ಶಬರಿಮಲೆಯ 18ಪವಿತ್ರ ಮೆಟ್ಟಿಲುಗಳ ಮೇಲೆ ನಿಂತು ಕೇರಳ ಪೊಲೀಸರಿಂದ ಗ್ರೂಪ್ ಫೋಟೊಶೂಟ್
ಕೇರಳ: ಇಲ್ಲಿನ ಶಬರಿಮಲೆ ದೇಗುಲದಲ್ಲಿ ಭದ್ರತೆ ನಿಯೋಜಿಸಿರುವ ಪೊಲೀಸರು, ದೇಗುಲದ ‘ಪದಿನೆಟ್ಟಂ ಪಡಿ’ (18 ಮೆಟ್ಟಿಲು) ಮೇಲೆ ನಿಂತು ಗ್ರೂಪ್ ಫೋಟೊ ತೆಗೆಸಿಕೊಂಡಿದ್ದಾರೆ. ಸದ್ಯ ಇದು ಭಾರೀ ವಿವಾದಕ್ಕೆ ಕಾರಣವಾಗಿದೆ. ವಿಎಚ್‌ಪಿ ಕೇರಳ ಘಟಕ ಇದನ್ನು ತೀವ್ರವಾಗಿ ಖಂಡಿಸಿದ್ದು, ಅಯ್ಯಪ್ಪ ಸ್ವಾಮಿಗೆ ಬೆನ್ನು ತೋರಿಸುವ ಸಂಪ್ರದಾಯ ಶಬರಿಮಲೆಯಲ್ಲಿ ಇಲ್ಲ. ಪೊಲೀಸರು ಅಯ್ಯಪ್ಪ ಸ್ವಾಮಿಗೆ ಅಗೌರವ ಸೂಚಿಸಿ, ಸಂಪ್ರದಾಯವನ್ನು ಉಲ್ಲಂಘಿಸಿದ್ದಾರೆ ಎಂದು ಟೀಕಿಸಿದೆ. ಈ ನಡುವೆ ಕೇರಳದ ಹೆಚ್ಚುವರಿ ಮಹಾಪೊಲೀಸ್ ನಿರ್ದೇಶಕರು ಈ ಬಗ್ಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಶಬರಿಮಲೆಯ ಅಯ್ಯಪ್ಪ ಸ್ವಾಮಿಯ ಗರ್ಭಗುಡಿಗೆ ಬೆನ್ನು ಹಾಕಿ ಎಲ್ಲಾ ಪೊಲೀಸ್ ಅಧಿಕಾರಿಗಳು ಸಾಲಾಗಿ 18 ಮೆಟ್ಟಿಲುಗಳ ಮೇಲೆ ನಿಂತಿದ್ದಾರೆ. ಈ ಚಿತ್ರವು ಸಂಪ್ರದಾಯದ ಗಂಭೀರ ಉಲ್ಲಂಘನೆಯಾಗಿದೆ ಎಂದು ಭಕ್ತರು ಬೇಸರ ವ್ಯಕ್ತಪಡಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ತಕ್ಷಣ ಸ್ಪಂದಿಸಿದ್ದು, ಶಬರಿಮಲೆಯ ಮುಖ್ಯ ಸಂಯೋಜಕ ಎಡಿಜಿಪಿ ಎಸ್ ಶ್ರೀಜಿತ್ ತಕ್ಷಣದ ತನಿಖೆಗೆ ಸೂಚನೆ ನೀಡಿದ್ದಾರೆ. ಘಟನೆ ಕುರಿತು ವರದಿ ಸಲ್ಲಿಸಲು ಸನ್ನಿಧಾನಂ ವಿಶೇಷಾಧಿಕಾರಿ ಕೆ.ಇ.ಬೈಜು ಅವರಿಗೆ ವಹಿಸಲಾಗಿತ್ತು.
ಪವಿತ್ರ ಕ್ಷೇತ್ರವಾದ ‘ಸನ್ನಿಧಾನಂ’ನಲ್ಲಿ ಮೊದಲ ಬ್ಯಾಚ್ ಪೊಲೀಸ್ ಅಧಿಕಾರಿಗಳ ನಿಯೋಜನೆ ಮುಗಿದ ಬಳಿಕ ರವಿವಾರ ಈ ಘಟನೆ ನಡೆದಿದೆ. ನಿಯೋಜಿತ ಗುಂಪು ತಮ್ಮ ಕೆಲಸವನ್ನು ಮುಗಿಸಿ ಹಿಂತಿರುಗುವ ಮೊದಲು ಗ್ರೂಪ್ ಫೋಟೋವನ್ನು ತೆಗೆದುಕೊಂಡಿದೆ.
ಶಬರಿಮಲೆ ಆಚರಣೆಗಳಲ್ಲಿ 18ಮೆಟ್ಟಿಲುಗಳು ಅಪಾರವಾದ ಸಾಂಕೇತಿಕ ಮತ್ತು ಆಧ್ಯಾತ್ಮಿಕ ಪ್ರಾಮುಖ್ಯತೆಯನ್ನು ಹೊಂದಿವೆ. ಭಕ್ತರು ಆಳವಾದ ಗೌರವದಿಂದ ಅವುಗಳನ್ನು ಮುಟ್ಟಿ ಕಣ್ಣುಗೊತ್ತಿಕೊಳ್ಳುತ್ತಾರೆ. ಸಂಪ್ರದಾಯಗಳ ಪ್ರಕಾರ, ಪುರೋಹಿತರು ಸಹ ಪವಿತ್ರತೆಯನ್ನು ಕಾಪಾಡಿಕೊಳ್ಳಲು ಗರ್ಭಗುಡಿಯ ಮುಖಾಂತರ ಈ ಹಂತಗಳನ್ನು ಇಳಿಯುತ್ತಾರೆ.
ನವೆಂಬರ್ 15ರಂದು ಪ್ರಾರಂಭವಾದ 2ತಿಂಗಳ ಅವಧಿಯ ಮಂಡಲ-ಮಕರವಿಳಕ್ಕು ಉತ್ಸವದ ಅವಧಿಯಲ್ಲಿ ದೇವಾಲಯದ ಬಾಗಿಲುಗಳನ್ನು ಮಧ್ಯಾಹ್ನ ಮುಚ್ಚಿದ ಬಳಿಕ ಫೋಟೋಶೂಟ್ ನಡೆದಿದೆ. ಆನ್‌ಲೈನ್ ಬುಕ್ಕಿಂಗ್ ಮೂಲಕ ನಿಯಂತ್ರಿಸಲ್ಪಡುವ ದೈನಂದಿನ 70,000 ಭಕ್ತರ ಒಳಹರಿವನ್ನು ನಿರ್ವಹಿಸಲು ನಿಯೋಜಿಸಲಾದ ಮೊದಲ ಬ್ಯಾಚ್‌ನ ಸಿಬ್ಬಂದಿ ಇದರಲ್ಲಿದ್ದಾರೆ. ಹೊಸ ತಂಡವು ಜವಾಬ್ದಾರಿಯನ್ನು ವಹಿಸಿಕೊಳ್ಳುವ ಮೊದಲು, ಗ್ರೂಪ್ ಫೋಟೋವನ್ನು ಅವರ ಕರ್ತವ್ಯದ ಕೊನೆಯಲ್ಲಿ ತೆಗೆದುಕೊಳ್ಳಲಾಗಿದೆ.
ಈ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಪವಿತ್ರ ಪದ್ಧತಿಗಳನ್ನು ಕಡೆಗಣಿಸಿದ್ದಕ್ಕಾಗಿ ಟೀಕೆಗಳು ವ್ಯಕ್ತವಾಗಿವೆ. ಹಿಂದೂ ಸಂಘಟನೆಗಳು ಪೊಲೀಸರು ಈ ಬಗ್ಗೆ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದವು, ದೇವಾಲಯದಲ್ಲಿ ನಿಯೋಜಿಸಲಾದ ಅಧಿಕಾರಿಗಳಲ್ಲಿ ದೇವಾಲಯದ ಸಂಪ್ರದಾಯಗಳ ಬಗ್ಗೆ ಉತ್ತಮ ಜಾಗೃತಿಯ ಅಗತ್ಯವಿದೆ ಅನ್ನೋದನ್ನ ಒತ್ತಿ ಹೇಳಿದವು.