ಬಿಲಿಯನೇರ್ ಪಂಕಜ್ ಓಸ್ವಾಲ್ ಪುತ್ರಿ ವಸುಂಧರಾ ಓಸ್ವಾಲ್ ಉಗಾಂಡದಲ್ಲಿ ಅರೆಸ್ಟ್: ಕತ್ತಲ ಕೋಣೆಯಲ್ಲಿ ಕೂಡಿಹಾಕಿದ ಪೊಲೀಸರು
Monday, October 21, 2024
ನವದೆಹಲಿ: ಯುರೋಪ್, ಆಸ್ಟ್ರೇಲಿಯಾದಲ್ಲಿರುವ ಓಸ್ವಾಲ್ ಗ್ರೂಪ್ ಸಮೂಹ ಸಂಸ್ಥೆಗಳ ಅಧ್ಯಕ್ಷ, ಹೆಸರಾಂತ ಬಿಲಿಯನೇರ್ ಪಂಕಜ್ ಓಸ್ವಾಲ್ ಅವರ 26 ವರ್ಷದ ಪುತ್ರಿ ವಸುಂಧರಾ ಓಸ್ವಾಲ್‌ರನ್ನು ಉಗಾಂಡಾದಲ್ಲಿ ಪೊಲೀಸರು ಅರೆಸ್ಟ್ ಮಾಡಿ ಕತ್ತಲ ಕೋಣೆಯಲ್ಲಿ ಕೂಡಿಹಾಕಿದ್ದಾರೆ. ಓಸ್ವಾಲ್ ಕುಟುಂಬಸ್ಥರು ಪುತ್ರಿಯ ನೆರವಿಗೆ ಬರುವಂತೆ ವಿಶ್ವಸಂಸ್ಥೆಗೆ ದೂರು ನೀಡಿದ್ದಾರೆ.
ಮಾಹಿತಿ ಪ್ರಕಾರ, ಅ.1ರಂದು ವಸುಂಧರಾರನ್ನು ಉಗಾಂಡಾದ 20 ಮಂದಿ ಶಸ್ತ್ರಸಜ್ಜಿತ ಪೊಲೀಸರು ಬಂಧಿಸಿದ್ದಾರೆ. ಸ್ವಿಸ್ ಯುನಿವರ್ಸಿಟಿಯಲ್ಲಿ ಫಿನಾನ್ಸ್‌ನಲ್ಲಿ ಪದವಿ ಪೂರೈಸಿರುವ ವಸುಂಧರಾ ಓಸ್ವಾಲ್ ಪದವಿ ಓದುತ್ತಿದ್ದಾಗಲೇ ಪ್ರೋ ಇಂಡಸ್ಟ್ರೀಸ್ ಎಂಬ ಉದ್ಯಮವನ್ನು ಆರಂಭಿಸಿದ್ದರು. ಓಸ್ವಾಲ್ ಗ್ರೂಪ್ ಸಂಸ್ಥೆಯ ಸಹ ಸಂಸ್ಥೆಗಳಲ್ಲಿ ಇದೂ ಒಂದಾಗಿದ್ದು, ಆಫ್ರಿಕಾದ ಕೆಲವು ದೇಶಗಳಲ್ಲಿ ಇದರ ಶಾಖೆಗಳಿವೆ. ಈ ಸಂಸ್ಥೆ ಪ್ರಮುಖವಾಗಿ ಇಥೆನಾಲ್ ಉತ್ಪಾದಿಸುವ ಕಂಪನಿಯಾಗಿದೆ. ಈ ಕಂಪನಿಯಲ್ಲಿ ವಸುಂಧರಾ ಅವರು ಎಕ್ಸಿಕ್ಯುಟಿವ್ ಡೈರೆಕ್ಟರ್ ಆಗಿದ್ದಾರೆ. ಸಣ್ಣ ವಯಸ್ಸಿನಲ್ಲಿಯೇ ಇಂತಹ ಸಾಧನೆ ಮಾಡಿರುವ ಇವರಿಗೆ 2023ರಲ್ಲಿ ಗ್ಲೋಬಲ್ ಯೂತ್ ಐಕಾನ್ ಅವಾರ್ಡ್, ಇಕನಾಮಿಕ್ ಟೈಮ್ಸ್‌ನಿಂದ ವರ್ಷದ ಮಹಿಳಾ ಸಾಧಕಿ ಎನ್ನುವ ಗೌರವ ನೀಡಲಾಗಿತ್ತು.
ವಸುಂಧರಾ ಅವರು ಉಗಾಂಡದಲ್ಲಿರುವ ತನ್ನ ಎಕ್ಸ್ ಟ್ರಾ ನ್ಯೂಟ್ರಲ್ ಪ್ಲಾಂಟ್ ನಲ್ಲಿದ್ದಾಗಲೇ ಅಲ್ಲಿನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಣಕಾಸು ವಿಷಯದಲ್ಲಿ ದಾಖಲಾದ ಪ್ರಕರಣ ಸಂಬಂಧಿಸಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ ಎನ್ನಲಾಗುತ್ತಿದ್ದರೂ, ಸರಿಯಾದ ಮಾಹಿತಿ ನೀಡಲಾಗಿಲ್ಲ. ವಸುಂಧರಾ ಜೊತೆಗೆ ಕಂಪನಿಯ ಲಾಯರ್ ರೀಟಾ ನಾಗಬೀರ್ ಮತ್ತು ಕೆಲವು ಸಹೋದ್ಯೋಗಿಗಳನ್ನೂ ಪೊಲೀಸರು ವಶಕ್ಕೆ ಪಡೆದು ಬಂಧನದಲ್ಲಿರಿಸಿದ್ದಾರೆ. ವಸುಂಧರಾಗೆ ಲಾಯರ್ ಅಥವಾ ಕುಟುಂಬ ಸದಸ್ಯರನ್ನು ಸಂಪರ್ಕ ಮಾಡದಂತೆ ತಡೆಹಿಡಿಯಲಾಗಿದೆ. ಅಲ್ಲದೆ, ಶೂ ರಾಶಿ ಹಾಕಿದ್ದ ಕೋಣೆಯಲ್ಲಿ ಕೂಡಿಹಾಕಿದ್ದು, ಬಟ್ಟೆ ಬದಲಾಯಿಸುವುದಕ್ಕೆ ಸೂಕ್ತ ಟಾಯ್ಲೆಟ್ ಬಳಸುವುದಕ್ಕೂ ಅವಕಾಶ ನೀಡುತ್ತಿಲ್ಲ ಎನ್ನುವ ದೂರು ಕೇಳಿಬಂದಿದೆ. ಪೊಲೀಸರು ಯಾವುದೇ ಅಗತ್ಯ ವಸ್ತುಗಳನ್ನೂ ಪೂರೈಕೆ ಮಾಡುತ್ತಿಲ್ಲ.
ಪುತ್ರಿಯನ್ನು ಉಗಾಂಡಾ ಪೊಲೀಸರು ಅಕ್ರಮವಾಗಿ ಬಂಧಿಸಿಟ್ಟಿದ್ದಾರೆಂದು ಪಂಕಜ್ ಓಸ್ವಾಲ್ ಅವರು ವಿಶ್ವಸಂಸ್ಥೆಗೆ ದೂರು ನೀಡಿದ್ದು, ಮಧ್ಯಪ್ರವೇಶಕ್ಕೆ ಒತ್ತಾಯಿಸಿದ್ದಾರೆ. ಓಸ್ವಾಲ್ ಕಂಪೆನಿಯ ಮಾಜಿ ಉದ್ಯೋಗಿಯೊಬ್ಬ ಎರಡು ಲಕ್ಷ ಡಾಲರ್ ಮೊತ್ತವನ್ನು ಸಾಲ ಪಡೆದು, ಸಂಸ್ಥೆಗೆ ಸಂಬಂಧಪಟ್ಟ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾನೆ. ಆದರೆ, ಇದನ್ನು ತನ್ನ ಪುತ್ರಿ ಮಾಡಿದ್ದಾಗಿ ಆರೋಪ ಹೊರಿಸಿದ್ದಾರೆ. ಆ ಮೊತ್ತವನ್ನು ಓಸ್ವಾಲ್ ಕುಟುಂಬಸ್ಥರನ್ನೇ ಗ್ಯಾರಂಟಿಯಾಗಿಸಿ ಸಾಲ ಪಡೆಯಲಾಗಿತ್ತು. ಪಂಕಜ್ ಓಸ್ವಾಲ್ ಪಂಜಾಬ್ ಮೂಲದವರಾಗಿದ್ದು, ಯುರೋಪ್ ದೇಶದಲ್ಲಿ ನೆಲೆಸಿದ್ದು ನಾನಾ ರೀತಿಯ ಉದ್ಯಮಗಳನ್ನು ನಡೆಸುತ್ತಿದ್ದಾರೆ. ಇತ್ತೀಚೆಗೆ ಇವರ ಕುಟುಂಬ ಸ್ವಿಜರ್ಲೆಂಡಿನಲ್ಲಿ ವಿಶ್ವದ ಅತಿ ದುಬಾರಿ ಎನಿಸಿರುವ ಬಂಗಲೆಗಳನ್ನು 200 ಮಿಲಿಯನ್ ಪೌಂಡ್ ಕೊಟ್ಟು ಖರೀದಿಸಿದ್ದು ದೊಡ್ಡ ಸುದ್ದಿಯಾಗಿತ್ತು.