ಖ್ಯಾತ ಸಂಗೀತ ನಿರ್ದೇಶಕ ಇಳಯರಾಜರನ್ನು ಗರ್ಭಗುಡಿಯಿಂದ ಹೊರಗೆ ಕಳುಹಿಸಿದ ದೇವಸ್ಥಾನದ ಆಡಳಿತಾಧಿಕಾರಿಗಳು
Monday, December 16, 2024
ಖ್ಯಾತ ಸಿನಿಮಾ ಸಂಗೀತ ನಿರ್ದೇಶಕ ಹಾಗೂ ರಾಜ್ಯಸಭಾ ಸಂಸದ ಇಳಯರಾಜ ಅವರು ತಮಿಳುನಾಡಿನ ಪ್ರಸಿದ್ಧ ದೇವಾಲಯದ ಪವಿತ್ರ ಗರ್ಭಗುಡಿಗೆ ಪ್ರವೇಶಿಸಿ ಪೂಜೆ ಸಲ್ಲಿಸಲು ಮುಂದಾಗಿದ್ದ ವೇಳೆ ಅಲ್ಲಿಂದ ಹೊರಬರುವಂತೆ ದೇವಸ್ಥಾನ ಆಡಳಿತ ಮಂಡಳಿ ಹೇಳಿದೆ ಎನ್ನುವ ಸುದ್ದಿಯೊಂದು ಹಬ್ಬಿದೆ.
ನಿರ್ದೇಶಕ ಇಳಯರಾಜ ಮಾರ್ಗಶಿರ ಮಾಸದ ಮೊದಲ ದಿನವಾದ ಸೋಮವಾರ ಮುಂಜಾನೆ ತಮಿಳುನಾಡಿನ ವಿರುದು ನಗರ ಜಿಲ್ಲೆಯ ಶ್ರೀವಿಲ್ಲಿಪುತ್ತೂರು ಆಂಡಾಳ್ ತಾಯಿಯ ದೇವಸ್ಥಾನಕ್ಕೆ ತೆರಳಿದ್ದರು. ಈ ವೇಳೆ ಅವರು ಗರ್ಭಗುಡಿಯನ್ನು ಪ್ರವೇಶಿಸಿದ್ದಾರೆ. ಆದರೆ ದೇವಸ್ಥಾನದ ಆಡಳಿತಾಧಿಕಾರಿಗಳು ಇಳಯ ರಾಜರಿಗೆ ಗರ್ಭಗುಡಿಯ ಹೊರಗೆ ಹೋಗುವಂತೆ ಸಲಹೆ ನೀಡಿದ್ದಾರೆ.
ಇಳಯರಾಜ ದೇವಸ್ಥಾನದ ಅರ್ಥ ಮಂಟಪದ ಮೆಟ್ಟಿಲುಗಳ ಬಳಿ ನಿಂತು ಪೂಜೆ ಸಲ್ಲಿಸಿದ್ದರು. ಇಳಯರಾಜ ಅವರ 'ದಿವ್ಯ ಪಾಶುರಂ' ಎಂಬ ಭಕ್ತಿಗೀತೆಗಳ ಬಿಡುಗಡೆ ಸಂದರ್ಭ ವಿಶೇಷ ಪೂಜೆ ಸಲ್ಲಿಸಲು ದೇವಸ್ಥಾನಕ್ಕೆ ಆಗಮಿಸಿದ್ದರು ಎಂದು ತಿಳಿದು ಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ದೇವಸ್ಥಾನದ ಅಧಿಕಾರಿಗಳು ಅಧಿಕೃತ ಹೇಳಿಕೆ ನೀಡಬೇಕಿದೆ.
ಶ್ರೀವಿಲ್ಲಿಪುತ್ತೂರು ಆಂಡಾಳ್ ಮಾತಾ ದೇವಾಲಯವು ಭಗವಾನ್ ವಿಷ್ಣುಮೂರ್ತಿಗೆ ಸಮರ್ಪಿತವಾಗಿರುವ 108 ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವು 7ನೇ ಶತಮಾನದ ಪ್ರಸಿದ್ಧ ತಮಿಳು ಕವಯಿತ್ರಿ ಆಂಡಾಳ್‌ಗೆ ಸಂಬಂಧಿಸಿದೆ. ಮಾರ್ಗಶಿರ ಮಾಸದ ಮೊದಲ ದಿನ ಪೆರುಮಾಳ್ ದೇವಸ್ಥಾನದಲ್ಲಿ ಅವಿವಾಹಿತ ಯುವತಿಯರು ವಿಶೇಷ ಪೂಜೆ ಸಲ್ಲಿಸುತ್ತಾರೆ.