-->
ಈ ರೈಲು ಸುರಂಗ ಮಾರ್ಗ ಪ್ರವೇಶಿಸಿದಂತೆ ಮಾಯವಾಗಿದೆ: 113ವರ್ಷವಾದರೂ ಪತ್ತೆಯಾಗಿಲ್ಲ ಈ ನಿಗೂಢ ರೈಲು

ಈ ರೈಲು ಸುರಂಗ ಮಾರ್ಗ ಪ್ರವೇಶಿಸಿದಂತೆ ಮಾಯವಾಗಿದೆ: 113ವರ್ಷವಾದರೂ ಪತ್ತೆಯಾಗಿಲ್ಲ ಈ ನಿಗೂಢ ರೈಲು


ರೋಮ್: ನಿಗೂಢ ರಹಸ್ಯಗಳನ್ನು ಅರಿಯಲು ಎಲ್ಲರೂ ಹಾತೊರೆಯುತ್ತಿರುತ್ತಾರೆ. ಅದರಲ್ಲೂ ಭೂತ, ಪ್ರೇತ, ಪಿಶಾಚಿಗಳ ಕತೆಗಳು ಸಾವಿರಾರಿದೆ. ಈ ಕತೆಗಳು ತಲೆ ತಲೆಮಾರುಗಳಿಂದ ಸಾಗುತ್ತಿದೆ. ಆದರೆ ಮೊದಲಿನ ಕತೆಗೂ ಈಗಿನ ಕತೆಗೂ ಹಲವು ವ್ಯತ್ಯಾಸಗಳಾಗಿರುತ್ತದೆ. ಹೀಗೆ ಇಟಲಿಯ ರೈಲಿನ ಸುತ್ತ ಒಂದು ನಿಗೂಢ ಕತೆಯಿದೆ. ರೋಮ್ - ಝೆನ್ನಿತ್ ನಡುವಿನ ರೈಲು ಸುರಂಗ ಮಾರ್ಗ ಪ್ರವೇಶಿಸಿದ ಬೆನ್ನಲ್ಲೇ ನಾಪತ್ತೆಯಾದ ಕತೆ ಈಗಲೂ ನಿಗೂಢಗಳ ಆಗರವಾಗಿ ಉಳಿದುಕೊಂಡಿದೆ. ಉತ್ತರ ಸಿಗದೆ, ಖಚಿತತೆ ಇಲ್ಲದ, ಈ ನಿಗೂಢ ರೈಲಿನ ಕತೆ ಇಲ್ಲಿದೆ.


1911ರ ಜೂನ್ 14ರಂದು ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಪ್ರಚಾರದ ಅಂಗವಾಗಿ ಈ ರೈಲು ಸಂಚಾರ ಆಯೋಜಿಸಲಾಗಿತ್ತು. 106 ಪ್ರಯಾಣಿಕರು ಹಾಗೂ 6 ಸಿಬ್ಬಂದಿ ರೈಲು ಪ್ರಯಾಣ ಆರಂಭಿಸಿದ್ದರು. ಇಟಲಿಯ ಝೆನ್ನಿತ್ ಖಾಸಗಿ ಕಂಪೆನಿ ಈ ರೈಲು ನಿರ್ಮಿಸಿತ್ತು. ಆದ್ದರಿಂದ ಈ ರೈಲನ್ನು ಪ್ರಚಾರದ ಅಂಗವಾಗಿ ಒಂದಷ್ಟು ಪ್ರಯಾಣಿಕರನ್ನು ಉಚಿತವಾಗಿ ಕರೆದೊಯ್ಯಲು ನಿರ್ಧರಿಸಿದೆ. ಆದ್ದರಿಂದ ಪ್ರಯಾಣಿಕರು ಇಟಲಿಯ ಸುಂದರ ತಾಣಗಳನ್ನು ರೈಲಿನ ಮೂಲಕ ಸವಿಯಲ್ಲು ಆಗಮಿಸಿದ್ದರು.


ರೈಲಿನಲ್ಲಿ ಆಹಾರದ ವ್ಯವಸ್ಥೆ ಮಾಡಲಾಗಿತ್ತು. ಆದರೆ ಪ್ರಯಾಣಿಕರನ್ನು ಹೊತ್ತೊಯ್ದ ಈ ರೈಲು ಮರಳಿ ರೋಮ್ ನಗರ ಸೇರಿಲ್ಲ ಅನ್ನೋದು ವರದಿ. ಆದರೆ ಈ ವರದಿಗೆ ಸ್ಪಷ್ಟ ಆಧಾರಗಳಿಲ್ಲ. ಈ ನಾಪತ್ತೆಯಾದ ರೈಲಿನ ಕುರಿತು ಹಲವು ಕತೆಗಳಿವೆ. ರೈಲು ನಗರದಿಂದ ಹೊರಟು ಹಳ್ಳಿ, ಕಾಡಿನ ಮೂಲಕ ಸಾಗಿತ್ತು. ಸುರಂಗ ಮಾರ್ಗದ ಮೂಲಕ ಸಾಗಿದ ರೈಲು ಮರಳಿ ಬಂದಿಲ್ಲ. ಮತ್ತೆ ಪತ್ತೆಯಾಗಿಲ್ಲ. ನಾಪತ್ತೆಯಾದ ರೈಲಿಗಾಗಿ ಹುಡುಕಾಟ ನಡೆಸಲಾಗಿತ್ತು. ಆದರೆ ಸುಳಿವು ಪತ್ತೆಯಾಗಿರಲಿಲ್ಲ ಎಂದು ಉಲ್ಲೇಖಿಸಿದ್ದಾರೆ. 


ಈ ರೈಲು ನಿಜಕ್ಕೂ ನಾಪತ್ತೆಯಾಗಿತ್ತೋ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರವಿಲ್ಲ. ಆದರೆ ಹಲವರ ಪ್ರಕಾರ ಇದು ಪಿಶಾಚಿ ಟ್ರೈನ್. ಈ ರೈಲಿನಲ್ಲಿ ತೆರಳಿದ ಯಾರೊಬ್ಬರೂ ಈವರೆಗೆ ಪತ್ತೆಯಾಗಿಲ್ಲ ಎಂದಿದ್ದಾರೆ. ಆದರೆ ರೈಲು ನಾಪತ್ತೆಯಾದ ಕೆಲ ವರ್ಷಗಳ ಬಳಿಕ ವೈದ್ಯರೊಬ್ಬರು 106 ರೈಲು ಪ್ರಯಾಣಿಕರನ್ನು ಮೆಕ್ಸಿಕೋ ನಗರದ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಅನ್ನೋ ಮಾಹಿತಿ ನೀಡಿದ್ದರು. ಇಟಲಿಯ ನಾಪತ್ತೆಯಾದ ಸ್ಥಳಗಳಿಂದ ಮೆಕ್ಸಿಕೋ ನಗರ ಬರೋಬ್ಬರಿ 10 ಸಾವಿರ ಕಿಲೋಮೀಟರ್‌ಗೂ ಅಧಿಕ. ಇನ್ನು ಇಟಲಿ  ಹಾಗೂ ಮೆಕ್ಸಿಕೋ ಎರಡು ದೇಶಗಳ ನಡುವೆ ಅಂಟ್ಲಾಟಿಕಾ ಮಹಾಸಾಗರವಿದೆ. ಹೀಗಾಗಿ ಈ ಮಾತು ಸುಳ್ಳು ಅನ್ನೋದು ಸ್ಪಷ್ಟ. ಇನ್ನು ಕೆಲ ವರದಿಗಳ ಪ್ರಕಾರ ರೈಲು ಅಪಘಾತಕ್ಕೀಡಾಗುತ್ತಿದ್ದಂತೆ ಹಲವರು ರೈಲಿನಿಂದ ಜಿಗಿದಿದ್ದಾರೆ. ಈ ಪೈಕಿ ಇಬ್ಬರು ಮಾತ್ರ ಬದುಕುಳಿದಿದ್ದರು ಎಂದಿದ್ದಾರೆ. ಬದುಕಿಳಿದವರು ಎಲ್ಲಿದ್ದಾರೆ ಅನ್ನೋ ಪ್ರಶ್ನೆಗೂ ಉತ್ತರವಿಲ್ಲ.


ಇಟಲಿಯ ಘೋಸ್ಟ್ ರೈಲು ಎಂದೇ ಕುಖ್ಯಾತಿ ಪಡೆದಿರುವ ಈ ನಾಪತ್ತೆಯಾದ ರೈಲು ಘಟನೆ ನಿಜಕ್ಕೂ ನಡೆದಿತ್ತಾ ಅನ್ನೋದಕ್ಕೂ ಸ್ಪಷ್ಟ ದಾಖಲೆಗಳಿಲ್ಲ. ಇಟಲಿ ರೈಲು ವಿಭಾಗದಲ್ಲೂ ಈ ಕುರಿತು ದಾಖಲೆ ಇಲ್ಲ. ಕಾರಣ ಅದು ಇಟಲಿ ರೈಲು ಇತಿಹಾಸದ ಆರಂಭಿಕ ದಿನಗಳು. ಹೀಗಾಗಿ ಯಾವುದರಲ್ಲೂ ಸ್ಪಷ್ಟತೆ ಇಲ್ಲ. ಈಗಲೂ ಈ ರೈಲು, ಪ್ರಯಾಣಿಕರು ಹಾಗೂ ಅವಶೇಷ ಪತ್ತೆ ಇಲ್ಲ ಅನ್ನೋ ವರದಿಗಳೇ ಹೆಚ್ಚು ಚಾಲ್ತಿಯಲ್ಲಿದೆ. ಯಾವ ವರದಿಗೂ ದಾಖಲೆ ಇಲ್ಲ. 


Ads on article

Advertise in articles 1

advertising articles 2

Advertise under the article