ಒಂದು ವರ್ಷ ಸ್ಯಾಲರಿಯಿಲ್ಲ, ಅಭ್ಯರ್ಥಿಗಳೇ 20ಲಕ್ಷ ರೂ. ಟೊಮ್ಯಾಟೊಗೆ ನೀಡಬೇಕು ಅಂದ್ರೂ ನೌಕರಿಗಾಗಿ ಬಂತು 10,000 ಅರ್ಜಿ!
ಗುರುಗಾಂವ್: ಜೊಮ್ಯಾಟೋ ಸಿಇಒ ದೀಪಿಂದರ್ ಗೋಯೆಲ್ ತಮ್ಮ ಎಕ್ಸ್ ಖಾತೆಯಲ್ಲಿ ನೇಮಕಾತಿ ಬಗ್ಗೆ ಪೋಸ್ಟ್ ಒಂದನ್ನು ಹಾಕಿದ್ದರು. ಇದಕ್ಕೆ ಭರ್ಜರಿ ಸ್ಪಂದನೆ ಸಿಕ್ಕಿದೆ. ಜೊಮ್ಯಾಟೋ ಚೀಫ್ ಸ್ಟಾಫ್ ಹುದ್ದೆಗೆ ನೇಮಕಾತಿ ಮಾಡುತ್ತಿದೆ ಎಂದು ದೀಪಿಂದರ್ ಗೋಯೆಲ್ ತಿಳಿಸಿದ್ದರು. ಇದರೊಂದಿಗೆ ಮೊದಲ 1ವರ್ಷ ಯಾವುದೇ ವೇತನವಿಲ್ಲ. ಜೊತೆಗೆ 20 ಲಕ್ಷ ರೂ. ಮೊತ್ತವನ್ನು ಆಯ್ಕೆಯಾಗಿ ಜೊಮ್ಯಾಟೋ ಸೇರಬಯಸುವ ಅಭ್ಯರ್ಥಿಯೇ ನೀಡಬೇಕು ಎಂದು ಕಂಡಿಷನ್ ಹಾಕಿದ್ದರು. ಹಲವು ಷರತ್ತುಗಳಲ್ಲಿ ಈ 2ಕಂಡೀಷನ್‌ಗಳಿಗೆ ಜನತೆ ಹೆಚ್ಚಿನ ಆಸಕ್ತಿ ವಹಿಸುವ ಸಾಧ್ಯತೆ ಇಲ್ಲ ಎಂದುಕೊಳ್ಳಲಾಗಿತ್ತು. ಆದರೆ ಇವರ ಲೆಕ್ಕಾಚಾರ ತಪ್ಪಿದೆ. ಕಾರಣ ಸ್ಯಾಲರಿ ಇಲ್ಲ, 20 ಲಕ್ಷ ರೂಪಾಯಿ ನೀವೇ ಕೊಡಬೇಕೆಂದರೂ ಬರೋಬ್ಬರಿ 10,000 ಅರ್ಜಿಗಳು ಬಂದಿದೆ.
ನೇಮಕಾತಿ ಬಗ್ಗೆ ಎರಡನೇ ಪೋಸ್ಟ್ ಹಂಚಿಕೊಂಡಿರುವ ದೀಪಿಂದರ್ ಗೋಯಲ್ ಈ ಮಾಹಿತಿಯನ್ನು ಹಂಚಿದ್ದಾರೆ. ನಮಗೆ 10,000 ಅರ್ಜಿಗಳು ಬಂದಿದ್ದು, ಹಲವರು ಅಳೆದು ತೂಗಿ ಅರ್ಜಿ ಹಾಕಿದ್ದಾರೆ ಎಂದು ದೀಪಿಂದರ್ ಗೋಯಲ್ ಹೇಳಿದ್ದಾರೆ. ಬಂದಿರುವ 10,000 ಅರ್ಜಿಗಳ ಪ್ರಮುಖ ಸಾರಂಶವನ್ನು ಗೋಯಲ್ ಹೇಳಿದ್ದಾರೆ. ಈ ಅರ್ಜಿಗಳ ಪೈಕಿ ಹಲವರ ಬಳಿ ದುಡ್ದಿದೆ, ಮತ್ತೆ ಕೆಲವರ ಬಳಿ ಸಂಪೂರ್ಣ ದುಡ್ಡಿಲ್ಲ ಸ್ವಲ್ಪ ಇದೆ, ಮತ್ತೆ ಒಂದಷ್ಟು ಜನರಲ್ಲಿ ದುಡ್ಡಿಲ್ಲ, ಇನ್ನೊಂದಷ್ಟು ಜನರಲ್ಲಿ ನಿಜಕ್ಕೂ ನಯಾ ಪೈಸೆ ಇಲ್ಲ. ಇಂದು ಸಂಜೆ 6 ಗಂಟೆ ತನಕ ಬಂದ ಅರ್ಜಿಗಳನ್ನು ಮಾತ್ರ ನಾವು ಪರಿಗಣಿಸುತ್ತೇವೆ. ಬಳಿಕ ಬಂದ ಅರ್ಜಿಗಳನ್ನು ಮಾನ್ಯ ಮಾಡುವುದಿಲ್ಲ. ಕಾರಣ 6 ಗಂಟೆಗೆ ಈ ನೇಮಕಾತಿಯ ಅರ್ಜಿ ಸ್ವೀಕಾರ ಅಂತ್ಯಗೊಳ್ಳಲಿದೆ. ಮುಂದಿನ ಅಪ್‌ಡೇಟ್‌ಗಾಗಿ ಕಾಯುತ್ತಿರಿ ಎಂದು ಗೋಯಲ್ ಎಕ್ಸ್ ಮಾಡಿದ್ದಾರೆ.
ಇದೀಗ ದೀಪಿಂದರ್ ಗೋಯಲ್ ಅವರ ಜೊಮ್ಯಾಟೋ ಕಂಪೆನಿಯಲ್ಲಿ ಚೀಫ್ ಸ್ಟಾಫ್ ಹುದ್ದೆ ಭಾರಿ ಹಂಗಾಮ ಸೃಷ್ಟಿಸಿದೆ. ಈ ಹುದ್ದೆಯ ಜವಾಬ್ದಾರಿ, ಆರಂಭಿಕ ದಿನಗಳಲ್ಲಿ ಆಯ್ಕೆಯಾದ ಅಭ್ಯರ್ಥಿ ಮಾಡಬೇಕಾದ ಕರ್ತವ್ಯಗಳ ಕುರಿತು ಗೋಯಲ್ ಮೊದಲ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದರು.
ಪ್ರಮುಖವಾಗಿ ಜೊಮ್ಯಾಟೊ ಸೇರಬಯಸುವ ಅಭ್ಯರ್ಥಿಗೆ ಹಸಿವಿರಬೇಕು. ಸಾಮಾನ್ಯ ಜ್ಞಾನವಿರಬೇಕು. ಆದರೆ ಹೆಚ್ಚಿನ ಅನುಭವ ಬೇಡ. ಕಾರಣ ಯಾವುದೇ ಷರತ್ತುಗಳು, ಕೆಲಸ ಹಾಗೇ ಇರಬೇಕು, ಹೀಗೆ ಇರಬೇಕು ಅನ್ನೋದು ಇರಬಾರದು. ಸರಳತೆ ಇರಬೇಕು, ಅರ್ಹತೆ ಇರಬಾರದು. ಸರಿಯಾದ ನಿರ್ಧಾರ, ಸರಿಯಾಗಿ ಕೆಲಸ ಮಾಡುವವನಾಗಿರಬೇಕು. ಸವಾಲುಗಳನ್ನು ಮೆಟ್ಟಿ ನಿಲ್ಲಬೇಕು. ಜೊಮ್ಯಾಟೋ, ಬ್ಲಿಂಕಿಟ್, ಡಿಸ್ಟಿಕ್ಟ್ ಹೈಪರ್ ಪ್ಯೂರ್, ಫೀಡಿಂಗ್ ಇಂಡಿಯಾದ ಭವಿಷ್ಯ ರೂಪಿಸಬೇಕು ಎಂದು ದೀಪಿಂದರ್ ಗೋಯಲ್ ಚೀಪ್ ಸ್ಟಾಪ್ ಕೆಲಸದ ಕುರಿತು ವಿವರಣೆ ಜೊತೆಗೆ ಅಭ್ಯರ್ಥಿ ಅರ್ಹತೆ ಕುರಿತು ವಿವರಿಸಿದ್ದಾರೆ.
ಈ ಕೆಲಸದಿಂದ ಅಭ್ಯರ್ಥಿಗೆ ಏನು ಸಿಗಲಿದೆ ಅನ್ನೋ ಪ್ರಶ್ನೆಗೂ ಗೋಯಲ್ ಉತ್ತರಿಸಿದ್ದಾರೆ. ನನ್ನೊಂದಿಗೆ ಹಾಗೂ ಗ್ರಾಹಕರೊಂದಿಗೆ ಸ್ಮಾರ್ಟ್ ಟೆಕ್‌ನೊಂದಿಗೆ ಕೆಲಸ ಮಾಡುವ ಮೂಲಕ ನೀವು ಪ್ರತಿಷ್ಠಿ ಶಿಕ್ಷಣ ಸಂಸ್ಥೆಯಲ್ಲಿ 2 ಅಥವಾ 3 ವರ್ಷದ ಡಿಗ್ರಿಗಿಂತ ಇಲ್ಲಿ 10 ಪಟ್ಟು ಹೆಚ್ಚು ಕಲಿಯುತ್ತೀರಿ. ಈ ಕೆಲಸಕ್ಕೆ ಆಯ್ಕೆಯಾಗುವ ಅಭ್ಯರ್ಥಿಗೆ ಮೊದಲ ವರ್ಷ ಯಾವುದೇ ವೇತನ ನೀಡಲಾಗುವುದಿಲ್ಲ. ಅಲ್ಲದೆ 20 ಲಕ್ಷ ರೂಪಾಯಿ ಹಣವನ್ನು ಅಭ್ಯರ್ಥಿ ಜೊಮ್ಯಾಟೋಗೆ ನೀಡಬೇಕು. ಇದು ಡೋನೇಶನ್ ಆಗಿ ಫೀಡ್ ಇಂಡಿಯಾಗೆ ಹಸ್ತಾಂತರಿಸಲಾಗುತ್ತದೆ
ನಾವಿಲ್ಲಿ ಹಣ ಉಳಿಸಲು ಈ ಹುದ್ದೆ ನೀಡುತ್ತಿಲ್ಲ. ಮೊದಲ ವರ್ಷ ಯಾವುದೇ ಸ್ಯಾಲರಿ ಇಲ್ಲ, 2ನೇ ವರ್ಷದಿಂದ ಉತ್ತಮ ಅಂದರೆ ಕನಿಷ್ಠ 50 ಲಕ್ಷ ರೂಪಾಯಿಗಿಂತ ಮೇಲ್ಪಟ್ಟು ವೇತನ ನೀಡಲಾಗುತ್ತದೆ. ಆದರೆ ಈ ಸ್ಯಾಲರಿ ಮಾತುಕತೆಯನ್ನು 2ನೇ ವರ್ಷದ ಆರಂಭದಲ್ಲಿ ಮಾಡಲಾಗುತ್ತದೆ. ಉತ್ತಮ ಕಲಿಕಾ ಮನೋಭಾವ ಇರಲೇಬೇಕು. ಇದು ಫ್ಯಾನ್ಸಿ ಜಾಬ್ ಅಲ್ಲ. ಬೆಳಗ್ಗೆ ಬಂದು ನಿಗದಿತ ಸಮಯ ಕೆಲಸ ಮಾಡಿ ಎದ್ದು ಹೋಗುವ ಕೆಲಸವಲ್ಲ. ಸಕ್ರಿಯವಾಗಿ ತೊಡಗಿಸಿಕೊಳ್ಳುವ, ಜವಾಬ್ದಾರಿಗಳಳನ್ನು ನಿರ್ವಹಿಸುವ, ಸವಾಲುಗಳನ್ನು ಎದುರಿಸುವ ಕೆಲಸ ಎಂದು ಗೋಯಲ್ ಹೇಳಿದ್ದಾರೆ.