ಸುಳ್ಯ: ಬಸ್ ಸಂಚಾರದಲ್ಲಿದ್ದಾಗಲೇ ಕಂಡೆಕ್ಟರ್ ಎದೆನೋವು ಕಾಣಿಸಿಕೊಂಡು ಮೃತ್ಯು
Monday, October 14, 2024
ಸುಳ್ಯ: ಖಾಸಗಿ ಬಸ್ಸೊಂದರ ಕಂಡೆಕ್ಟರ್ ಬಸ್‌ನಲ್ಲಿ ಕರ್ತವ್ಯದಲ್ಲಿದ್ದಾಗಲೇ ಎದೆನೋವು ಕಾಣಿಸಿಕೊಂಡು ಮೃತಪಟ್ಟ ಘಟನೆ ಸೋಮವಾರ ಸುಳ್ಯದ ತೊಡಿಕಾನ ಸಮೀಪದ ಅಡ್ಯಡ್ಕದಲ್ಲಿ ನಡೆದಿದೆ.
ಗುರುಪ್ರಸಾದ್ ಕುಂಚಡ್ಕ(30) ಮೃತಪಟ್ಟ ದುರ್ದೈವಿ.
ಗುರುಪ್ರಸಾದ್ ಸುಳ್ಯ-ತೊಡಿಕಾನ ನಡುವೆ ಸಂಚರಿಸುವ ಅವಿನಾಶ್ ಬಸ್‌ನಲ್ಲಿ ಕಂಡೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಸೋಮವಾರ ಕರ್ತವ್ಯದಲ್ಲಿದ್ದಾಗಲೇ ಏಕಾಏಕಿ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ರಿಕ್ಷಾದಲ್ಲಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆಯೇ ಅವರು ಅರಂಬೂರು ಬಳಿ ಆಟೋ ರಿಕ್ಷಾದಲ್ಲೇ ಪ್ರಾಣ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮೃತರು ಪತ್ನಿ, ಮೂರು ವರ್ಷದ ಮಗು ಹಾಗೂ ತಾಯಿಯನ್ನು ಅಗಲಿದ್ದಾರೆ.