ಭಾರತದಲ್ಲಿ ಸದೃಢವಾದ ನ್ಯಾಯಾಂಗ ವ್ಯವಸ್ಥೆಯೊಂದು ಇದ್ದಿದ್ದರೆ ಮೋದಿ - ಯೋಗಿ ಜೈಲಿನಲ್ಲಿರುತ್ತಿದ್ದರು- ನಿಶ್ಚಲಾನಂದ ಸರಸ್ವತಿ
Thursday, December 12, 2024
ಹೊಸದಿಲ್ಲಿ: 'ಭಾರತ ದೇಶದಲ್ಲಿ ಸದೃಢವಾದ ನ್ಯಾಯಾಂಗ ವ್ಯವಸ್ಥೆಯೊಂದು ಇದ್ದಿದ್ದರೆ ಮೋದಿ ಮತ್ತು ಯೋಗಿ ಜೈಲು ಪಾಲಾಗುತ್ತಿದ್ದರು' ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಯೋಗಿ ಆದಿತ್ಯನಾಥ್ ವಿರುದ್ಧ ಶಂಕರಾಚಾರ್ಯ ನಿಶ್ಚಲಾನಂದ ಸರಸ್ವತಿಯವರು ತೀವ್ರ ವಾಗ್ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.
ಮಂಗಳವಾರ ಉಜ್ಜಯಿನಿಯ ಶ್ರೀ ಮಹಾಕಾಳೇಶ್ವರ ದೇಗುಲದ ವ್ಯವಸ್ಥಾಪನಾ ಸಮಿತಿಯ ಧರ್ಮಸಭೆಯಲ್ಲಿ ಭಾಗವಹಿಸಿದ್ದ ಅವರು, ಆ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ್ದರು. ಈ ವೇಳೆ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರಪ್ರದೇಶ ರಾಜ್ಯದ ಮುಖ್ಯಮಂತ್ರಿ ಆದಿತ್ಯನಾಥ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಭಾರತದಲ್ಲಿ ಸದೃಢ ನ್ಯಾಯಾಂಗ ವ್ಯವಸ್ಥೆ ಇದ್ದರೆ ಮೋದಿ ಮತ್ತು ಯೋಗಿ ಜೈಲು ಪಾಲಾಗುತ್ತಿದ್ದರು ಎಂದು ಹೇಳಿದ್ದಾರೆ.
ಈ ಕುರಿತು ಹರೀಶ್ ತಿವಾರಿ ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಮಾಡಿದ್ದ ಪೋಸ್ಟ್ ಅನ್ನು ಹಂಚಿಕೊಂಡ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿಯವರು, 'ನಿರ್ಭೀತ ಜಗದ್ಗುರು'ಎಂದು ಉಲ್ಲೇಖಿಸಿದ್ದಾರೆ. ಸುಬ್ರಮಣಿಯನ್ ಸ್ವಾಮಿ ಈ ಹಿಂದೆ ಹಲವು ಬಾರಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ನವೆಂಬರ್‌ನಲ್ಲಿ ಮೋದಿಯನ್ನು 'ಸುಳ್ಳುಗಾರ' ಎಂದು ಕರೆದಿದ್ದ ಸುಬ್ರಹ್ಮಣಿಯನ್ ಸ್ವಾಮಿ, 2014ರ ಲೋಕಸಭೆ ಚುನಾವಣೆಯಲ್ಲಿ ಮೋದಿ ಪರ ಪ್ರಚಾರ ಮಾಡಿದ್ದಕ್ಕಾಗಿ ಪ್ರಾಯಶ್ಚಿತ್ತ ಪಡುವುದಾಗಿ ಹೇಳಿದ್ದರು.