2ರೂ. ಇದ್ದ ಷೇರು ಬೆಲೆ ಈಗ 65ರೂ. ನಾಲ್ಕು ವರ್ಷಗಳಲ್ಲೇ 3700% ಲಾಭ
ಮುಂಬೈ: ಷೇರು ಮಾರುಕಟ್ಟೆ ನ.21ರಂದು ಮತ್ತೊಮ್ಮೆ ಅಲ್ಲೋಲಕಲ್ಲೋಲವಾಗಿದೆ. ಒಂದೆಡೆ ಗೌತಮ್ ಅದಾನಿ ಮೇಲಿನ ವಂಚನೆ ಮತ್ತು ಲಂಚ ಆರೋಪದ ಬಳಿಕ ಅದಾನಿ ಗ್ರೂಪ್‌ನ ಎಲ್ಲಾ ಷೇರುಗಳು ಪಾತಾಳಕ್ಕೆ ಕುಸಿದಿದೆ. ಮಾರುಕಟ್ಟೆಯ ಒತ್ತಡದಲ್ಲಿ ಹಲವು ದೊಡ್ಡ ಕಂಪನಿಗಳ ಷೇರುಗಳು ಕುಸಿತ ಕಂಡಿದೆ. ಮತ್ತೊಂದೆಡೆ, ಕೆಲವು ಷೇರುಗಳು ನಿರಾತಂಕವಾಗಿ ಏರಿಕೆ ಕಂಡಿದೆ. ಇದರಲ್ಲಿ ವಿಂಡ್ ಎನರ್ಜಿ ಕಂಪನಿಯ ಷೇರು ಕೂಡ ಸೇರಿದೆ, ಇದು ಸತತವಾಗಿ ಹಲವು ದಿನಗಳಿಂದ ಏರಿಕೆ ಕಾಣುತ್ತಿದೆ. ನಾಲ್ಕು ವರ್ಷಗಳ ಹಿಂದೆ ಈ ಷೇರಿನ ಬೆಲೆ 2 ರೂಪಾಯಿಗಿಂತ ಕಡಿಮೆಯಿತ್ತು. ನಾಲ್ಕು ವರ್ಷದ ಅವಧಿಯಲ್ಲಿ ಷೇರಿನ ಲಾಭ 3700% ಕ್ಕಿಂತ ಹೆಚ್ಚಾಗಿದೆ. ಮಾರುಕಟ್ಟೆ ಕುಸಿತದ ನಡುವೆಯೂ ಈ ಷೇರು ಏರಿಕೆ ಕಾಣುತ್ತಿದೆ.
ನಾವು ಮಾತನಾಡುತ್ತಿರುವ ಷೇರು ವಿಂಡ್ ಎನರ್ಜಿ ಕಂಪನಿ ಸುಜ್ಲಾನ್ ಎನರ್ಜಿ (Suzlon Energy). ಒಂದು ಕಾಲದಲ್ಲಿ ಈ ಷೇರು 99%ಕ್ಕಿಂತ ಹೆಚ್ಚು ಕುಸಿದು 1.72 ರೂಪಾಯಿಗೆ ತಲುಪಿತ್ತು. ಬಳಿಕ, ಈ ಷೇರು ಮತ್ತೆ ಭಾರಿ ಏರಿಕೆ ಕಂಡುಬಂದಿದೆ, ಅದು ಇಂದಿಗೂ ಮುಂದುವರೆದಿದೆ. ಈ ಷೇರು ನಾಲ್ಕು ವರ್ಷಗಳಲ್ಲಿ ತನ್ನ ಹೂಡಿಕೆದಾರರನ್ನು ಶ್ರೀಮಂತರನ್ನಾಗಿ ಮಾಡಿದೆ.
ಸುಜ್ಲಾನ್ ಎನರ್ಜಿಯ ಷೇರು ನವೆಂಬರ್ 21, 2024 ರಂದು ದುರ್ಬಲ ಮಾರುಕಟ್ಟೆಯಲ್ಲಿಯೂ 5% ರಷ್ಟು ಏರಿಕೆಯಾಗಿದೆ. ಮಾರುಕಟ್ಟೆ ಮುಕ್ತಾಯದ ವೇಳೆಗೆ ಒಂದು ಷೇರಿನ ಬೆಲೆ 65.33 ರೂಪಾಯಿಗಳಾಗಿತ್ತು. ಕಳೆದ ನಾಲ್ಕು ದಿನಗಳಲ್ಲಿ ಈ ಷೇರು 20% ರಷ್ಟು ಏರಿಕೆಯಾಗಿದೆ. ಇದರಲ್ಲಿ ಹೂಡಿಕೆದಾರರ ಆಸಕ್ತಿಯೂ ಹೆಚ್ಚಾಗಿದೆ. ಷೇರಿನ 52 ವಾರಗಳ ಗರಿಷ್ಠ 86.04 ರೂಪಾಯಿಗಳು ಮತ್ತು 52 ವಾರಗಳ ಕನಿಷ್ಠ 33.83 ರೂಪಾಯಿಗಳಾಗಿದೆ.
ಜನವರಿ 11, 2008 ರಂದು, ಅಂದರೆ 16 ವರ್ಷಗಳ ಹಿಂದೆ, ಸುಜ್ಲಾನ್ ಎನರ್ಜಿ ಷೇರಿನ ಬೆಲೆ 390.12 ರೂಪಾಯಿಗಳಾಗಿತ್ತು. ಮಾರ್ಚ್ 27, 2020 ರಂದು, ಕಂಪನಿಯ ಷೇರುಗಳು 99% ಕ್ಕಿಂತ ಹೆಚ್ಚು ಕುಸಿದು 1.72 ರೂಪಾಯಿಗೆ ತಲುಪಿತ್ತು. ಅಲ್ಲಿಂದ ಷೇರುಗಳು ಮತ್ತೆ ಏರಿಕೆ ಕಂಡು ಹೂಡಿಕೆದಾರರಿಗೆ 3705% ರಷ್ಟು ಬಲವಾದ ಲಾಭ ದೊರಕಿದೆ. ಕಳೆದ ಮೂರು ವರ್ಷಗಳಲ್ಲಿ ಈ ಷೇರು 933% ರಷ್ಟು ಲಾಭವನ್ನು ನೀಡಿದೆ. ಈ ಅವಧಿಯಲ್ಲಿ 6 ರೂಪಾಯಿಗಳಿಂದ ಷೇರು 65 ರೂಪಾಯಿಗಳನ್ನು ದಾಟಿದೆ. ಕಳೆದ ಎರಡು ವರ್ಷಗಳಲ್ಲಿ ಸುಜ್ಲಾನ್ ಎನರ್ಜಿಯ ಷೇರುಗಳಲ್ಲಿ 708% ರಷ್ಟು ಏರಿಕೆಯಾಗಿದೆ.
ಕಳೆದ ಒಂದು ವರ್ಷದ ಬಗ್ಗೆ ಹೇಳುವುದಾದರೆ, ಸುಜ್ಲಾನ್ ಎನರ್ಜಿಯ ಷೇರು 66% ರಷ್ಟು ಏರಿಕೆಯಾಗಿದೆ. ಕಳೆದ ವರ್ಷ ನವೆಂಬರ್ 21, 2023 ರಂದು ಈ ಷೇರಿನ ಬೆಲೆ 39.28 ರೂಪಾಯಿಗಳಾಗಿತ್ತು, ಅದು ಈಗ 65.46 ರೂಪಾಯಿಗಳಿಗೆ ಏರಿದೆ. 6 ತಿಂಗಳಲ್ಲಿ ಈ ಷೇರಿನ ಲಾಭ 48% ರಷ್ಟಿದೆ. ಈ ವರ್ಷ 2024 ರಲ್ಲಿ ಇಲ್ಲಿಯವರೆಗೆ ಸುಜ್ಲಾನ್ ಎನರ್ಜಿಯ ಷೇರು 70% ಕ್ಕಿಂತ ಹೆಚ್ಚು ಲಾಭವನ್ನು ಗಳಿಸಿದೆ.
ಗಮನಿಸಿ- ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಅಪಾಯವಾಗಿದೆ. ಹೂಡಿಕೆಯ ಮೊದಲು ನಿಮ್ಮ ಮಾರುಕಟ್ಟೆ ತಜ್ಞರ ಸಲಹೆ ಪಡೆಯಿರಿ.