ಈ ಶ್ವಾನ ಸಾಕುವ ಮಾಸಿಕ ಖರ್ಚಿನಲ್ಲಿ ಮೂರು ಬಡ ಕುಟುಂಬ ನಿರ್ವಹಿಸಬಹುದು
ಸಾಮಾನ್ಯ ಬಡ ಕುಟುಂಬಗಳ ಕುಟುಂಬ ನಿರ್ವಹಣೆಗೆ ಮಾಸಿಕವಾಗಿ 20 ಸಾವಿರ ರೂ. ಇದ್ದರೆ ಸಾಕು. ಮಧ್ಯಮ ವರ್ಗದ ಕುಟುಂಬ ನಿರ್ವಹಣೆಗೆ 60 ಸಾವಿರ ರೂ. ಸಾಕಾಗಬಹುದು. ಆದರೆ, ಇಲ್ಲೊಂದು ಶ್ವಾನ ಸಾಕುವುದಕ್ಕೆ ಮಾಸಿಕ 60 ಸಾವಿರ ರೂ. ಖರ್ಚು ಮಾಡಲೇಬೇಕಿದೆ. ಇಂತಹ ಐಷಾರಾಮಿ ನಾಯಿ ಯಾರದರೂ ತಮ್ಮದಾಗಿಸ ಬೇಕಾದರೆ ಅವರು 8 ಲಕ್ಷ ರೂ. ಪಾವತಿಸಬೇಕು.
ಕಾಕೇಶಿಯನ್ ಶೆಫರ್ಡ್ ಡಾಗ್ ಎಂದು ಕರೆಯಲ್ಪಡುವ ತಳಿಯ ಈ ಶ್ವಾನ ಐಷಾರಾಮಿ ಪ್ರಿಯ ಪ್ರಾಣಿ. ಈ ಹಿಂದೆ ಬೆಂಗಳೂರಿನಲ್ಲೊಬ್ಬರು 20 ಕೋಟಿ ರೂ. ನೀಡಿ ಈ ತಳಿಯ ಶ್ವಾನವನ್ನು ಖರೀದಿಸಿದ್ದು ಸುದ್ದಿಯಾಗಿತ್ತು. ಕೆಲ ದಿನಗಳ ಹಿಂದೆ ದೆಹಲಿಯಲ್ಲಿ ನಡೆದ ಪೆಟ್‌ಫೆಡ್ ಇಂಡಿಯಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಉತ್ತರಪ್ರದೇಶದ ಬುಲಂದ್‌ಶಹರ್ ನಿವಾಸಿ ವಿನಾಯಕ್ ಪ್ರತಾಪ್ ಸಿಂಗ್ ಈ ತಳಿಯ ತನ್ನ ಶ್ವಾನವನ್ನು ತಂದಿದ್ದರು. ಈ ಶ್ವಾನ ಮತ್ತೆ ಸುದ್ದಿಯಲ್ಲಿದೆ. ನೋಡಲು ಆಕ್ರಮಣಕಾರಿ ಎಂದು ಅನಿಸಿದರೂ, ಸರಿಯಾದ ತರಬೇತಿ ನೀಡಿದರೆ ಇದು ಅಷ್ಟೇನೂ ಅಪಾಯಕಾರಿ ಅಲ್ಲ. ಮಾತ್ರವಲ್ಲ, ಮನುಷ್ಯರೊಂದಿಗೆ ಬೇಗನೆ ಬೆರೆಯುತ್ತದೆ.
ವಿನಾಯಕ್ ಪ್ರತಾಪ್ ಸಿಂಗ್ ಅವರ ಈ ಕಾಕೇಶಿಯನ್ ಶೆಫರ್ಡ್ ಶ್ವಾನದ ಹೆಸರು ತೋರ್. ಅಮೆರಿಕದಿಂದ ತೋರ್‌ನನ್ನು ಖರೀದಿಸಿದ್ದೆ ಎಂದು ವಿನಾಯಕ್ ತಿಳಿಸಿದ್ದಾರೆ. ತೋರ್ ಜೊತೆಗೆ ಇದೇ ತಳಿಯ ಒಂದು ಹೆಣ್ಣು ಶ್ವಾನವೂ ಅವರಲ್ಲಿದೆ. ತೋರ್ 72 ಕಿಲೋ ತೂಕ ಮತ್ತು 75 ಸೆಂಟಿಮೀಟರ್ ಎತ್ತರವಿದೆ.
ಮಾಂಸ ಮತ್ತು ನಾಯಿಗಳಿಗೆಂದೇ ಇರುವಂತಹ ವಿಶೇಷ ಆಹಾರವನ್ನು ದಿನಕ್ಕೆ ಮೂರು ಬಾರಿ ತೋರ್ ತಿನ್ನುತ್ತದೆ. ದಿನಕ್ಕೆ 250 ಗ್ರಾಂ ಚಿಕನ್ ತಿನ್ನುವುದು ಕಡ್ಡಾಯ. ಸ್ನಾನ ಮಾಡಿಸಲು ಬೇಕಾದ ಶಾಂಪೂ, ವೈದ್ಯಕೀಯ ತಪಾಸಣೆ, ವಾಸಿಸಲು ಮತ್ತು ಇತರ ಸೌಲಭ್ಯಗಳು ಸೇರಿದಂತೆ ಮಾಸಿಕ 50,000 ರಿಂದ 60,000 ರೂಪಾಯಿ ಖರ್ಚಾಗುತ್ತದೆ.
ಬೇಸಿಗೆಯಲ್ಲಿ, ತೋರ್‌ಗೆ ಭಾರತದ ಬಿಸಿಲನ್ನು ತಡೆದುಕೊಳ್ಳಲು ಸಾಧ್ಯವಾಗದ ಕಾರಣ, ಒಂದು ಹವಾನಿಯಂತ್ರಣ ಮತ್ತು ಕೂಲರ್ ಕಡ್ಡಾಯ. ತಂಪು ದೇಶಗಳ ತಳಿಯ ನಾಯಿ ಆಗಿರುವುದರಿಂದ ಚಳಿಗಾಲದಲ್ಲಿ ಇದಕ್ಕೆ ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲ. ಆದರೆ ಬೇಸಿಗೆಯಲ್ಲಿ ಬಹಳ ಕಷ್ಟ ಎಂದು ವಿನಾಯಕ್ ಸ್ಪಷ್ಟಪಡಿಸಿದರು. ಬೇಸಿಗೆಯಲ್ಲಿ ಕುಡಿಯಲು ತಣ್ಣೀರು ನೀಡಬೇಕು ಮತ್ತು ದಿನಕ್ಕೆ 3 ಬಾರಿ ಸ್ನಾನ ಮಾಡಿಸಬೇಕು.