ಸಲ್ಮಾನ್ ಖಾನ್‌ರೊಂದಿಗೆ ನಟಿಸುವ ಆಫರ್ ತಿರಸ್ಕರಿಸಿದ ಸ್ಟಾರ್ ಕಿಡ್: ಆದರೂ ಈಕೆ ಬಾಲಿವುಡ್‌ನ ಟಾಪ್ ನಟಿ
Friday, October 18, 2024
ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಸಿನಿಮಾದ ಮೂಲಕ ಲಾಂಚ್ ಆಗಿ ಸಿನಿಲೋಕಕ್ಕೆ ಕಾಲಿಡಬೇಕೆಂದು ಇಚ್ಛಿಸುವ ನಟಿಯರು ಬಹಳಮಂದಿ ಇದ್ದಾರೆ. ಸಲ್ಮಾನ್ ಖಾನ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿರುವ ನಟಿಯರಲ್ಲಿ ಹಲವರು ಸ್ಟಾರ್ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. ಆ ಯಶಸ್ವಿ ನಟಿಯರ ಸಾಲಿನಲ್ಲಿ ಭಾಗ್ಯಶ್ರಿ, ಸೋನಾಕ್ಷಿ ಸಿನ್ಹಾ, ಆಯೇಶಾ, ಜುಲ್ಕಾ, ರವೀನಾ ಟಂಡನ್, ಸಾಯಿ ಮಂಜೇಕರ್ ಅವರನ್ನು ನೆನಪಿಸಿಕೊಳ್ಳಬಹುದು.
ಸಲ್ಮಾನ್ ಖಾನ್ ನಟನೆಯ ಸಿನಿಮಾದ ಮೂಲಕ ತಮ್ಮ ಚೊಚ್ಚಲ ಪ್ರವೇಶಕ್ಕೆ ಆಫರ್ ನೀಡಿದ್ದರೂ ಸ್ಟಾರ್ ಕಿಡ್ ನಟಿಯೊಬ್ಬರು ನಿರಾಕರಿಸಿದ್ದರು. ಐದು ವರ್ಷಗಳ ಬಳಿಕ ಬಾಲಿವುಡ್‌ಗೆ ಎಂಟ್ರಿಕೊಟ್ಟರು. ಆ ನಟಿ ಬೇರೆ ಯಾರು ಅಲ್ಲ ಶಕ್ತಿ ಕಪೂರ್ ಅವರ ಮಗಳು ಶ್ರದ್ಧಾ ಕಪೂರ್. ಈ ವಿಚಾರವನ್ನು ನಟಿ ಶ್ರದ್ಧಾ ಕಪೂರ್ ಸಂದರ್ಶನವೊಂದರಲ್ಲಿ ಸ್ವತಃ ಬಹಿರಂಗಪಡಿಸಿದ್ದು ಅದಕ್ಕೆ ಸ್ಪಷ್ಟಿಕರಣವನ್ನು ಕೊಟ್ಟಿದ್ದಾರೆ.
16ನೇ ವಯಸ್ಸಿನಲ್ಲಿದ್ದಾಗಲೇ ಶ್ರದ್ಧಾ ಕಪೂರ್ ಅವರಿಗೆ ಸಲ್ಮಾನ್ ಖಾನ್ ಅಭಿನಯದ 'ಲಕ್ಕಿ: ನೋ ಟೈಮ್ ಫಾರ್ ಲವ್' ಸಿನಿಮಾದಲ್ಲಿನ ಪ್ರಮುಖ ಪಾತ್ರಕ್ಕೆ ಆಫರ್ ನೀಡಲಾಗಿತ್ತು. ಆದರೆ ಶ್ರದ್ಧಾ ತಿರಸ್ಕರಿಸಿದ್ದರಿಂದ ಆ ಪಾತ್ರ ಸ್ನೇಹಾ ಉಳ್ಳಾಲ್ ಅವರ ಪಾಲಾಯಿತು.
15 ಅಥವಾ 16ನೇ ವಯಸ್ಸಿನಲ್ಲಿ ನಾನು ತುಂಬಾ ಚಿಕ್ಕವಳಿದ್ದೆ. ಶಾಲಾ ಶಿಕ್ಷಣವನ್ನು ಮುಗಿಸಲು ಮತ್ತು ಕಾಲೇಜಿಗೆ ಸೇರಲು ಬಯಸುತ್ತಿದ್ದೆ. ಆ ಸಮಯದಲ್ಲಿ ಆಫರ್‌ಗಳನ್ನು ಪಡೆಯುವುದು ನನ್ನ ಯಶಸ್ಸಿನ ವ್ಯಾಖ್ಯಾನ ಎಂದ ನಾನು ಭಾವಿಸಿರಲಿಲ್ಲ. ಆದ್ದರಿಂದ ನಾನು ಸಲ್ಮಾನ್ ಖಾನ್ ಅವರೊಂದಿಗೆ ನಟಿಸಲು ಅವಕಾಶ ಸಿಕ್ಕಿದ್ದರೂ ಅದನ್ನು ತಿರಸ್ಕರಿಸಿದೆ. ಅಧ್ಯಯನದತ್ತ ಗಮನ ಹರಿಸುವುದು ಕಷ್ಟಕರವಾಗಿತ್ತು ಏಕೆಂದರೆ ಇದು ಸಲ್ಮಾನ್ ಖಾನ್ ಅವರೊಂದಿಗೆ ಕೆಲಸ ಮಾಡುವ ಅದ್ಭುತ ಅವಕಾಶವಾಗಿತ್ತು ಎಂದು ಶ್ರದ್ಧಾ ಕಪೂರ್ ತಿಳಿಸಿದರು.
2005ರಲ್ಲಿ ಸಲ್ಮಾನ್ ಖಾನ್ ಅವರೊಂದಿಗೆ ನಟಿಸುವ ಅವಕಾಶವನ್ನು ತಿರಸ್ಕರಿಸಿದ ಬಳಿಕ 2010ರಲ್ಲಿ ತೀನ್ ಪಟ್ಟಿ ಚಿತ್ರದೊಂದಿಗೆ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಆದಿತ್ಯ ರಾಯ್ ಕಪೂರ್ ಜತೆಗಿನ ರೊಮ್ಯಾಂಟಿಕ್ ಮ್ಯೂಸಿಕಲ್ ಆಶಿಕಿ 2 ಸಿನಿಮಾ ಅವರ ವೃತ್ತಿಜೀವನದಲ್ಲಿ ಬ್ರೇಕ್ ನೀಡಿತು. ಸದ್ಯ ಶ್ರದ್ದಾ ಕಪೂರ್ ತಮ್ಮ ಸ್ತ್ರೀ-2 ಚಿತ್ರದ ಯಶಸ್ಸಿನ ಖುಷಿಯಲ್ಲಿದ್ದಾರೆ. ಆಗಸ್ಟ್ 15ರಂದು ಬಿಡುಗಡೆಯಾದ ಅವರ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಸಖತ್ ಸೌಂಡ್ ಮಾಡುತ್ತಿದೆ.