ಅಭಯಾರಣ್ಯದ ಪ್ರಾಣಿನಿಗಾ ಕ್ಯಾಮರಾದಲ್ಲಿ ಅಧಿಕಾರಿಗಳಿಂದ ಮಹಿಳೆಯರ ಖಾಸಗಿತನ ಸೆರೆ
ಡೆಹ್ರಾಡೂನ್: ಅಭಯಾರಣ್ಯದಲ್ಲಿ ಪ್ರಾಣಿಗಳ ಚಲನವಲನ, ಧ್ವನಿ, ನಡವಳಿಕೆ ಬಗ್ಗೆ ನಿಗಾವಹಿಸಲು ಬಳಸಲಾಗುತ್ತಿರುವ ಕ್ಯಾಮೆರಾ, ಡ್ರೋನ್, ಧ್ವನಿಮುದ್ರಕೆಗಳನ್ನು ಅಧಿಕಾರಿಗಳು ಮಹಿಳೆಯರ ಖಾಸಗಿತನವನ್ನು ಚಿತ್ರೀಕರಿಸಲು ಬಳಸುತ್ತಿರುವ ಆಘಾತಕಾರಿ ಘಟನೆ ಉತ್ತರಾಖಂಡದ ವಿಶ್ವವಿಖ್ಯಾತ ಜಿಮ್ ಕಾರ್ಬೆಟ್ ಅಭಯಾರಣ್ಯದಲ್ಲಿ ನಡೆದಿದೆ.
ಬ್ರಿಟನ್ ಮೂಲದ ಕೇಂಬ್ರಿಡ್ಜ್ ವಿವಿಯ ತ್ರಿಶಾಂಕ್ ಸಿಮ್ಲೈ ಎಂಬುವರು 14 ತಿಂಗಳು ಕಾಲ ಅಧ್ಯಯನ ನಡೆಸಿ 270 ಮಹಿಳೆಯರೊಂದಿಗೆ ಸಂವಾದ ನಡೆಸಿ ಈ ಮಾಹಿತಿ ಕಲೆಹಾಕಿದ್ದಾರೆ. ಮಹಿಳೆಯರು ಕಾಡಿಗೆ ತೆರಳುವಲ್ಲಿಂದ ಹಿಡಿದು ಅವರು ಶೌಚಕ್ಕೆ ಕುಳಿತುಕೊಳ್ಳುವ, ವಿಶ್ರಾಂತಿ ತೆಗೆದುಕೊಳ್ಳುವ ಫೋಟೊಗಳನ್ನು ಕ್ಯಾಮೆರಾ ಸೆರೆಹಿಡಿಯಲಾಗಿದೆ. ಅಲ್ಲದೆ ಅರಣ್ಯದಿಂದ ಮಹಿಳೆಯರನ್ನು ಹೊರಗಟ್ಟುವು, ಮಹಿಳೆಯರ ತಲೆಯ ಮೇಲೆ ಡ್ರೋನ್ ಹಾರಿಸಿ ಅಧಿಕಾರಿಗಳು ಬೆದರಿಸುತ್ತಿದ್ದಾರೆ ಎಂಬ ಸಂಗತಿ ಹೊರಬಂದಿದೆ.
ಅರಣ್ಯ ರಕ್ಷಕರು ಮಹಿಳೆಯರನ್ನು ಅರಣ್ಯದಲ್ಲಿ ಹೆದರಿಸಲು ಹಾರುವ ಡ್ರೋನ್‌ಗಳ ಮೂಲಕ ಮೇಲ್ವಿಚಾರಣೆ ಮಾಡಿದ್ದಾರೆ. ಜೊತೆಗೆ ಕಾನೂನುಬದ್ಧವಾಗಿದ್ದರೂ ಯಾವುದೇ ಸಂಪನ್ಮೂಲಗಳನ್ನು ಸಂಗ್ರಹಿಸದಂತೆ ತಡೆಯುತ್ತಾರೆ ಎಂದು ವರದಿ ತಿಳಿಸಿದೆ. "ಮಹಿಳೆಯರು ಈಗ ಕಾಡಿಗೆ ಹೋಗುವುದರ ಬಗ್ಗೆ ಸಂದೇಹ ಹೊಂದಿದ್ದಾರೆ. ದಿನನಿತ್ಯದ ಜಂಜಾಟಗಳಿಂದ ದೂರವಿರಲು ಅವರಿಗೆ ಇದು ಅವರಿಗೆ ಸುರಕ್ಷಿತ ಸ್ಥಳವಾಗಿತ್ತು" ಎಂದು ಪ್ರಮುಖ ಸಂಶೋಧಕ ತ್ರಿಶಾಂತ್ ಸಿಮ್ಲೈ ತಿಳಿಸಿದ್ದಾರೆ.
ಕಾಡಿನಲ್ಲಿ ಓಡಾಡಲು ಸುಲಭವಾಗಲು ತಾವು ಸಾಂಪ್ರದಾಯಿಕವಾಗಿ ಮೊಣಕಾಲಿನವರೆಗೆ ಸೀರೆ ಉಡುವ ವಿಧಾನವನ್ನು ಮಹಿಳೆಯರು ತ್ಯಜಿಸಿ ಪೂರ್ತಿ ಕಾಲು ಮುಚ್ಚುವ ಬಟ್ಟೆ ಧರಿಸುತ್ತಿದ್ದಾರೆ. ಕೆಲವೊಮ್ಮೆ ಡ್ರೋನ್‌ಗಳಿಗೆ ಅಂಜಿ ಮಹಿಳೆಯರು ದಟ್ಟ ಕಾಡಿನ ಮಧ್ಯೆ ಹೋಗುತ್ತಾರೆ. ಇದರಿಂದ ಪ್ರಾಣಿಗಳಿಂದ ದಾಳಿಗೆ ಹತ್ತಿರವಾಗುತ್ತಿದ್ದಾರೆ ಎಂದು ವರದಿ ಹೇಳಿದೆ.