನಮಂತ್ರಿ ಉಜ್ವಲಾ ಯೋಜನೆಯಡಿ ಎಲ್‌ಪಿಜಿ ಸಿಲಿಂಡರ್ ಮೇಲೆ ಕೇಂದ್ರ ಸರ್ಕಾರ 300 ರೂಪಾಯಿ ಸಬ್ಸಿಡಿಯನ್ನು ನೀಡುತ್ತಿದೆ. ಮೊದಲು ಫಲಾನುಭವಿಗಳು ಪೂರ್ಣ ಹಣ ನೀಡಿ ಸಿಲಿಂಡರ್ ಖರೀದಿಸಬೇಕು. ನಂತರ ಸಬ್ಸಿಡಿ ಹಣವನ್ನು ಸರ್ಕಾರ ಫಲಾನುಭವಿಯ ಖಾತೆಗೆ ಜಮೆ ಮಾಡುತ್ತದೆ. ಫಲಾನುಭವಿಗಳು ಕಡ್ಡಾಯವಾಗಿ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿರಬೇಕು.
ಅಕ್ಟೋಬರ್ ತಿಂಗಳಲ್ಲಿ ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ಬೆಲೆಯನ್ನು 45 ರಿಂದ 48 ರೂ.ವರೆಗೆ ಏರಿಕೆಯಾಗಿತ್ತು. ಬೆಂಗಳೂರಿನಲ್ಲಿಯೂ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆಯಲ್ಲಿ 48 ರೂಪಾಯಿ ಏರಿಕೆಯಾಗಿದೆ. ಸದ್ಯ ಉತ್ತರ ಪ್ರದೇಶದ ರಾಜಧಾನಿ ಲಕ್ನೋನಲ್ಲಿ 19 ಕೆಜಿ ಸಿಲಿಂಡರ್ ಬೆಲೆ 1,861 ರೂಪಾಯಿ, 14 ಕೆಜಿ ಸಿಲಿಂಡರ್ ಬೆಲೆ 840.50 ರೂಪಾಯಿ ಆಗಿದೆ. ಇದೀಗ ರಾಜ್ಯ ಸರ್ಕಾರದ ಘೋಷಣೆಯಿಂದ 1.85 ಕೋಟಿ ಜನರಿಗೆ 840 ರೂ. ಹಣ ಉಳಿತಾಯವಾಗಲಿದೆ.