ಗೊತ್ತಿದ್ದ ಅಡುಗೆಯನ್ನೇ ಮಾಡಿ ಲಕ್ಷಲಕ್ಷ ಸಂಪಾದಿಸುತ್ತಿರುವ ಕೆಲಸ ಕಳೆದುಕೊಂಡ ಟೆಕ್ಕಿ
ಈಕೆ ಪ್ರಸಿದ್ಧ ಕಾಲೇಜಿನಲ್ಲಿ ಓದಿಲ್ಲ. ಅನೇಕ ಬಾರಿ, ಅನೇಕ ಕಡೆ ಅವರು ರಿಜೆಕ್ಟ್ ಆಗಿದ್ದರು. ಆದರೂ ಅವರು ಮಾಡಬೇಕೆಂದಿದ್ದ ಕೆಲಸವನ್ನು ಬಿಡಲಿಲ್ಲ. ಪ್ರಯತ್ನ, ಉತ್ಸಾಹದಿಂದ ಅವರು ಮಾಡಿದ ಕೆಲಸಕ್ಕೆ, ಕೊನೆಗೂ ಮನ್ನಣೆ ಸಿಕ್ಕಿದೆ. ದೀಪಾವಳಿ ಸಂದರ್ಭ ವೈಟ್ ಹೌಸ್‌ನಿಂದ ಬಂದಿರುವ ಆಹ್ವಾನ ತನ್ನ ಬದುಕಿನಲ್ಲಿ ಮರೆಯಲಾಗದ ಕ್ಷಣ ಎಂದು ಚೆಫ್ ಪ್ರಿಯಾಂಕಾ ನಾಯ್ಕ ಹೇಳಿದ್ದಾರೆ. ಸದ್ಯ ಬಾಣಸಿಗ, ಬರಹಗಾರ್ತಿ ಹಾಗೂ ಟಿವಿ ನಿರೂಪಕಿಯಾಗಿ ಪ್ರಿಯಾಂಕಾ ನಾಯ್ಕ ಪ್ರಸಿದ್ಧಿ ಪಡೆದಿದ್ದಾರೆ. ಅವರ ಹೋರಾಟ ಸಿನಿಮಾ ಕಥೆಗಿಂತ ಭಿನ್ನವಾಗಿಲ್ಲ. ಇಷ್ಟೊಂದು ಪ್ರಸಿದ್ಧಿ ಪಡೆದಿರುವ ಪ್ರಿಯಾಂಕ, ನೊಂದು, ಕೈಲಾಗಲ್ಲ ಎಂದು ಕುಳಿತಿರುವ ಅನೇಕರಿಗೆ ಸ್ಪೂರ್ತಿಯಾಗಿದ್ದಾರೆ.
ಟ್ವಿಟ್ಟರ್‌ನಂತಹ ದೊಡ್ಡ ಕಂಪೆನಿಯಲ್ಲಿ ತಂತ್ರಜ್ಞರಾಗಿ ಕೆಲಸ ಮಾಡಿದ್ದ ಪ್ರಿಯಾಂಕಾ ಅವರನ್ನು ಈಗ ಶೆಫ್ ಪ್ರಿಯಾಂಕಾ ಎಂದು ಎಲ್ಲರೂ ಗುರುತಿಸುತ್ತಾರೆ. ಟೆಕ್ ಜಗತ್ತಿಗೆ ವಿದಾಯ ಹೇಳಿದ ಪ್ರಿಯಾಂಕಾ ಫುಡ್ ನೆಟ್‌ವರ್ಕ್‌ನಲ್ಲಿ ಪ್ರಸಿದ್ಧಿ ಹೊಂದಿದ್ದಾರೆ. ಭಾರತೀಯ ಮೂಲದ ಪ್ರಿಯಾಂಕಾ ಫುಡ್ ನೆಟ್‌ವರ್ಕ್ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ್ದಾರೆ. ರುಚಿಕರ ಭಕ್ಷ್ಯಗಳ ವೀಡಿಯೊ ಹಂಚಿಕೊಳ್ಳುವ ಅವರು ಲಕ್ಷಾಂತರ ಫಾಲೋವರ್ಸ್ ಹೊಂದಿದ್ದಾರೆ.
ಓದು ಮುಗಿಸಿದ ಪ್ರಿಯಾಂಕಾ ಇಂಜಿನಿಯರಿಂಗ್ ಕೋರ್ಸ್ ಮಾಡಿ ಎಕ್ಸ್ ಅಂದರೆ ಟ್ವಿಟರ್‌ನಂತಹ ದೊಡ್ಡ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡರು. ಪ್ರಿಯಾಂಕಾ ಟೆಕ್ನಿಷಿಯನ್ ಆಗಿ ಕೆಲಸ ಮಾಡ್ತಿದ್ದರು. ಆದರೆ ಅಡುಗೆ ಅವರ ಇಷ್ಟದ ಹವ್ಯಾಸಗಳಲ್ಲಿ ಒಂದಾಗಿತ್ತು. ತಮಗೆ ತಿಳಿದ ಹಾಗೂ ತಿಳಿಯದ ಖಾದ್ಯಗಳನ್ನು ತಯಾರಿಸಿ, ಬ್ಲಾಗ್‌ನಲ್ಲಿ ಹಾಕುವ ಹವ್ಯಾಸವನ್ನು ಅವರು ಆರಂಭಿಸಿದ್ದರು.
ಕೆಲಸದ ಸಮಯದಲ್ಲಿ, ಪ್ರಿಯಾಂಕಾ ಅಡುಗೆಯನ್ನು ಕೇವಲ ಹವ್ಯಾಸವಾಗಿ ಪರಿಗಣಿಸಿದ್ದರು. ಆದರೆ 2022ರಲ್ಲಿ ಕೊರೊನಾ ಅವರ ದಿಕ್ಕನ್ನು ಬದಲಿಸಿತು. ಕೊರೊನಾ ಸಮಯದಲ್ಲಿ ಅವರು ಕೆಲಸ ಕಳೆದುಕೊಳ್ಳಬೇಕಾಯ್ತು. ಎಕ್ಸ್ ಕಂಪನಿ ಅವರನ್ನು ಕೆಲಸದಿಂದ ವಜಾ ಮಾಡ್ತು. ಇದು ಪ್ರಿಯಾಂಕಾ ಅವರನ್ನು ಆಘಾತಕ್ಕೊಳಪಡಿಸಿತ್ತು. ಆದ್ರೆ ಪ್ರಿಯಾಂಕಾ ಇದೇ ಬೇಸರದಲ್ಲಿ ಸಮಯ ದೂಡಲಿಲ್ಲ. ತಮ್ಮ ಹವ್ಯಾಸವನ್ನೇ ವೃತಿಯಾಗಿ ಸ್ವೀಕರಿಸುವ ನಿರ್ಧಾರಕ್ಕೆ ಬಂದ್ರು.
ಚೆಫ್ ಆದ್ಮೇಲೂ ಪ್ರಿಯಾಂಕಾ ಯಶಸ್ಸು ಸುಲಭವಾಗಿರಲಿಲ್ಲ. ಪ್ರಿಯಾಂಕಾ ಸಸ್ಯಾಹಾರಿ ಕುಟುಂಬಕ್ಕೆ ಸೇರಿದವರು. ಇಂತಹ ಪರಿಸ್ಥಿತಿಯಲ್ಲಿ ವಿಶ್ವದ ಅತಿ ದೊಡ್ಡ ಆಹಾರೋತ್ಸವದಲ್ಲಿ ಪಾಲ್ಗೊಂಡು ಸಸ್ಯಾಹಾರವನ್ನು ಬಡಿಸುವುದು ಸವಾಲಿನ ಕೆಲಸವಾಗಿತ್ತು. ಪ್ರಿಯಾಂಕಾ ಸೋಷಿಯಲ್ ಮೀಡಿಯಾದ ಸ್ಟಾರ್ ಕುಕ್ ಆಗಿ ಈಗ ಯಶಸ್ವಿಯಾಗಿದ್ದಾರೆ.
ಏನಾಗುತ್ತದೋ ಅದು ಒಳ್ಳೆಯದಕ್ಕೆ ಆಗುತ್ತದೆ ಎಂಬುದನ್ನು ಪ್ರಿಯಾಂಕ ಬಲವಾಗಿ ನಂಬುತ್ತಾರೆ. ಪ್ರಿಯಾಂಕಾ ಈಗ ತಮ್ಮ ಅಡುಗೆ ವೀಡಿಯೊಗಳನ್ನು ಯೂಟ್ಯೂಬ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಅವರ ಪ್ರತಿ ವೀಡಿಯೊ ಲಕ್ಷಾಂತರ ವೀವ್ಸ್ ಪಡೆಯುತ್ತಿದೆ. ಮನೆಯಲ್ಲೇ ಕುಳಿತು ಪ್ರಿಯಾಂಕಾ, ಲಕ್ಷಾಂತರ ರೂಪಾಯಿ ಸಂಪಾದನೆ ಮಾಡ್ತಿದ್ದಾರೆ.
2024 ರ ಅಕ್ಟೋಬರ್‌ನಲ್ಲಿ ದೀಪಾವಳಿ ಆಚರಣೆಗಾಗಿ ಶ್ವೇತಭವನದಿಂದ ಅವರಿಗೆ ಆಹ್ವಾನ ಬಂದಿತ್ತು. ಯುಎಸ್ ಅಧ್ಯಕ್ಷರ ಮನೆಗೆ ಆಹ್ವಾನ ಸಿಕ್ಕಿದ ನಂತ್ರ ಪ್ರಿಯಾಂಕ ಜನಪ್ರಿಯತೆ ಮತ್ತಷ್ಟು ಹೆಚ್ಚಾಯ್ತು. ಈ ಸಮಾರಂಭದಲ್ಲಿ ಭಾರತೀಯ ಮೂಲದ 600 ಕ್ಕೂ ಹೆಚ್ಚು ಅಮೆರಿಕನ್ ನಾಗರಿಕರು ಭಾಗವಹಿಸಿದ್ದರು. ಅದ್ರಲ್ಲಿ ಒಬ್ಬರಾಗಿದ್ದ ಪ್ರಿಯಾಂಕ, ಈಗ ಜೀವನವನ್ನು ಎಂಜಾಯ್ ಮಾಡ್ತಿದ್ದಾರೆ. ಹವ್ಯಾಸವೇ ಅವರನ್ನು ಇಷ್ಟು ಎತ್ತರಕ್ಕೆ ತಂದು ನಿಲ್ಲಿಸಿದೆ.