ಅನಾರೋಗ್ಯಪೀಡಿತ ಪತ್ನಿಯ ಆರೈಕೆಗೆ ಪತಿ ವಿಆರ್‌ಎಸ್ ಪಡೆದ ದಿನವೇ ಹಾರಿಹೋಯ್ತು ಜೀವನ ಸಂಗಾತಿಯ ಪ್ರಾಣ
ನಾವು ಅಂದ್ಕೊಳ್ಳೋದೇ ಒಂದು ವಿಧಿಯಾಟವೇ ಒಂದು. ಇಂತಹ ವಿಚಿತ್ರ ಸನ್ನಿವೇಶ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ. ಸರ್ಕಾರಿ ಉದ್ಯೋಗಿಯೊಬ್ಬರು ತಮ್ಮ ಅನಾರೋಗ್ಯಪೀಡಿತ ಪತ್ನಿಯ ಆರೈಕೆಗಾಗಿ ನಿವೃತ್ತಿಗೆ ಇನ್ನೂ ಮೂರು ವರ್ಷ ಬಾಕಿ ಇರುವಾಗಲೇ ವಿಆರ್‌ಎಸ್ ಅಂದರೆ ವಾಲೆಂಟರಿ ರಿಟೈರ್‌ಮೆಂಟ್ ಸರ್ವೀಸ್ ಪಡೆದುಕೊಂಡಿದ್ದರು. ಆದರೆ ಅವರು ವಿಆರ್‌ಎಸ್ ತೆಗೆದುಕೊಂಡ ದಿನವೇ ಆಯೋಜಿಸಿದ್ದ ಪಾರ್ಟಿಯಲ್ಲಿ ಪತ್ನಿ ಇಹಲೋಕ ತ್ಯಜಿಸಿದ್ದಾರೆ.
ಎಲ್ಲರೂ ಖುಷಿಖುಷಿಯಿಂದ ಪಾರ್ಟಿಯಲ್ಲಿ ಸಂಭ್ರಮದಲ್ಲಿದ್ದರು. ಈ ವೇಳೆ ಇದ್ದಕ್ಕಿದ್ದ ಹಾಗೆ ಕುರ್ಚಿಯ ಮೇಲೆ ಕುಳಿತ ಪತ್ನಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ತಕ್ಷಣ ಅಲ್ಲಿದ್ದವರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದರು. ಈ ಘಟನೆ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ.
ಕೋಟಾದ ದಾದಾಬರಿ ಪ್ರದೇಶ ನಿವಾಸಿ ದೇವೇಂದ್ರ ಕುಮಾರ್ ಸೆಂಟ್ರಲ್ ವೇರ್‌ಹೌಸ್‌ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಅವರ ಪತ್ನಿಗೆ ಹೃದಯ ಸಮಸ್ಯೆಯಿತ್ತು. ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಪತಿ ದೇವೇಂದ್ರ 3 ವರ್ಷಗಳ ಬಳಿಕ ನಿವೃತ್ತಿ ಹೊಂದಬೇಕಿತ್ತು. ಆದರೆ ಅನಾರೋಗ್ಯಪೀಡಿತ ಪತ್ನಿಯನ್ನು ನೋಡಿಕೊಳ್ಳಲು ದೇವೇಂದ್ರ ನಿವೃತ್ತಿಗೆ 3 ವರ್ಷ ಮೊದಲೇ ವಿಆರ್‌ಎಸ್ ತೆಗೆದುಕೊಂಡಿದ್ದರು. ಆದ್ದರಿಂದ ದೇವೇಂದ್ರನ ಸ್ನೇಹಿತರು, ಬಂಧುಗಳು ಸಣ್ಣ ಪಾರ್ಟಿಯನ್ನೂ ಏರ್ಪಡಿಸಿದ್ದರು.
ದೇವೇಂದ್ರರ ಸಂಬಂಧಿಕರು ಮತ್ತು ಅನೇಕ ಸ್ನೇಹಿತರು ಪಾರ್ಟಿಗೆ ಆಗಮಿಸಿದ್ದರು. ಈ ವೇಳೆ ಪರಿಚಿತರು, ಬಂಧುಗಳು ದೇವೇಂದ್ರರಿಗೆ ಹಾರ ಹಾಕಿ ನಿವೃತ್ತಿ ಜೀವನಕ್ಕೆ ಶುಭ ಕೋರುತ್ತಿದ್ದರು. ಇದೇ ವೇಳೆ ಹಲವರ ಒತ್ತಾಯದ ಮೇರೆಗೆ ದೇವೇಂದ್ರ ಅವರ ಪತ್ನಿ ದೀಪಿಕಾ ಅವರೂ ದೇವೇಂದ್ರ ಅವರಿಗೆ ಮಾಲಾರ್ಪಣೆ ಮಾಡಿದ್ದಾರೆ. ಮಾಲೆ ಹಾಕಿದ ಸ್ವಲ್ಪ ಹೊತ್ತಿನಲ್ಲೇ ದೀಪಿಕಾ ತಲೆಸುತ್ತು ಬಂದು ಕೆಳಗೆ ಬಿದ್ದು ಪ್ರಜ್ಞಾಹೀನರಾಗಿದ್ದರು.
ಈ ವೇಳೆ ಅಲ್ಲಿದ್ದ ಕುಟುಂಬಸ್ಥರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ದೀಪಿಕಾ ಮೃತಪಟ್ಟಿರುವುದಾಗಿ ಘೋಷಿಸಿದರು. ಘಟನೆಯಿಂದ ಶಾಕ್ ಆಗಿರುವ ಸ್ಥಳೀಯ ಜನರು ವಿಧಿಯನ್ನು ದೂರುತ್ತಿದ್ದಾರಂತೆ.