ಸೈಕಲ್ ಮೇಲೆ ಫುಡ್ ಡೆಲಿವರಿ ಮಾಡುತ್ತಿದ್ದ ಡೆಲಿವರಿ ಬಾಯ್ ಅದೃಷ್ಟ ಖುಲಾಯಿಸಿದ್ದು ಹೇಗೆ ಗೊತ್ತಾ? ವೀಡಿಯೋ ನೋಡಿ
ನವದೆಹಲಿ: ಯಾರಿಗೆ ಯಾವಾಗ ಅದೃಷ್ಟ ಖುಲಾಯಿಸಿತ್ತದೆಂದು ಹೇಳುವುದೇ ಅಸಾಧ್ಯ. ಕೆಲವರಂತೂ ರಾತ್ರೋರಾತ್ರಿ ಸೂಪರ್ ಸ್ಟಾರ್ ಆಗಿ ಬಿಡುತ್ತಾರೆ. ರೈಲು ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತಿದ್ದ ಸಾಮಾನ್ಯ ಮಹಿಳೆ ರಾನು ಮಂಡಲ್ ಬಾಲಿವುಡ್ ಸಿನಿಮಾದ ಹಾಡಿಗೆ ಧ್ವನಿಯಾಗಿದ್ದು ಎಲ್ಲರಿಗೂ ಗೊತ್ತಿದೆ. ರಸ್ತೆಬದಿಯಲ್ಲಿ 'ಕಚ್ಚಾ ಬದಾಮ್' ಎಂದು ಹಾಡುತ್ತಾ ಕಡಲೆಬೀಜ ಮಾರುತ್ತಿದ್ದ ವ್ಯಕ್ತಿಯ ಹಾಡಿಗೆ ಇಡೀ ಭಾರತವೇ ಹೆಜ್ಜೆ ಹಾಕಿತ್ತು. ಇದೆಲ್ಲದರೊಂದಿಗೆ ಕೆಲವು ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳು ಟ್ರೆಂಡಿಂಗ್ ರೀಲ್ಸ್ ಮಾಡುತ್ತಾ ಸಮಾಜಸೇವೆಯಲ್ಲಿ ತೊಡಗಿಕೊಂಡಿರುತ್ತಾರೆ. ಇಂತಹ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಇದೀಗ ಅಂತಹವುದೇ ಒಂದು ವಿಡಿಯೋ ಟ್ರೆಂಡ್ ಆಗುತ್ತಿದೆ.
ಹೌದು, ಕೆಲವು ಡೆಲಿವರಿ ಬಾಯ್‌ಗಳು ತಾವು ಕೆಲಸ ಮಾಡುತ್ತಲೇ ತಮ್ಮ ದಿನನಿತ್ಯದ ಜೀವನಶೈಲಿಯನ್ನು ವೀಡಿಯೋ ಮಾಡುತ್ತಾ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಕೆಲವು ತಿಂಗಳ ಹಿಂದೆ ಸೈಕಲ್ ಮೇಲೆ ಬಂದ ಡೆಲಿವರಿ ಬಾಯ್‌ಗೆ ಗ್ರಾಹಕರೊಬ್ಬರು ಹೆಚ್ಚುವರಿ ಹಣ ನೀಡಿ ಗಮನ ಸೆಳೆದಿದ್ದರು. ಕೆಲ ದಿನಗಳ ಹಿಂದೆಯಷ್ಟೇ ತಾಯಿಯೊಬ್ಬಳು ಪುಟ್ಟ ಮಗುವಿನೊಂದಿಗೆ ಆಹಾರ ಸರಬರಾಜು ಮಾಡುತ್ತಿದ್ದರು. ಇದೀಗ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಸೈಕಲ್ ಮೇಲೆ ಫುಡ್ ಡೆಲಿವರಿ ಮಾಡುತ್ತಿದ್ದ ವ್ಯಕ್ತಿಯ ಅದೃಷ್ಟ ಖುಲಾಯಿಸಿದೆ.
ಜೊಮ್ಯಾಟೋ ಫುಡ್ ಡೆಲಿವರಿ ಬಾಯ್ ಓರ್ವನು ಸೈಕಲ್ ಮೇಲೆ ಆಹಾರ ಸರಬರಾಜು ಮಾಡುವ ಕೆಲಸ ಮಾಡುತ್ತಿರುತ್ತಾನೆ. ಆಹಾರ ತೆಗೆದುಕೊಂಡು ಗ್ರಾಹಕರಿಗೆ ನೀಡಲು ಈತ ಹೋಗುತ್ತಿರುತ್ತಾನೆ. ಗ್ರಾಹಕರ ಅಡ್ರೆಸ್ ಬರುತ್ತಿದ್ದಂತೆ ಸೈಕಲ್ ನಿಲ್ಲಿಸಿ ಕಟ್ಟಡದೊಳಗೆ ಹೋಗುತ್ತಾನೆ. ಈ ಸಮಯದಲ್ಲಿ ಕಾರ್‌ನಿಂದ ಹೊರ ಬರುವ ವ್ಯಕ್ತಿಯೊಬ್ಬರು ಸೈಕಲ್ ಮೇಲಿರುವ ಫುಡ್ ಬಾಕ್ಸ್‌ನಲ್ಲಿ ಹಣದ ಕಂತೆಯುಳ್ಳ ಲಕೋಟೆ ಇರಿಸಿ ಹೋಗುತ್ತಾನೆ. ಲಕೋಟೆಯ ಮೇಲೆ "ನಿಮ್ಮ ಹೊಸ ಬೈಕ್" ಗಾಗಿ ಎಂದು ಬರೆಯಲಾಗಿರುತ್ತದೆ.
ಆಹಾರ ಕೊಟ್ಟ ಬಳಿಕ ಮತ್ತೊಂದು ಆರ್ಡರ್ ಸ್ವೀಕರಿಸುವ ಯುವಕ ಹೋಟೆಲ್‌ನತ್ತ ಹೋಗುತ್ತಿರುತ್ತಾನೆ. ಅಲ್ಲಿಯವರೆಗೂ ಆತನ ಬಾಕ್ಸ್‌ನಲ್ಲಿ ಕಂತೆ ಕಂತೆ ಹಣವಿರುವ ವಿಚಾರವೇ ಆತನಿಗೆ ಗೊತ್ತಿರಲ್ಲ. ಮತ್ತೊಂದು ಆರ್ಡರ್ ಸ್ವೀಕರಿಸಿ ಫುಡ್ ಬಾಕ್ಸ್‌ನಲ್ಲಿಡುವಾಗ ಅಲ್ಲಿರುವ ಪಾಕೆಟ್ ತೆಗೆದು ನೋಡುತ್ತಾನೆ. ಅದರೊಳಗಿರುವ ಹಣ ನೋಡಿ ಖುಷಿಯಿಂದ ದೇವರಿಗೆ ನಮಸ್ಕರಿಸುತ್ತಾನೆ. ಬಳಿಕ ಡೆಲಿವರಿ ಬಾಯ್ ತನ್ನದಾದ ಸ್ಕೂಟಿ ಖರೀದಿಸಿ ವ್ಯಕ್ತಿಯೊಬ್ಬರೊಂದಿಗೆ ಮಾತನಾಡುತ್ತಿರೋದನ್ನು ಅಂತ್ಯದಲ್ಲಿ ತೋರಿಸಲಾಗಿದೆ.
ಈ ವಿಡಿಯೋವನ್ನು ರವಿ ಕುಮಾರ್ (seenu.malik.365) ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋಗೆ 6.59 ಲಕ್ಷಕ್ಕೂ ಅಧಿಕ ಲೈಕ್ಸ್, 9ಸಾವಿರಕ್ಕೂ ಅಧಿಕ ಕಮೆಂಟ್ ಬಂದಿವೆ. ವೀಡಿಯೋ ನೋಡಿದ ನೆಟ್ಟಿಗರು ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಕೆಲಸಕ್ಕೆ ಮೆಚ್ಚುಗೆ ಸೂಚಿಸಿ ಕಮೆಂಟ್ ಮಾಡಿದ್ದಾರೆ. ಇವರೇ ರಿಯಲ್ ಹೀರೋ, ತಮ್ಮಲ್ಲಿಯ ಹಣವನ್ನು ಮತ್ತೊಬ್ಬರಿಗೆ ಯಾವುದೇ ಪ್ರತಿಫಲವಿಲ್ಲದೇ ನೀಡಲು ಸಹ ದೊಡ್ಡ ಮನಸ್ಸು ಬೇಕು ಎಂದಿದ್ದಾರೆ. ಕೆಲವರು ಡೆಲಿವರಿ ಬಾಯ್ ಎಲೆಕ್ಟ್ರಿಕ್ ವೆಹಿಕಲ್ ಖರೀದಿಸಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.