ಕೇರಳದ 25ಕೋಟಿ ರೂ. ಬಂಪರ್ ಲಾಟರಿ ಜಾಕ್‌ಪಾಟ್ ಹೊಡೆದ ಮಂಡ್ಯದ ಮೆಕಾನಿಕ್ - ಅಲ್ತಾಫ್ ಕೈಗೆ ಸಿಗುವ ಹಣವೆಷ್ಟು ಗೊತ್ತೇ?
ಮಂಡ್ಯ: ಇಲ್ಲಿನ ಪಾಂಡವಪುರದ ಬೈಕ್ ಮೆಕ್ಯಾನಿಕ್ ಅಲ್ತಾಫ್ ಕೇರಳದ ತಿರುವೋಣಂನ 25 ಕೋಟಿ ರೂ. ಮೌಲ್ಯದ ಬಂಪರ್ ಲಾಟರಿ ಗೆದ್ದಿದ್ದಾರೆ. ತಮ್ಮ ಪರಿಚಿತರ ಮೂಲಕ ಖರೀದಿಸಿದ್ದ ಲಾಟರಿ ಟಿಕೆಟ್ ಇವರ ಬದುಕನ್ನೇ ಬದಲಿಸಿದೆ. ತೆರಿಗೆ ಮೊತ್ತ ಕಡಿತವಾಗಿ 12 ಕೋಟಿ ರೂ. ಲಾಟರಿ ಹಣವನ್ನು ಅಲ್ತಾಫ್ ಪಡೆಯಲಿದ್ದಾರೆ.
ಲಾಟರಿ ಗೆದ್ದ ವಿಚಾರ ತಿಳಿಯುತ್ತಿದ್ದಂತೆ ಅಲ್ತಾಫ್ ಕೇರಳದ ತಿರುವೋಣಂ ಕಚೇರಿಗೆ ತೆರಳಿ ಬಂಪರ್ ಲಾಟರಿ ಮೊತ್ತ ಪಡೆಯುವ ಪ್ರಕ್ರಿಯೆ ಪೂರೈಸಿ ಹಣ ಪಡೆದುಕೊಳ್ಳಲಿದ್ದಾರೆ.
ಈ ಕುರಿತು ಕೇರಳದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ನನ್ನ ಸ್ನೇಹಿತನ ಮನೆಗೆ ಚಿಕ್ಕವಯಸ್ಸಿನಿಂದಲೂ ಬರುತ್ತಿದ್ದೆ. ಹೀಗೆ ಬಂದಾಗಲೆಲ್ಲ ಲಾಟರಿ ಟಿಕೆಟ್ ತೆಗೆದುಕೊಳ್ಳುತ್ತಿದ್ದೆ. ನಾನು 10 ವರ್ಷದಿಂದ ಬಂಪರ್ ಟಿಕೆಟ್ ಖರೀದಿಸುತ್ತಿದ್ದೇನೆ. ಲಾಟರಿ ಗೆಲ್ಲುವುದರ ಬಗ್ಗೆ ಯಾವುದೇ ನಿರೀಕ್ಷೆ ಇರಲಿಲ್ಲ. ಅಲ್ಲಾಹುವಿನ ಕೃಪೆಯಿಂದ ಅದೃಷ್ಟ ಕುಲಾಯಿಸಿದೆ" ಎಂದರು.
ಬುಧವಾರ ತಿರುವೋಣಂ ಬಂಪರ್ ಲಾಟರಿ ಡ್ರಾ ನಡೆಯಿತು. 71 ಲಕ್ಷ ಟಿಕೆಟ್‌ಗಳು ಮಾರಾಟವಾದ ಓಣಂ ಬಂಪರ್‌ನಲ್ಲಿ 25 ಕೋಟಿ ರೂ ಮೊದಲ ಬಹುಮಾನವಾಗಿತ್ತು. ಅಂತಿಮವಾಗಿ, ಅದು ಕರ್ನಾಟಕದ ಪಾಂಡವಪುರದ ಮೂಲದ ಅಲ್ತಾಫ್ ಪಾಲಾಗಿದೆ.
25 ಕೋಟಿ ರೂ ಲಾಟರಿ ಹೊಡೆದವರಿಗೆ ಆ ಮೊತ್ತ ಪೂರ್ತಿ ಕೈಗೆ ಸಿಗುವುದಿಲ್ಲ. ತೆರಿಗೆ ಕಡಿತಗೊಳಿಸಿ ಉಳಿದ ಮೊತ್ತವನ್ನು ವಿಜೇತರಿಗೆ ನೀಡಲಾಗುತ್ತದೆ. ಹಾಗಾಗಿ, 12.88 ಕೋಟಿ ರೂ. ಮಾತ್ರ ಅದೃಷ್ಟವಂತರಿಗೆ ಸಿಗುತ್ತದೆ.
ಲಾಟರಿ ಬಹುಮಾನದ ಮೊತ್ತ 25 ಕೋಟಿ ರೂ.
ಏಜೆಂಟ್ ಕಮಿಷನ್(ಶೇ. 10)- 2.5 ಕೋಟಿ ರೂ.
ಟಿಡಿಎಸ್(ಶೇ. 30)- 6.75 ಕೋಟಿ ರೂ.
ಸರ್ಚಾರ್ಜ್(ಶೇ. 37)- 2.49 ಕೋಟಿ ರೂ.
ಆರೋಗ್ಯ ಮತ್ತು ಶಿಕ್ಷಣ ಸೆಸ್(ಶೇ. 4)- 36,99,000 ರೂ.
ಒಟ್ಟು ತೆರಿಗೆ9.61 ಕೋಟಿ ರೂ.