ಕುಟುಂಬ ಸದಸ್ಯರ ಪ್ರೀತಿಯ ಆಳ ಪರೀಕ್ಷಿಸಲು ತನ್ನದೇ ಕಿಡ್ನ್ಯಾಪ್ ಕತೆ ಕಟ್ಟಿದ ಯುವಕ: ಮುಂದೆ ನಡೆದದ್ದೇ ರೋಚಕ
ಲಖನೌ: ಕುಟುಂಬ ಸದಸ್ಯರಿಗೆ ತನ್ನ ಮೇಲೆ ಎಷ್ಟು ಪ್ರೀತಿ, ಕಾಳಜಿ ಇದೆ ಎಂಬುದರ ಪರೀಕ್ಷಿಸಲು, ಹೆತ್ತವರು ತೋರಿಸುತ್ತಿರುವ ಆತ್ಮೀಯತೆ, ಪ್ರೀತಿ ಅಸಲಿಯೋ, ನಕಲಿಯೋ? ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು 22ರ ಹರೆಯದ ಯುವಕ ಮುಂದಾಗಿದ್ದಾನೆ. ಇದಕ್ಕಾಗಿ ಆತ ಮಾಡಿದ್ದು ತನ್ನದೇ ಕಿಡ್ನಾಪ್ ನಾಟಕ. ಆದರೆ ಕುಟುಂಬಸ್ಥರ ಪ್ರೀತಿ, ಕಾಳಜಿ ಪರೀಕ್ಷೆ ಮಾಡಲು ಹೋದ ಯುವಕ ತಾನೇ ಸಂಕಷ್ಟದ ಸುಳಿಗೆ ಸಿಲುಕಿದ ಘಟನೆ ಉತ್ತರ ಪ್ರದೇಶದ ಖುಷಿನಗರದಲ್ಲಿ ನಡೆದಿದೆ.
ಸದ್ಯ 22 ವರ್ಷದ ಅನೂಪ್ ಪಟೇಲ್ ಇದೀಗ ತಲೆ ಮೇಲೆ ಕೈಹೊತ್ತುಕೊಂಡು ಕುಳಿತಿದ್ದಾನೆ. ಅನೂಪ್ ಪಟೆಲ್ ಲಖನೌದಿಂದ ಖುಷಿನಗರಕ್ಕೆ ತೆರಳಿದ್ದಾನೆ. ರೈಲ್ವೇ ಟೆಕ್ನೀಶಿಯನ್ ನೇಮಕಾತಿ ಪರೀಕ್ಷೆಗೆ ಹಾಜರಾಗಲು ತೆರಳಿದ್ದಾನೆ. ಆದರೆ ಗೊಮ್ತಿನಗರ ತಲುಪುತ್ತಿದ್ದಂತೆ ಅನೂಪ್ ಪಟೇಲ್‌ಗೆ ವಿಚಿತ್ರ ಐಡಿಯಾ ಒಂದು ಹೊಳೆದಿದೆ. ಪೋಷಕರು, ಕುಟುಂಬ ಸದಸ್ಯರ ಪ್ರೀತಿಯ ಪರೀಕ್ಷೆಗೆ ಮುಂದಾಗಿದ್ದಾನೆ. ಇದಕ್ಕಾಗಿ ತನ್ನದೇ ಕಿಡ್ನಾಪ್ ನಾಟಕವಾಡಿದ್ದಾನೆ. ಅನೂಪ್ ಪಟೇಲ್ ಮಿಸ್ಸಿಂಗ್ ಎಂದ ತಕ್ಷಣ ಕುಟುಂಬ ಸದಸ್ಯ ಎಷ್ಟು ಗಾಬರಿಗೊಳ್ಳುತ್ತಾರೆ, ಬಿಡಿಸಿಕೊಳ್ಳಲು ಚಪಡಿಸುತ್ತಾರೆ ಇವೆಲ್ಲವನ್ನು ಗಮನಿಸಿ ಅವರ ಪ್ರೀತಿಯ ಆಳ ಅಳೆಯಲು ಸಾಧ್ಯ ಎಂದುಕೊಂಡು ಪ್ಲಾನ್ ಮಾಡಿದ್ದಾನೆ.
ಅಜ್ಞಾತ ಸ್ಥಳಕ್ಕೆ ತೆರಳಿದ ಅನೂಪ್ ಪಟೇಲ್ ನೇರವಾಗಿ 112 ಮೂಲಕ ಪೊಲೀಸರಿಗೆ ಕರೆ ಮಾಡಿದ್ದಾನೆ. ಬಳಿಕ ನಾನು ಅನೂಪ್ ಪಟೇಲ್. ನನ್ನನ್ನು ಗೋಮತಿನಗರ ರೈಲು ನಿಲ್ದಾಣದಿಂದ ಕಿಡ್ನಾಪ್ ಮಾಡಲಾಗಿದೆ. ಆಟೋ ರಿಕ್ಷಾ ಚಾಲಕ ಹಾಗೂ ಆತನ ಸಹಚರರು ಕಿಡ್ನಾಪ್ ಮಾಡಿ ಅಜ್ಞಾತ ಸ್ಥಳಕ್ಕೆ ಕರೆತಂದಿದ್ದಾರೆ ಎಂದು ಹೇಳುತ್ತಲೇ ಫೋನ್ ಕಟ್ ಮಾಡಿದ್ದಾನೆ. ಈತನ ಪ್ರಕಾರ ಪೊಲೀಸರು ನೇರವಾಗಿ ಕುಟುಂಬಸ್ಥರಿಗೆ ಫೋನ್ ಮಾಡಿ ಮಾಹಿತಿ ಕೇಳುತ್ತಾರೆ. ಫೋಟೋ ಕೇಳುತ್ತಾರೆ. ಕುಟುಂಬಸ್ಥರು ಪ್ರೀತಿಯ ಆಳ ಗೊತ್ತಾಗುತ್ತದೆ. ಕೊನೆಗೆ ಭೇಟಿಯಾದಾಗ ಕುಟುಂಬಸ್ಥರು ಓಡೋಡಿ ಬಂದು ಸಿನಿಮಾ ಶೈಲಿಯಲ್ಲಿ ತಬ್ಬಿಕೊಂಡು ಕಣ್ಣೀರಿಡುತ್ತಾರೆ ಎಂದೆಲ್ಲಾ ಯೋಚಿಸಿ ಕುಳಿತಿದ್ದಾನೆ.
ಆದರೆ ಪೊಲೀಸರು ತನಿಖೆ ಬೇರೆಯೇ ಇತ್ತು. ಆತ ಹೇಳಿದ ತನ್ನ ಹೆಸರು ಹಾಗೂ ಫೋನ್ ನಂಬರ್ ಬಿಟ್ಟರೆ ಇನ್ಯಾವ ಮಾಹಿಯೂ ಪೊಲೀಸರಿಗೆ ಇರಲಿಲ್ಲ. ಆದ್ದರಿಂದ ಈತ ಕರೆ ಮಾಡಿದ ನಂಬರ್ ತೆಗೆದು ಲೋಕೇಶನ್ ಟ್ರ್ಯಾಕ್ ಮಾಡಿದ್ದಾರೆ. ಬಳಿಕ ನೇರವಾಗಿ ಲೋಕೇಶನ್ ಇದ್ದಲ್ಲಿಗೆ ತೆರಳಿದ್ದಾನೆ. ಈ ವೇಳೆ ಅನೂಪ್ ಪಟೇಲ್ ಏಕಾಂಗಿಯಾಗಿ ಕುಳಿತಿದ್ದ. ಈತನ ಅಕ್ಕ ಪಕ್ಕ ಯಾರೂ ಇಲ್ಲ, ಈತನನ್ನು ಯಾರೂ ಬಂಧನದಲ್ಲಿ ಇಟ್ಟಿರಲಿಲ್ಲ.
ಪೊಲೀಸರು ಬಂದಾಗ ಅರ್ಧ ಖುಷಿ, ಅರ್ಧ ಗಾಬರಿಯಾಗಿದೆ. ಇಷ್ಟು ಬೇಗ ಪೊಲೀಸರು ಬರುತ್ತಾರೆ ಎಂದು ಅನೂಪ್ ಊಹಿಸಿರಲಿಲ್ಲ. ಇಷ್ಟೇ ಅಲ್ಲ ತನ್ನನ್ನು ಕರೆದುಕೊಂಡು ಹೊರಗೆ ಬರುವಾಗ ಕುಟುಂಬಸ್ಥರು ಎದಾರಾಗುತ್ತಾರೆ ಎಂದುಕೊಂಡಿದ್ದ. ಆದರೆ ಅನೂಪ್ ಪಟೇಲ್ ಕಿಡ್ನಾಪ್ ಆಗಿದ್ದಾನೆ ಅನ್ನೋ ಮಾಹಿತಿಯೂ ಕುಟುಂಬಕ್ಕೆ ಇರಲಿಲ್ಲ. ಹೀಗಾಗಿ ಪೊಲೀಸರೊಂದಿಗೆ ಪೊಲೀಸ್ ವಾಹನ ಹತ್ತುವಲ್ಲಿ ತನಕ ಹೆಜ್ಜೆ ಹಾಕಿದ ಅನೂಪ್ ಪಟೇಲ್‌ಗೆ ನಿರಾಸೆ ಮಾತ್ರವಲ್ಲ, ತನ್ನ ಪ್ಲಾನ್ ಉಲ್ಟಾ ಹೊಡೆದಿದೆ ಅನ್ನೋದು ಅರ್ಥವಾಗಿದೆ. ಅಷ್ಟರಲ್ಲೇ ಕಾಲ ಮಿಂಚಿತ್ತು.
ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ಆರಂಭಿಸಿದ್ದಾರೆ. ಮೊಬೈಲ್ ವಶಪಡಿಸಿ ಪರಿಶೀಲಿಸಿದ್ದಾರೆ. ವಿಚಾರಣೆ ವೇಳೆ ಕಿಡ್ನಾಪ್ ನಾಟಕದ ಕಾರಣ ಬಿಚ್ಚಿಟ್ಟಿದ್ದಾನೆ. ಇತ್ತ ಪೊಲೀಸರು ವಿನಾ ಕಾರಣ ಆತಂಕ ಸೃಷ್ಟಿಸಿ, ಪೊಲೀಸರ ತುರ್ತು ಸಮಯವನ್ನು ವ್ಯರ್ಥ ಮಾಡಿಸಿದ್ದು, ಭಾವನೆಗಳ ಜೊತೆ ಆಟವಾಡಲು ಬಯಸಿದ್ದು ಸೇರಿದಂತೆ ಕೆಲ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ಅನೂಪ್ ಪಟೇಲ್ ಪೊಲೀಸರ ಅತಿಥಿಯಾಗಿದ್ದಾನೆ. ಏನೋ ಮಾಡಲು ಹೋಗಿ ಇದೀಗ ಅರೆಸ್ಟ್ ಆಗಿದ್ದಾನೆ. ಇತ್ತ ಕುಟುಂಬಸ್ಥರಿಗೂ ತೀವ್ರ ಮುಜುಗರವಾಗಿದೆ.