ಸರ್ಕಾರಿ ಉದ್ಯೋಗದ ಆಮಿಷ: ಹಲವರಿಗೆ ವಂಚನೆ, ಕೋಟ್ಯಂತರ ರೂಪಾಯಿ ಪಂಗನಾಮ- ಡಿವೈಎಫ್‌ಐ ನಾಯಕಿ ಸಚಿತಾ ರೈ ಬಂಧನ
ಸರ್ಕಾರಿ ಉದ್ಯೋಗದ ಆಮಿಷ: ಹಲವರಿಗೆ ವಂಚನೆ, ಕೋಟ್ಯಂತರ ರೂಪಾಯಿ ಪಂಗನಾಮ- ಡಿವೈಎಫ್‌ಐ ನಾಯಕಿ ಸಚಿತಾ ರೈ ಬಂಧನ
ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ವಿವಿಧ ಇಲಾಖೆ ಹಾಗೂ ವಿವಿಧ ಸಂಸ್ಥೆಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಹಲವರಿಂದ ಕೋಟ್ಯಂತರ ರೂಪಾಯಿ ಪಡೆದು ವಂಚಿಸಿದ ಆರೋಪಿಯನ್ನು ಬಂಧಿಸಲಾಗಿದೆ.
ಆರೋಪಿ ಸಿಪಿಎಂ ಪಕ್ಷದ ಯುವಜನ ಸಂಘಟನೆ ಡಿವೈಎಫ್‌ಐನ ಕಾಸರಗೋಡು ನಾಯಕಿ ಹಾಗೂ ಶಿಕ್ಷಕಿ ಸಚಿತಾ ರೈ. ಅವರಿಗೆ 27 ವರ್ಷ ಪ್ರಾಯ. ಈಕೆ ಶೇಣಿ ಬಲ್ತಕಲ್ಲುವಿನ ನಿವಾಸಿ. ಪೊಲೀಸರು ಆರೋಪಿಯನ್ನು ಕಾಸರಗೋಡಿನ ವಿದ್ಯನಗರದಲ್ಲಿ ಬಂಧಿಸಿದ್ದಾರೆ.
ವಿದ್ಯಾನಗರದಲ್ಲಿ ವಕೀಲರೊಬ್ಬರನ್ನು ಭೇಟಿ ಮಾಡಿ ನ್ಯಾಯಾಲಯಕ್ಕೆ ಹಾಜರಾಗಲು ತೆರಳುತ್ತಿದ್ದಾಗ ದಾರಿ ಮಧ್ಯೆ ಪೊಲೀಸರು ಬಂಧಿಸಿದ್ದಾರೆ. ಸಚಿತಾ ರೈ ಅವರನ್ನು ವಂಚನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಮಗ್ರವಾಗಿ ತನಿಖೆ ನಡೆಸಿ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಂಚನಾ ಪ್ರಕರಣ ಬಯಲಾದ ಪರಿಣಾಮವಾಗಿ ಸಚಿತಾ ರೈ ಕಳೆದ ಒಂದು ವಾರದಿಂದ ತಲೆ ಮರೆಸಿಕೊಂಡಿದ್ದರು. ಕೇಂದ್ರೀಯ ವಿದ್ಯಾಲಯ, ಸಿಪಿಸಿಆರ್‌ಐ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕರ್ನಾಟಕದ ಅಬಕಾರಿ ಇಲಾಖೆ ಮತ್ತು ಅರಣ್ಯ ಇಲಾಖೆ ಸೇರಿದಂತೆ ಹಲವು ಇಲಾಖೆಗಳಲ್ಲಿ ಹಾಗೂ ಸಂಸ್ಥೆಗಳಲ್ಲಿ ಕೆಲಸ ಕೊಡಿಸುವುದಾಗಿ ಅವರು ಹಲವರನ್ನು ನಂಬಿಸಿದ್ದರು. ಮತ್ತು ಹಲವು ವ್ಯಕ್ತಿಗಳಿಂದ ಕೋಟ್ಯಂತರ ರೂಪಾಯಿಗಳನ್ನು ಪಡೆದು ವಂಚಿಸಿದ ಆರೋಪವನ್ನು ಅವರು ಎದುರಿಸುತ್ತಿದ್ಧಾರೆ.
ಆರೋಪಿಯನ್ನು ಕಾಸರಗೋಡು ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದ್ದು, ಆರೋಪಿಯನ್ನು ಕಣ್ಣೂರು ಸೆಂಟ್ರಲ್ ಜೈಲಿಗೆ ಕಳುಹಿಸಲಾಗಿದೆ. ಆರೋಪಿ ಸಚಿತಾ ರೈ ವಿರುದ್ಧ 12ಕ್ಕೂ ಹೆಚ್ಚು ಕೇಸ್‌ಗಳಿವೆ. ವಿವಿಧ ಪೊಲೀಸ್ ಠಾಣೆಗಳಲ್ಲಿ ಸಂತ್ರಸ್ತರು ಈ ವಂಚಕಿಯ ವಿರುದ್ಧ ಕೇಸು ದಾಖಲಿಸಿದ್ದಾರೆ.