ಬ್ಯುಸಿನೆಸ್ ಐಡಿಯಾ ಚೆನ್ನಾಗಿದ್ರೆ ಸ್ಟಾರ್ಟ್‌ಅಪ್ ಕಂಪೆನಿ ಆರಂಭಿಸಲು ಸರಕಾರ ಕೊಡುತ್ತದೆ 30ಲಕ್ಷದವರೆಗೆ ಸಾಲ
ಸ್ಟಾರ್ಟ್‌ಅಪ್ ಕಂಪೆನಿ ಆರಂಭಿಸಲು ನಿಮ್ಮಲ್ಲಿ ಬಂಡವಾಳ ಬೇಕೇ ಬೇಕು. ಆದ್ರೆ ನಿಮ್ಮಲ್ಲಿನ ಬ್ಯುಸಿನೆಸ್ ಐಡಿಯಾ ಗೆಲ್ಲುತ್ತೆ ಅನ್ನುವ ನಂಬಿಕೆ ಇದ್ರೆ ಮಾತ್ರ ಯಾರಾದ್ರೂ ಹಣ ಹಾಕ್ತಾರೆ. ಬ್ಯಾಂಕುಗಳು ಆಸ್ತಿ ಇಟ್ಟರೆ ಮಾತ್ರ ಸಾಲ ಕೊಡುತ್ತೆ. ಐಡಿಯಾ ಚೆನ್ನಾಗಿದ್ರೂ, ಆಸ್ತಿಯಿಲ್ಲ ಅಂದ್ರೆ ಯಾರೂ ಸಾಕ ಕೊಡುವುದಿಲ್ಲ. ಹೀಗೆ ಐಡಿಯಾ ಇರುವ ಉದ್ಯಮಿಗಳಿಗೆ ಸಹಾಯ ಮಾಡೋಕೆ ಸರ್ಕಾರ ಮುಂದೆ ಬಂದಿದೆ.
ಸ್ಟಾರ್ಟ್‌ಅಪ್ ಇಂಡಿಯಾ ಸೀಡ್ ಫಂಡ್ ಸ್ಕೀಮ್ (SISFS) ಅನ್ನುವದು ಕೇಂದ್ರ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಒಂದು ಯೋಜನೆ. 2021ರಲ್ಲಿ ಶುರುವಾದ ಈ ಯೋಜನೆ, ಹೊಸದಾಗಿ ಸ್ಟಾರ್ಟ್‌ಅಪ್ ಆರಂಭಿಸುವವರಿಗೆ ಹಣಕಾಸಿನ ನೆರವು ನೀಡುತ್ತದೆ. ಹೊಸ ಐಡಿಯಾಗಳಿಗೆ ಉತ್ತೇಜನ ಕೊಡೋಕೆ ಈ ಯೋಜನೆ ಜಾರಿಗೊಳಿಸಲಾಗಿದೆ. ಇದು ಸ್ಟಾರ್ಟ್‌ಅಪ್‌ಗಳಿಗೆ ಒಳ್ಳೆಯ ವಾತಾವರಣ ನಿರ್ಮಿಸುತ್ತದೆ.
ಕೇಂದ್ರ ಸರ್ಕಾರದ ಕೈಗಾರಿಕಾ ಮತ್ತು ಆಂತರಿಕ ವಾಣಿಜ್ಯ ಉತ್ತೇಜನ ಸಚಿವಾಲಯ, ಸ್ಟಾರ್ಟ್‌ಅಪ್ ಇಂಡಿಯಾ ಸೀಡ್ ಫಂಡ್ ಸ್ಕೀಮ್‌ಗೆ 945 ಕೋಟಿ ರೂ. ಕೊಟ್ಟಿದೆ. ಈ ಸ್ಕೀಮ್ ಮೂಲಕ ದೇಶದಾದ್ಯಂತ ಇರುವ ಅರ್ಹರಿಗೆ ಸ್ಟಾರ್ಟ್‌ಅಪ್ ಶುರು ಮಾಡುವುದಕ್ಕೆ ಈ ಹಣ ಸಿಗುತ್ತದೆ. ನಿಮ್ಮ ಐಡಿಯಾ ಸರ್ಕಾರದ ಕಮಿಟಿಗೆ ಇಷ್ಟ ಆದ್ರೆ, ಅದಕ್ಕೆ ಬೇಕಾದ ಹಣ ಸಿಗುತ್ತೆ.
ಐಡಿಯಾ ಚೆನ್ನಾಗಿದ್ರೂ, ಹಣ ಇಲ್ಲದೆ ಸ್ಟಾರ್ಟ್‌ಅಪ್‌ಗಳು ಸತ್ತು ಹೋಗ್ತಿವೆ. ಈ ಸ್ಕೀಮ್‌ನಿಂದ ಸಿಗೋ ಹಣ ಸ್ಟಾರ್ಟ್‌ಅಪ್‌ಗಳಿಗೆ ಒಂದು ಉತ್ತೇಜನ. ಇದರಿಂದ ಉದ್ಯೋಗ ಸೃಷ್ಟಿ ಕೂಡ ಆಗುತ್ತದೆ.
ಕೇಂದ್ರ ಸರ್ಕಾರದ ಕೈಗಾರಿಕಾ ಮತ್ತು ಆಂತರಿಕ ವಾಣಿಜ್ಯ ಉತ್ತೇಜನ ಸಚಿವಾಲಯ (DPIIT) ಒಂದು ತಜ್ಞರ ಸಲಹಾ ಸಮಿತಿ (EAC) ರಚಿಸುತ್ತೆ. ಈ ಸಮಿತಿ ಸ್ಟಾರ್ಟ್‌ಅಪ್ ಇಂಡಿಯಾ ಸೀಡ್ ಫಂಡ್ ಸ್ಕೀಮ್‌ನ ಮೇಲ್ವಿಚಾರಣೆ ಮಾಡುತ್ತೆ. ಯಾವ ಸ್ಟಾರ್ಟ್‌ಅಪ್‌ಗಳಿಗೆ ಹಣ ಕೊಡಬೇಕು ಅಂತ ಈ ಸಮಿತಿ ನಿರ್ಧರಿಸುತ್ತದೆ.
ಸಾಮಾಜಿಕ ಪರಿಣಾಮ, ತ್ಯಾಜ್ಯ ನಿರ್ವಹಣೆ, ನೀರು ನಿರ್ವಹಣೆ, ಶಿಕ್ಷಣ, ಕೃಷಿ, ಆಹಾರ ಸಂಸ್ಕರಣೆ, ಬಯೋಟೆಕ್ನಾಲಜಿ, ಆರೋಗ್ಯ, ಇಂಧನ, ಭದ್ರತೆ, ಬಾಹ್ಯಾಕಾಶ, ರೈಲ್ವೆ, ತೈಲ ಮತ್ತು ಅನಿಲ ಕ್ಷೇತ್ರಗಳಲ್ಲಿ ಹೊಸ ಐಡಿಯಾಗಳನ್ನ ತರುವ ಸ್ಟಾರ್ಟ್‌ಅಪ್‌ಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಈ ಸ್ಟಾರ್ಟ್‌ಅಪ್ ಕಂಪೆನಿಗೆ ಸರ್ಕಾರದ ಬೇರೆ ಯಾವುದೇ ಯೋಜನೆಯಿಂದ 10 ಲಕ್ಷಕ್ಕಿಂತ ಹೆಚ್ಚು ಹಣ ದೊರಕಿರಬಾರದು ಎಂಬ ಕಂಡಿಷನ್ ಇದೆ.
ಕಂಪನಿಗಳ ಕಾಯ್ದೆ-2013, SEBI (ICDR) ನಿಯಮಗಳ ಪ್ರಕಾರ, ಸ್ಟಾರ್ಟ್‌ಅಪ್‌ನಲ್ಲಿ ಭಾರತೀಯ ಪ್ರವರ್ತಕರ ಪಾಲು ಕನಿಷ್ಠ 51% ಇರಬೇಕು. ಈ ಅರ್ಹತೆಗಳಿದ್ರೆ, ವರ್ಷಕ್ಕೆ 5% ಬಡ್ಡಿದರದಲ್ಲಿ 30 ಲಕ್ಷದವರೆಗೆ ಸಾಲ ಸಿಗುತ್ತದೆ.