ಮುಲ್ಕಿಯಲ್ಲಿ ಮನೆಗೆ ನುಗ್ಗಿ ಸೆರೆ ಸಿಕ್ಕ ಮರಿಚಿರತೆ: ಜನರಲ್ಲಿ ಹೆಚ್ಚಿದ ಆತಂಕ
Monday, October 21, 2024
ಮುಲ್ಕಿ: ಇಲ್ಲಿನ ವೆಂಕಟರಮಣ ದೇವಾಲಯ ರಸ್ತೆಯಲ್ಲಿರುವ ಮನೆಯೊಂದಕ್ಕೆ ನುಗ್ಗಿದ ಚಿರತೆ ಮರಿಯೊಂದನ್ನು ಶನಿವಾರ ರಾತ್ರಿ ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿಡಿದ್ದಾರೆ. ಈ ಪ್ರದೇಶದಲ್ಲಿ ಇನ್ನಷ್ಟು ಚಿರತೆಗಳಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಜನರಲ್ಲಿ ಭೀತಿ ಹೆಚ್ಚಾಗಿದೆ.
ಕಳೆದ ಕೆಲ ದಿನಗಳಿಂದ ಮುಲ್ಕಿ ಪರಿಸರದಲ್ಲಿ ಚಿರತೆ ಓಡಾಟ ನಡೆಸುತ್ತಿದೆ ಎಂದು ಸುದ್ದಿ ಹಬ್ಬಿತ್ತು. ಈ ಚಿರತೆ ಸೆರೆ ಸಿಗುವ ಮೂಲಕ ಆ ಸುದ್ದಿ ನಿಜವಾಗಿದೆ. ವೆಂಕಟರಮಣ ದೇವಾಲಯ ರಸ್ತೆಯ ಅಕ್ಕಸಾಲಿಗರ ಕೇರಿಯ ರೇಂಜರ್ ಪ್ಲೋಟ್ ಬಳಿಯ ಸದಾನಂದ ಕೋಟ್ಯಾನ್ ಹಾಗೂ ಶೀಲಾ ದಂಪತಿಯ ಮನೆಯ ಅಡುಗೆ ಕೋಣೆಯಲ್ಲಿ ಚಿರತೆ ಪತ್ತೆಯಾಗಿದೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಮೂಡುಬಿದಿರೆ ಅರಣ್ಯ ಇಲಾಖೆಯ ಆಧಿಕಾರಿಗಳು ಹಾಗೂ ಸಿಬ್ಬಂದಿ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಸಫಲರಾಗಿದ್ದಾರೆ.
ಮನೆಯಿಂದ ಹೊರಗೆ ಹೋಗಿದ್ದ ಸದಾನಂದ ದಂಪತಿ ಶನಿವಾರ ರಾತ್ರಿ 9.30ರ ಸುಮಾರಿಗೆ ಮನೆಗೆ ಬಂದು ಅಡುಗೆ ಮನೆಯ ಬಾಗಿಲನ್ನು ತೆರೆದಿದ್ದರು. ಸ್ವಲ್ಪ ಹೊತ್ತಿನಲ್ಲಿ ಬಚ್ಚಲು ಮನೆಯಲ್ಲಿ ಹಾಗೂ ಬಳಿಕ ಅಡುಗೆ ಮನೆಯಲ್ಲಿ ಸದ್ದಾಗಿದೆ. ಲೈಟ್ ಹಾಕಿ ನೋಡಿದಾಗ ಯಾವುದೋ ಪ್ರಾಣಿ ಒಳಗೆ ಸೇರಿರುವುದು ಕಂಡು ಬಂದಿದೆ. ಕೂಡಲೇ ಅವರು ಪಕ್ಕದ ಮನೆಯರಿಗೆ ತಿಳಿಸಿದ್ದು, ಬಳಿಕ ಪೊಲೀಸರಿಗೂ ಮಾಹಿತಿ ನೀಡಲಾ ಯಿತು. ಮೂಲ್ಕಿ ಪೊಲೀಸರು ಆಗಮಿಸಿ ಚಿರತೆ ಇರುವುದನ್ನು ದೃಢಪಡಿಸಿದರು. ಅನಂತರ ಮೂಡುಬಿದಿರೆಯ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಲಾಯಿತು. ಕೂಡಲೇ ಆಗಮಿಸಿದ ಅರಣ್ಯ ಅಧಿಕಾರಿ ಸಿಬಂದಿ ತಡರಾತ್ರಿ ಚಿರತೆಯನ್ನು ಗೂಡಿನಲ್ಲಿ ಬಂಧಿಸುವಲ್ಲಿ ಸಫಲರಾದರು. ಚಿರತೆಯನ್ನು ನೋಡಲು ಜನರ ದಂಡೇ ನೆರೆದಿದ್ದು, ಅವರನ್ನು ನಿಯಂತ್ರಿಸುವುದೇ ಪೊಲೀಸರಿಗೆ ಸವಾಲಾಯಿತು.
ಚಿರತೆಗೆ ಸುಮಾರು ಒಂದೂವರೆ ವರ್ಷ ಪ್ರಾಯವಾಗಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದು ಮರಿಯಾಗಿರುವ ಕಾರಣ ಉಳಿದ ಹೆಣ್ಣು ಮತ್ತು ಗಂಡು ಚಿರತೆ ಪರಿಸರದಲ್ಲಿ ಇರುವ ಸಾಧ್ಯತೆ ಇದ್ದು, ಸಾರ್ವಜನಿಕರು ಎಚ್ಚರದಿಂದ ಇರುವಂತೆ ತಿಳಿಸಲಾಗಿದೆ. ಇದು ಸಹಜವಾಗಿಯೇ ಜನರಲ್ಲಿ ಆತಂಕ ಮೂಡಿಸಿದೆ.