ಅಡುಗೆ ಮನೆಯಲ್ಲಿಟ್ಟಿದ್ದ ಆಲೂಗೆಡ್ಡೆ ಕಳವು : ಪೊಲೀಸ್ ದೂರು ದಾಖಲಿಸಿದ ವ್ಯಕ್ತಿ
ಲಕ್ನೋ: ತಮ್ಮ ಅಡುಗೆ ಮನೆಯಲ್ಲಿ ಅಡುಗೆ ಮಾಡಿಟ್ಟಿದ್ದ ಆಲೂಗಡ್ಡೆ ಕಳ್ಳತನವಾಗಿದೆ ಎಂದು ವ್ಯಕ್ತಿಯೋರ್ವರು ಪೊಲೀಸ್ ದೂರು ದಾಖಲಿಸಿದ್ದಾರೆ. ಈತ ನಶೆಯಲ್ಲಿ ತನ್ನ ಅಡುಗೆ ಮನೆಯಲ್ಲಿದ್ದ ಆಲೂಗಡ್ಡೆ ಕಳ್ಳತನವಾಗಿರುವ ಬಗ್ಗೆ ದೂರುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಉತ್ತರ ಪ್ರದೇಶದ ಹರ್ದೋಯಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಪೊಲೀಸರ ಪ್ರಶ್ನೆಗೆ ಉತ್ತರಿಸುತ್ತಾ ತನ್ನ ಮನೆಯಲ್ಲಿದ್ದ ಆಲೂಗಡ್ಡೆ ಹೇಗೆ ಮಿಸ್ ಆಯ್ತು ಎಂಬುದನ್ನು ವಿವರಿಸಿದ್ದಾನೆ. ಈ ವೀಡಿಯೋ ವೀಕ್ಷಿಸಿ ಕಾಮೆಂಟ್ ಮಾಡಿರುವ ನೆಟ್ಟಿಗರು ಈ ವ್ಯಕ್ತಿಗೆ ನ್ಯಾಯ ಸಿಗುವರೆಗೂ ಹೋರಾಟ ಮಾಡಬೇಕು. ಆಲೂಗಡ್ಡೆ ಪ್ರಿಯರಿಗೆ ತುಂಬಾ ದುಃಖಕರ ವಿಷಯ ಇದಾಗಿದೆ ಎಂದು ಕಮೆಂಟ್ ಮಾಡಿದ್ದಾರೆ.
ವ್ಯಕ್ತಿ ಮತ್ತು ಪೊಲೀಸ್ ಅಧಿಕಾರಿ ನಡುವಿನ ಸಂಭಾಷಣೆ ಹೀಗಿದೆ
ಪೊಲೀಸ್: ನೀನೇನಾ ಕಾಲ್ ಮಾಡಿದ್ದು? ನಿನ್ನ ಹೆಸರು ಏನು?
ವ್ಯಕ್ತಿ: ಹೌದು ನಾನೇ ಕಾಲ್ ಮಾಡಿದ್ದು, ನನ್ನ ಹೆಸರು ವಿಜಯ್ ವರ್ಮಾ ಎಂದು ತಂದೆ ಹಾಗೂ ಏರಿಯಾ ಹೆಸರು ಹೇಳುತ್ತಾನೆ.
ಪೊಲೀಸ್: ಕಾಲ್ ಮಾಡಿದ್ದೇಕೆ? ಏನಾಗಿದೆ?
ವ್ಯಕ್ತಿ: ನಾನು 4 ಗಂಟೆಗೆ ಬಂದು ಆಲೂಗಡ್ಡೆ ಸಿಪ್ಪೆ ಬಿಡಿಸಿ ಎತ್ತಿಟ್ಟಿದ್ದೆ. ಹೊರಗಡೆ ಹೋಗಿ ತಿಂದು-ಕುಡಿದು ಬರೋಣ ಅಂತ ಹೋಗಿದ್ದೆ. ಹಿಂದಿರುಗಿ ಬಂದಾಗ ಮನೆಯಲ್ಲಿ ಆಲೂಗಡ್ಡೆ ಇರಲಿಲ್ಲ. ಇದು ನನ್ನ ಮನೆಯ ಸಮಸ್ಯೆ.
ಪೊಲೀಸ್: ಆಲೂಗಡ್ಡೆ ಕಳ್ಳತನ ಮಾಡಿದ್ಯಾರು?
ವ್ಯಕ್ತಿ: ಅದುವೇ ಗೊತ್ತಾಗುತ್ತಿಲ್ಲ. ಈ ಸಂಬಂಧ ತನಿಖೆ ನಡೆಸಿ ಆಲೂಗಡ್ಡೆಯನ್ನು ಹುಡುಕಿಕೊಡಿ.
ಪೊಲೀಸ್: ಆಲೂಗಡ್ಡೆ ಎಷ್ಟಿತ್ತು? ಸುಮಾರು ಎರಡ್ಮೂರು ಕೆಜಿ ಇರಬಹುದಾ?
ವ್ಯಕ್ತಿ: ಮನೆಯಲ್ಲಿ ನಾನೊಬ್ಬನೇ ಇರೋದು. 250 ರಿಂದ 300 ಗ್ರಾಂ ಇರಬಹುದು.
ಪೊಲೀಸ್: ಓ.. 250 ರಿಂದ 300 ಗ್ರಾಂ ಆಲೂಗಡ್ಡೆ ಕಳ್ಳತನವಾಗಿದೆಯಾ? ಯಾವ ಸರಾಯಿ ಕುಡಿದಿದ್ದೀಯಾ ನೀನು?
ವ್ಯಕ್ತಿ: ಇಲ್ಲೇ ಸ್ಥಳೀಯವಾಗಿ ಸಿಗುವ ಮದ್ಯ ಕುಡಿದಿದ್ದೇನೆ. ಇಡೀ ದಿನ ಕೂಲಿ ಕೆಲಸ ಮಾಡೋದರಿಂದ ಸಂಜೆ ಸ್ವಲ್ಪ ಮದ್ಯ ಕುಡಿಯುತ್ತೇನೆ. ಸ್ವಲ್ಪ ನಶೆಯಲ್ಲಿದ್ದೇನೆ.
ಪೊಲೀಸ್ ಸಿಬ್ಬಂದಿ ಮತ್ತು ವ್ಯಕ್ತಿಯ ಸಂಭಾಷಣೆ ಕಂಡು ನೆಟ್ಟಿಗರು ವಿಡಿಯೋವನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಏನಾದ್ರೂ ಕಳ್ಳತನವಾದ್ರೆ ಹುಡುಕಿಕೊಡೋದು ಪೊಲೀಸರ ಕರ್ತವ್ಯ. ಅದಕ್ಕಾಗಿಯೇ ಆತ ಪೊಲೀಸರಿಗೆ ಕರೆ ಮಾಡಿದ್ದೇನೆ. ಕುಡುಕರು ಅಂದ್ರೆ ಸುಮ್ನೆನಾ? ದಯವಿಟ್ಟು ಆತ ಕಳೆದುಕೊಂಡ ವಸ್ತುವನ್ನು ಹುಡುಕಿಕೊಡಿ ಎಂದು ನೆಟ್ಟಿಗರು ಮನವಿ ಮಾಡಿಕೊಂಡಿದ್ದಾರೆ.
ಇದೊಂದು ತುಂಬಾ ಗಂಭೀರ ವಿಷಯವಾಗಿದ್ದು, ಕಳ್ಳತನವಾಗಿದ್ದಂತು ನಿಜ ಅಲ್ಲವೇ? ಚಿನ್ನ ಅಥವಾ ಆಲೂಗಡ್ಡೆಯಾಗಲಿ ಇದು ಕಳ್ಳತನ. ಆದ್ದರಿಂದ ಈ ಸಂಬಂಧ ಪೊಲೀಸರು ತನಿಖೆ ನಡೆಸಬೇಕು ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಒಂದಿಷ್ಟು ಮಂದಿ ಅದು ಚಿನ್ನದ ಆಲೂಗಡ್ಡೆ ಆಗಿರಬಹುದು? ಈ ಕಳ್ಳತನದ ವಿಷಯವನ್ನಾಧರಿಸಿ ಸಿನಿಮಾ ಸಹ ಮಾಡಬಹುದು ಎಂದು ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ.