ನಟಿಸಿದ ಸಿನಿಮಾಗಳೆಲ್ಲವೂ ಒಂದರ ಹಿಂದೆ ಒಂದು ಫ್ಲಾಪ್ ಆಯ್ತು: ನಟನೆಗೆ ಗುಡಬೈ ಹೇಳಿಜ್ಯೂಸ್ ಮಾರಲಾರಂಭಿಸಿದ ಈ ನಟನೀಗ ದೊಡ್ಡ ಉದ್ಯಮಿ
Tuesday, October 8, 2024
ಮುಂಬೈ: ಬಾಲಿವುಡ್‌ನಲ್ಲಿ ಬಹಳಷ್ಟು ಸಿನಿಮಾಗಳಲ್ಲಿ ನಟಿಸಿದ್ರೂ ಫ್ಲಾಪ್ ಹೀರೋ ಎಂದೇ ಮೆರೆದ ನಟ ಇವರು. ಕನ್ನಡದಲ್ಲೂ ಒಂದು ಸಿನಿಮಾದಲ್ಲಿ ನಟಿಸಿದ್ದರು. ಎಲ್ಲಾ ಕಡೆ ಸೋತು ಕೈ ಸುಟ್ಟ ಬಳಿಕ ಸಿನಿಮಾದಿಂದಲೇ ದೂರ ಉಳಿದು, ಬ್ಯುಸಿನೆಸ್ ಆರಂಭಿಸಿದ ನಟ, ಸದ್ಯ ಬಹುದೊಡ್ಡ ಬ್ಯುಸಿನೆಸ್ ಆಗಿ ಮೆರೆದರು. ಈವಾಗ ನಾವು ಮಾತನಾಡುತ್ತಿರುವ ನಟ ಬೇರೆ ಯಾರೂ ಅಲ್ಲ ಡಿನೋ ಮೋರಿಯಾ. ಡಿನೋ ಫ್ಯಾಷನ್ ರೂಪದರ್ಶಿಯಾಗಿ ಕರಿಯರ್ ಆರಂಭಿಸಿ ನಟನಾಗಿ ಬಾಲಿವುಡ್ ಗೆ ಕಾಲಿಟ್ಟರು. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ.
ನಟಿಸಿದ ಮೊದಲ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಅಟ್ಟರ್ ಫ್ಲಾಪ್ ಆಯ್ತು. ಬಳಿಕ, ಬಿಪಾಶಾ ಬಸು ಅವರೊಂದಿಗೆ ನಟಿಸಿದ ಎರಡನೇ ಚಿತ್ರ 'ರಾಜ್' ಬ್ಲಾಕ್ಬಾಸ್ಟರ್ ಸಿನಿಮಾ ಮೂಲಕ ಡಿನೋ ರಾತ್ರೋರಾತ್ರಿ ಸ್ಟಾರ್ ಕೂಡ ಆದರು.
ಆದಾಗ್ಯೂ, ಡಿನೋ ತನ್ನ ಸ್ಟಾರ್ಡಮ್ ಅನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಗುನಾ, ಬಾಜ್-ಎ ಬರ್ಡ್ ಇನ್ ಡೇಂಜರ್, ಸಶ್ಶ್, ಇಷ್ಕ್ ಹೈ ತುಮ್ಸೆ, ಪ್ಲಾನ್, ಇನ್ಸಾಫ್-ದಿ ಜಸ್ಟೀಸ್, ಬ್ಲಡ್ ಅಂಡ್ ಫೇಸ್ ನಂತಹ ಸಿನಿಮಾಗಳಲ್ಲಿ ನಟಿಸಿದ್ರೂ ಸಹ ಎಲ್ಲಾ ಸಿನಿಮಾಗಳು ಒಂದರ ನಂತರ ಸೋತು ಸುಣ್ಣವಾದವು. ಕನ್ನಡದಲ್ಲಿ ನಟಿ ರಮ್ಯಾ ಜೊತೆ ಜೂಲಿ ಎನ್ನುವ ರೊಮ್ಯಾಂಟಿಕ್ ಸಿನಿಮಾದಲ್ಲಿ ನಟಿಸಿದ್ದರು.
2006 ರಲ್ಲಿ, ಒಂದಿಷ್ಟು ಸೆಮಿ ಹಿಟ್ ಸಿನಿಮಾಗಳಲ್ಲಿ ನಟಿಸಿದರು. ಅದರ ನಂತರ ಅವರ ಎಲ್ಲಾ ಚಲನಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಫ್ಲಾಪ್ ಆದವು. ಬಾಕ್ಸ್ ಆಫೀಸ್ ಇಂಡಿಯಾದ ಪ್ರಕಾರ, ಡಿನೋ ಮೋರಿಯೋ ಒಟ್ಟು 22 ಫ್ಲಾಪ್ ಸಿನಿಮಾಗಳನ್ನು ನೀಡಿದ್ದಾರೆ.
ಒಂದಾದ ಬಳಿಕ ಒಂದು ಫ್ಲಾಪ್ ಫಿಲಂಗಳಿಂದ ಸೋತ ಡಿನೋ ಕೊನೆಗೆ ಸಿನಿಮಾಗಳಿಂದಲೇ ಬ್ರೇಕ್ ಪಡೆದರು. ವರ್ಷಗಳ ನಂತರ, ಅವರು ಇತ್ತೀಚೆಗೆ ಏಜೆಂಟ್ ಎನ್ನುವ ತೆಲುಗು ಹಾಗೂ ಬಾಂದ್ರಾ ಎನ್ನುವ ಮಲಯಾಲಂ ಸಿನಿಮಾಗಳಲ್ಲಿ ನಟಿಸಿದರು. ಆದರೆ ಇದೂ ಕೂಡ ಫ್ಲಾಪ್ ಆಗಿತ್ತು.
ಸಿನಿಮಾಗಳಲ್ಲಿ ಉತ್ತಮ ಕರಿಯರ್ ಕಂಡುಕೊಳ್ಳಲು ಸಾಧ್ಯವಾಗದ ಕಾರಣ, ಡಿನೋ ಬುಸಿನೆಸ್ ನಲ್ಲಿ ಒಂದು ಕೈ ನೋಡೋಣ ಎಂದು ತಮ್ಮನ್ನ ತಾವು ಬ್ಯುಸಿನೆಸ್ ನಲ್ಲಿ ತೊಡಗಿಸಿಕೊಂಡರು, ಬ್ಯುಜಿನೆಸ್ ಇವರಿಗೆ ದೊಡ್ಡ ಮಟ್ಟದಲ್ಲಿ ಯಶಸ್ಸು ತಂದುಕೊಟ್ಟಿತು. 2012 ರಲ್ಲಿ, ನಟ ಎಂಎಸ್ ಧೋನಿ ಅವರೊಂದಿಗೆ ಕೂಲ್ ಮಾಲ್ ಎಂಬ ಮರ್ಚಂಡೈಸಿಂಗ್ ಕಂಪನಿಯನ್ನು ಪ್ರಾರಂಭಿಸಿದರು. 2013 ರಲ್ಲಿ ತಮ್ಮದೇ ಆದ ನಿರ್ಮಾಣ ಸಂಸ್ಥೆಯಾದ ಕ್ಲಾಕ್ ವೈಸ್ ಫಿಲ್ಮ್ಸ್ ಅನ್ನು ತೆರೆದರು.
ನಂತರ ಮಿಥಿಲ್ ಲೋಧಾ ಮತ್ತು ರಾಹುಲ್ ಜೈನ್ ಅವರೊಂದಿಗೆ ಸೇರಿ ಕೋಲ್ಡ್-ಪ್ರೆಸ್ಡ್ ಜ್ಯೂಸ್ ಬ್ರಾಂಡ್ ದಿ ಫ್ರೆಶ್ ಪ್ರೆಸ್ ಅನ್ನು ಪ್ರಾರಂಭಿಸಿದರು. 2018 ರಲ್ಲಿ ಪ್ರಾರಂಭವಾದ ಈ ಬ್ರಾಂಡ್ 36 ಸ್ಟೇಷನ್ ಗಳನ್ನು ತೆರೆದಿದೆ ಮತ್ತು ಗುಜರಾತ್, ದೆಹಲಿ, ರಾಜಸ್ಥಾನ ಮತ್ತು ಭಾರತದ ಇತರ ಹಲವಾರು ರಾಜ್ಯಗಳಲ್ಲಿ ವ್ಯವಹಾರವನ್ನು ವಿಸ್ತರಿಸಲು ಯೋಜಿಸಿದೆ.
ಇಂದು ಅಷ್ಟಾಗಿ ಸಿನಿಮಾಗಳಲ್ಲಿ ನಟಿಸದಿದ್ದರೂ, ಡಿನೋ ಐಷಾರಾಮಿ ಜೀವನವನ್ನು (luxury life) ನಡೆಸುತ್ತಿದ್ದಾರೆ ಮತ್ತು ಅಪಾರ ಸಂಪತ್ತಿನ ಮಾಲೀಕರೂ ಆಗಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ನಟನ ಒಟ್ಟು ನಿವ್ವಳ ಮೌಲ್ಯವು 82 ಕೋಟಿ ರೂ.ಗೆ ಏರಿದೆ. ಸದ್ಯ ನಟ ಹೌಸ್ ಫುಲ್ 5 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಒಂದಷ್ಟು ವೆಬ್ ಸೀರೀಸ್ ಗಳಲ್ಲೂ ಡಿನೋ ನಟಿಸಿದ್ದಾರೆ.