-->
67,538 ಕೋಟಿ ರೂ. ಮೌಲ್ಯದ ಅಮೇಜಾನ್ ಶೇರುಗಳನ್ನು ಮಾರಾಟ ಮಾಡಿದ ಅಮೇಜಾನ್ ಸಂಸ್ಥಾಪಕ ಜೆಫ್‌ ಬೆಜೋಸ್‌ ಮಾಜಿ ಪತ್ನಿ

67,538 ಕೋಟಿ ರೂ. ಮೌಲ್ಯದ ಅಮೇಜಾನ್ ಶೇರುಗಳನ್ನು ಮಾರಾಟ ಮಾಡಿದ ಅಮೇಜಾನ್ ಸಂಸ್ಥಾಪಕ ಜೆಫ್‌ ಬೆಜೋಸ್‌ ಮಾಜಿ ಪತ್ನಿ


ಅಮೇರಿಕಾ: ಲೇಖಕಿ, ಸಮಾಜ ಸೇವಕಿ ಹಾಗೂ ಅಮೆಜಾನ್‌ ಸಂಸ್ಥಾಪಕ ಜೆಫ್‌ ಬೆಜೋಸ್‌ರವರ  ಮಾಜಿ ಪತ್ನಿ ಮೆಕೆಂಜಿ ಸ್ಕಾಟ್‌ ತಮ್ಮ ಬಳಿಯಿದ್ದ ಅಮೆಜಾನ್‌ ಸಂಸ್ಥೆಯ ಷೇರುಗಳನ್ನು ಕಡಿಮೆ ಮಾಡಿಕೊಂಡಿದ್ದಾರೆ. ನವೆಂಬರ್‌ 8ರಂದು ಅವರು ಷೇರು ಮಾರುಕಟ್ಟೆಗೆ ಸಲ್ಲಿಸಿರುವ ಫೈಲ್ ಪ್ರಕಾರ, ಮೆಕೆಂಜಿ ಸ್ಕಾಟ್‌ ತಮ್ಮ ಬಳಿ ಇದ್ದ ಅಮೆಜಾನ್ ಷೇರುಗಳಲ್ಲಿ  ಶೇ.11ರಷ್ಟು ಷೇರುಗಳನ್ನು ಮಾರಾಟ ಮಾಡಿದ್ದಾರೆ. ಇದರ ಮೌಲ್ಯ 8 ಬಿಲಿಯನ್‌ ಯುಎಸ್‌ ಡಾಲರ್‌. ಅಂದರೆ ಭಾರತೀಯ ರೂ.ನಲ್ಲಿ ಅದು 67,538 ಕೋಟಿ ರೂಪಾಯಿ ಆಗಿದೆ. ಸೆ.30ರಂದು ಅವರು ತಮ್ಮ ಪಾಲಿನ ಶೇಕಡಾ 11ರಷ್ಟು ಷೇರನ್ನು ಮಾರಾಟ ಮಾಡಿದ್ದಾರೆ ಎನ್ನಲಾಗಿದೆ. ಇದರೊಂದಿಗೆ ಮೆಕೆಂಜಿ ಸ್ಕಾಟ್‌ ಅವರ ಒಟ್ಟಾರೆ ಮೌಲ್ಯ 38 ಬಿಲಿಯನ್‌ ಯುಎಸ್‌ ಡಾಲರ್‌ನಿಂದ 30 ಬಿಲಿಯನ್‌ ಯುಎಸ್‌ ಡಾಲರ್‌ಗೆ ಇಳಿದಿದೆ. ಜೆಫ್‌ ಬೆಜೋಸ್‌ ಜೊತೆಗಿನ ವಿಚ್ಛೇದನದ ಬಳಿಕ ಮೆಕೆಂಜಿ ಸ್ಕಾಟ್‌ ಪರಿಹಾರದ ರೂಪದಲ್ಲಿ ಅಮೆಜಾನ್‌ ಸಂಸ್ಥೆಯಲ್ಲಿ ಶೇ. 4ರಷ್ಟು ಪಾಲನ್ನು ಪಡೆದುಕೊಂಡಿದ್ದರು.

ತಮ್ಮ ಸಮಾಜಸೇವೆಯಿಂದಲೇ ಖ್ಯಾತಿ ಹೊಂದಿರುವ ಮೆಕೆಂಜಿ ಸ್ಕಾಟ್‌ ಅವರು, ವಿಚ್ಛೇದನದ ವೇಳೆ ಪರಿಹಾರದ ರೂಪದಲ್ಲಿ 400 ಮಿಲಿಯನ್‌ ಅಮೆಜಾನ್‌ ಷೇರುಗಳನ್ನು ಪಡೆದುಕೊಂಡಿದ್ದರು. ಇದರಲ್ಲಿ ಒಂದು ಭಾಗವನ್ನು ಮಾತ್ರ ತಾವಿಟ್ಟುಕೊಂಡು ಉಳಿದ ಹಣವನ್ನು ಸಮಾಜಸೇವೆಗೆ ಬಳಸುವುದಾಗಿ ಅವರು ತಿಳಿಸಿದ್ದರು. ಅವರ ಈ ಮಹಾ ನಿರ್ಧಾರದಿಂದ ಅಮೆರಿಕದಲ್ಲಿ ಗರಿಷ್ಠ ಪ್ರಮಾಣದ ಹಣವನ್ನು ದತ್ತಿ ಕಾರ್ಯಕ್ಕಾಗಿ ಮೀಸಲಿಟ್ಟಿರುವ ಐವರು ವ್ಯಕ್ತಿಗಳ ಪೈಕಿ ಮೆಕೆಂಜಿ ಸ್ಕಾಟ್‌ ಕೂಡ ಒಬ್ಬರಾಗಿದ್ದರು. ಫೋರ್ಬ್ಸ್‌ ಮಾಹಿತಿಯ ಪ್ರಕಾರ ಮೆಕೆಂಜಿ ಸ್ಕಾಟ್‌ ಈವರೆಗೂ 17.3 ಬಿಲಿಯನ್‌ ಯುಎಸ್‌ ಡಾಲರ್‌ ಅಂದರೆ 1 ಲಕ್ಷದ 46 ಸಾವಿರ ಕೋಟಿ ಹಣವನ್ನು ಲಾಭ ರಹಿತ ಸಂಸ್ಥೆಗಳಿಗೆ ಹಾಗೂ ಇತರ ಮಾನವೀಯ ಕಾಳಜಿಯ ಸಂಸ್ಥೆಗಳಿಗೆ ದಾನ ಮಾಡಿದ್ದಾರೆ.

ಫೋರ್ಬ್ಸ್‌ ರಿಯಲ್‌ಟೈಮ್‌ ಮಾಹಿತಿಯ ಪ್ರಕಾರ ಮೆಕೆಂಜಿ ಸ್ಕಾಟ್‌‌ರವರ ಪ್ರಸ್ತುತ ಮೌಲ್ಯ 29.5 ಬಿಲಿಯನ್‌ ಯುಎಸ್‌ ಡಾಲರ್‌ ಅಂದರೆ 2 ಲಕ್ಷದ 49 ಸಾವಿರ ಕೋಟಿ ರೂಪಾಯಿ. 2019ರ ಮೇಯಲ್ಲಿ ಜೆಫ್‌ ಬೆಜೋಸ್‌ ಜೊತೆಗಿನ ವಿಚ್ಛೇದನದ ಬಳಿಕ ಮೆಕೆಂಜಿ ಸ್ಕಾಟ್‌ ತಮಗೆ ಬಂದಿರುವ ಹಣದಲ್ಲಿ ಹೆಚ್ಚಿನ ಪಾಲನ್ನು ಜೀವನ ಇರುವವರೆಗೂ ದತ್ತು ಕಾರ್ಯಗಳಿಗೆ ಬಳಸುವುದಾಗಿ ತಿಳಿಸಿದ್ದರು. ಜೀವಮಾನದ ಉದ್ದಕ್ಕೂ ನನ್ನ ಆಸ್ತಿಯ ಅರ್ಧದಷ್ಟು ಪಾಲು ಸಮಾಜಸೇವೆಗೆ ಮೀಸಲಾಗಿರಲಿದೆ ಎಂದಿದ್ದರು.

ಅಮೆಜಾನ್‌ ಸಂಸ್ಥೆಯ ಷೇರುಗಳ ಬೆಲೆ ಏರಿಕೆ ಆಗುತ್ತಿದ್ದಂತೆ ಮೆಕೆಂಜಿ ಸ್ಕಾಟ್‌ ಅವರ ಮೌಲ್ಯವೂ ಏರಿಕೆಯಾಗಿದೆ. ಈ ವೇಳೆ ತಮ್ಮ ಅರ್ಧದಷ್ಟು ಆಸ್ತಿಯನ್ನು ಸಮಾಜಸೇವಾ ಸಂಸ್ಥೆಗಳಿಗೆ ನೀಡುತ್ತಾರೆ. ಆದರೆ ಈವರೆಗೂ ಯಾವ ಸಂಸ್ಥೆಗಳಿಗೆ ಹಣ ನೀಡಿದ್ದೇನೆ ಎನ್ನುವ ಮಾಹಿತಿಯನ್ನು ಅವರು ಗೌಪ್ಯವಾಗಿರಿಸಿದ್ದಾರೆ.

ಸ್ಕಾಟ್‌ ಇತ್ತೀಚೆಗೆ 15 ಲಕ್ಷ ರೂ.ಯನ್ನು ಮಿನಿ ಸೊಟಾ ಫಂಡ್‌ಗೆ ನೀಡಿದ್ದರು. ಫೋರ್ಬ್ಸ್‌ ಮಾಹಿತಿಯ ಪ್ರಕಾರ ಹಣ ಪಡೆದುಕೊಂಡ ಸಂಸ್ಥೆಗಳು ಈ ಹಣವನ್ನು ಹೇಗೆ ಖರ್ಚು ಮಾಡಬೇಕು ಎನ್ನುವುದನ್ನು ಮೆಕೆಂಜಿ ಸ್ಕಾಟ್‌ ಆಯಾ ಸಂಸ್ಥೆಗಳ ವಿವೇಚನೆಗೆ ಬಿಟ್ಟಿದ್ದಾರೆ. ಇದರಲ್ಲಿ ಆಕೆಯ ಮಧ್ಯಪ್ರವೇಶ ಇರೋದಿಲ್ಲ. ಇಲ್ಲಿಯವರೆಗೂ ಆಕೆ 2300 ಎನ್‌ಜಿಓಗಳಿಗೆ ಸಹಾಯ ಮಾಡಿದ್ದಾರೆ. 2024ರಲ್ಲಿ ಅಮೆರಿಕದ ಅತ್ಯಂತ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಈಕೆ 26ನೇ ಸ್ಥಾನದಲ್ಲಿದ್ದರು.

Ads on article

Advertise in articles 1

advertising articles 2

Advertise under the article