ಬಿಜೆಪಿ ಟಿಕೆಟ್ ಆಮಿಷವೊಡ್ಡಿ 2 ಕೋಟಿ ಸುಲಿಗೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸಹೋದರನ ಬಂಧನ
ಬಿಜೆಪಿ ಟಿಕೆಟ್ ಆಮಿಷವೊಡ್ಡಿ 2 ಕೋಟಿ ಸುಲಿಗೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸಹೋದರನ ಬಂಧನ
ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸುವ ಆಮಿಷವೊಡ್ಡಿ 2 ಕೋಟಿ ರೂ. ಸುಲಿಗೆ ಮಾಡಿದ ಆರೋಪದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರ ಸಹೋದರ ಗೋಪಾಲ ಜೋಷಿ ಅವರನ್ನು ಮಹಾರಾಷ್ಟ್ರದಲ್ಲಿ ಬಂಧಿಸಲಾಗಿದೆ.
ವಿಜಯಪುರದ ನಾಗಠಾಣಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ದೇವಾನಂದ್ ಪೂಲ್ ಸಿಂಗ್ ಚೌಹಾಣ್ ಅವರಿಂದ ಆರೋಪಿ ಗೋಪಾಲ ಜೋಶಿ ಎರಡು ಕೋಟಿ ರೂ. ಪಡೆದುಕೊಂಡಿದ್ದರು ಎಂದು ಆರೋಪಿಸಲಾಗಿದೆ.
ಗೋಪಾಲ ಜೋಷಿ ಅವರ ಪುತ್ರ ಅಜಯ್ ಜೋಷಿ ಅವರ ವಿರುದ್ಧವೂ ಎಫ್‌ಐಆರ್ ದಾಖಲಾಗಾಗಿದೆ. ಮತ್ತೊಂದು ಪೊಲೀಸ್ ತಂಡ ಅವರನ್ನು ಪುಣೆಯಲ್ಲಿ ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದೆ. ಸುಲಿಗೆ ಪ್ರಕರಣದಲ್ಲಿ ಪುತ್ರನ ಪಾತ್ರ ಇದೆ ಎಂದು ಕಂಡುಬಂದರೆ ಆತನನ್ನೂ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಮಧ್ಯೆ, ಗೋಪಾಲ ಜೋಷಿ ಅವರ ಮನೆಯಲ್ಲಿ ಶೋಧ ಕಾರ್ಯ ನಡೆಸಲಾಗಿದ್ದು, ಹಣಕಾಸಿನ ವ್ಯವಹಾರ ಮತ್ತು ಚೆಕ್ ವಹಿವಾಟಿನ ಮಾಹಿತಿ ಪಡೆದುಕೊಳ್ಳಲಾಗಿದೆ. ದಾಖಲೆ ಮತ್ತು ನಗದು ಹಣವನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ಮೂಲಗಳೂ ತಿಳಿಸಿವೆ.
ಗೋಪಾಲ ಜೋಷಿ ಅವರನ್ನು ನಂತರ ಕೇಶ್ವಾಪುರ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಯಿತು. ಸಹ ದೂರುದಾರರ ದೇವಾನಂದ ಅವರ ಪತ್ನಿ ಸುನಿತಾ ಚೌಹಾಣ್ ಸಮ್ಮುಖದಲ್ಲಿ ವಿಚಾರಣೆ ನಡೆಸಲಾಗಿತ್ತು.
ತಲೆಮರೆಸಿಕೊಂಡಿದ್ದ ಆರೋಪಿ ಗೋಪಾಲ ಜೋಷಿ ಅವರು ಮಹಾರಾಷ್ಟ್ರದ ಕೊಲ್ಹಾಪುರದ ವಸತಿಗೃಹದಲ್ಲಿ ಆಶ್ರಯ ಪಡೆದುಕೊಂಡಿದ್ದರು. ಈ ಮೂಲಕ ಸುಲಿಗೆ ಪ್ರಕರಣದಲ್ಲಿ ಇದುವರೆಗೆ ಮೂವರು ಆರೋಪಿಗಳನ್ನು ಬಂಧಿಸಿದಂತಾಗಿದೆ.