ಭೈರಾದೇವಿ ಸಿನಿಮಾದಲ್ಲಿ ನಟಿ ರಾಧಿಕಾ ಕಾಳಿಯ ಅವತಾರಕ್ಕೆ ಬೆರಗಾದ ಚಂದನವನ
ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ರಾಧಿಕಾ ಕುಮಾರಸ್ವಾಮಿ ದೀರ್ಘಕಾಲದ ಬಳಿಕ ಬಣ್ಣ ಹಚ್ಚಿರುವ ಭೈರಾದೇವಿ ಸಿನಿಮಾ ಇದೇ ವಾರ ತೆರೆಕಾಣಲಿದೆ. ರಿಲೀಸ್‌ಗೂ ಮುನ್ನವೇ ಸ್ಪೆಷಲ್ ಶೋನಲ್ಲಿ ಸಿನಿಮಾವನ್ನು ವೀಕ್ಷಿರುವ ಸ್ಯಾಂಡಲ್‌ವುಡ್ ಸೆಲೆಬ್ರಿಟೀಸ್ ರಾಧಿಕಾ ಅಭಿನಯಕ್ಕೆ ಫಿದಾ ಆಗಿದ್ದಾರೆ. ಇನ್ನು ಸಿನಿಮಾ ನೋಡುತ್ತಿದ್ದ ವೇಳೆಯೇ ಮಹಿಳೆಯೊಬ್ಬರು 'ದೇವಿ ಮೈಮೇಲೆ ಬಂದವರಂತೆ ಆಡಿದ್ದು, ಚಿತ್ರದಲ್ಲಿ ಅಂಥದ್ದೇನಿದೆ ಎಂಬಂತಹ ಕುತೂಹಲ ಸೃಷ್ಟಿಯಾಗಿದೆ.
ಭೈರಾದೇವಿಯಲ್ಲಿ ಸ್ತ್ರೀ ಅಘೋರಿ ಪಾತ್ರದಲ್ಲಿ ನಟಿಸಿರುವ ರಾಧಿಕಾ, ಇಲ್ಲಿ ಚಂಡಿ ಚಾಮುಂಡಿ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಚಿತ್ರದ ಟ್ರೈಲರ್, ಸಾಂಗ್ಸ್ ಭೈರಾದೇವಿ ಬಗ್ಗೆ ದೊಡ್ಡ ನಿರೀಕ್ಷೆ ಮೂಡುವಂತೆ ಮಾಡಿವೆ. ರಮೇಶ್ ಅರವಿಂದ್ ಇಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಮಿಂಚಿದ್ದು, ಇದು ಮತ್ತೊಂದು ಆಪ್ತಮಿತ್ರ ಆಗುತ್ತೆ ಅಂತ ಭವಿಷ್ಯ ನುಡಿದಿದ್ದಾರೆ. ವಿಶೇಷ ಅಂದ್ರೆ ಇತ್ತೀಚಿಗೆ ಚಿತ್ರದ ಸ್ಪೆಷಲ್ ಶೋ ವೇಳೆ ಅಂಥದ್ದೇ ಘಟನೆ ನಡೆದಿದೆ.
ಭೈರಾದೇವಿ ಸಿನಿಮಾ ಚಿತ್ರೀಕರಣವಾಗುತ್ತಿದ್ದಾಗಲೇ ರಾಧಿಕಾಗೂ ಕೆಲವು ಅನುಭವ ಆಗಿವೆಯಂತೆ. ಸ್ತ್ರೀ ಅಘೋರಿ ಪಾತ್ರ ಮಾಡೋದು, ಕಾಳಿ ಅವತಾರ ಹಾಕೋದು ಅಷ್ಟು ಸುಲಭದ ಕೆಲಸ ಅಲ್ಲ. ಈ ಅವಧಿನಲ್ಲಿ ತಮಗೆ ಅನೇಕ ವಿಚಿತ್ರ ಅನುಭವ ಆಗಿವೆ ಅಂತ ಖುದ್ದು ರಾಧಿಕಾ ಹೇಳಿಕೊಂಡಿದ್ದಾರೆ.
ಇನ್ನೂ ಸೆಲೆಬ್ರಿಟಿ ಶೋನಲ್ಲಿ ಭೈರಾದೇವಿ ಸಿನಿಮಾವನ್ನು ನೋಡಿರುವ ಕನ್ನಡ ಚಿತ್ರರಂಗದ ತಾರೆಯರು ರಾಧಿಕಾ ನಟನೆಯನ್ನು ಕೊಂಡಾಡಿದ್ದಾರೆ. ರಾಧಿಕಾ ಪಟ್ಟ ಶ್ರಮ ತೆರೆ ಮೇಲೆ ಕಾಣುತ್ತಿದೆ. ಇದೊಂದು ಬೆಸ್ಟ್ ಹಾರರ್ ಥ್ರಿಲ್ಲರ್ ಎಕ್ಸ್‌ಪೀರಿಯನ್ಸ್ ಕೊಡುವ ಸಿನಿಮಾ ಅಂತ ಭೈರಾದೇವಿಗೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಸದ್ಯ ರಾಧಿಕಾ, ಚಿತ್ರರಂಗದ ಮಿತ್ರರಿಂದ ಬಂದ ರೆಸ್ಪಾನ್ಸ್ ನೋಡಿ ಖುಷ್ ಆಗಿದ್ದಾರೆ. ಪ್ರೇಕ್ಷಕರಿಗೂ ಈ ಸಿನಿಮಾ ಇಷ್ಟವಾಗುತ್ತೆ ಅನ್ನೋ ನಂಬಿಕೆಯಲ್ಲಿದ್ದಾರೆ.
ಭೈರಾದೇವಿಯಲ್ಲಿ ಭೂತ-ಪ್ರೇತಗಳ ಕಥೆ ಇದೆ. ಅದನ್ನು ಪರಿಹರಿಸುವುದಕ್ಕೆ ಅಘೋರಿಗಳ ಮೊರೆ ಹೋಗುವ ಚಿತ್ರಣವಿದೆದೆ. ಅಘೋರಿಗಳ ಪ್ರವೇಶದ ಬಳಿಕ ಸಿನಿಮಾ ಅಬ್ಬರವೂ ವಿಶೇಷವಾಗಿದೆ. ಭೈರಾದೇವಿ ಸಿನಿಮಾದಲ್ಲಿ ಹಾರರ್ ಕಂಟೆಂಟ್ ಜಾಸ್ತಿನೇ ಇದೆ. ಅದರ ಜೊತೆಗೆ ದೇವರ ಮೇಲೆ ಭಕ್ತಿ ಬರೋ ಮ್ಯಾಟರ್ ಕೂಡ ಇದೆ. ಎಲ್ಲವೂ ಇರೋ ಈ ಸಿನಿಮಾ ಒಂದು ಭರವಸೆಯಂತೂ ಮೂಡಿಸಿದೆ.
ಡೈರೆಕ್ಟರ್ ಶ್ರೀಜೈ ಆಕ್ಷನ್ ಕಟ್ ಹೇಳಿರುವ ಭೈರಾದೇವಿಗೆ ಕೆ.ಕೆ.ಸೆಂಥಿಲ್ ಪ್ರಸಾದ್ ಸಂಗೀತ ನೀಡಿದ್ದಾರೆ. ಭೈರಾದೇವಿ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಆಗಿದ್ದು ಅಕ್ಟೋಬರ್ 3ರಂದು ತೆರೆ ಕಾಣಲಿದೆ. ರಾಧಿಕಾ ಕುಮಾರಸ್ವಾಮಿ ಅವರೇ ನಿರ್ಮಿಸಿರೋ ಸಿನಿಮಾ ಹೇಗಿರಲಿದೆ ಅನ್ನೋ ಕುತೂಹಲ ಹೆಚ್ಚಾಗಿರೋದಂತೂ ಸುಳ್ಳಲ್ಲ.