ಕೋಟಿ ರೂ. ಸಂಬಳದ ಉದ್ಯೋಗ ತೊರೆದ ಬೆಂಗಳೂರಿನ ಟೆಕ್ಕಿ: ಕೈಯಲ್ಲಿ ಯಾವುದೇ ಹೊಸ ಆಫರ್ ಇಲ್ಲ ಆದ್ರೂ ಈ ನಿರ್ಧಾರವೇಕೆ ಗೊತ್ತಾ?
ಬೆಂಗಳೂರು: ಇರುವ ಕೆಲಸ ಬಿಡಬೇಕೆಂದ್ರೆ ನಮಗೆ ಹೊಸ ಉದ್ಯೋಗದ ಆಫರ್ ಲೆಟರ್ ಇರಲೇಬೇಕು. ಒಂದು ತಿಂಗಳ ಕೆಲಸ ಇರದಿದ್ದರೆ ಬದುಕು ಖಂಡಿತಾ ಕಷ್ಟವಾಗುತ್ತದೆ. ಆದರೆ ಬೆಂಗಳೂರಿನಲ್ಲೊಬ್ಬ ಟೆಕ್ಕಿ ಯಾವುದೇ ಹೊಸ ಉದ್ಯೋಗದ ಆಫರ್ ಇರದಿದ್ದರೂ 1 ಕೋಟಿ ರೂ. ಸಂಬಳಕ್ಕೆ ವಿದಾಯ ಹೇಳಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಅವರು ಈ ವಿಚಾರ ಪೋಸ್ಟ್ ಆಗಿದ್ದು, ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಹೊಸ ಚರ್ಚಗೆ ಕಾರಣವಾಗಿದೆ.
30 ವರ್ಷದ ವರುಣ್ ಹಸಿಜಾ ಎಂಬವರು ಪ್ರೊಡಕ್ಟ್ ಮ್ಯಾನೇಜರ್ ಆಗಿ ಕಳೆದ 10 ವರ್ಷದಿಂದ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಸದ್ಯ 1 ಕೋಟಿಗೂ ಅಧಿಕ ಸಂಬಳ ನೀಡುತ್ತಿದ್ದ ಕಂಪೆನಿಯನ್ನು ತೊರೆದಿರುವ ವರುಣ್, ತಮ್ಮ ನಿರ್ಧಾರವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವರುಣ್ ತೆಗೆದುಕೊಂಡು ನಿರ್ಧಾರ ಬೆಂಗಳೂರು ಸೇರಿದಂತೆ ದೇಶದ ಹಲವು ಟೆಕ್ಕಿಗಳನ್ನು ಅಚ್ಚರಿಗೊಳಿಸಿದೆ. ಹಾಗಾದ್ರೆ ವರುಣ್ ಹಸಿಜಾ 1 ಕೋಟಿ ರೂ. ಸಂಬಳದ ಕೆಲಸ ತೊರೆದಿದ್ಯಾಕೆ ಎಂಬುದನ್ನು ನೋಡೋಣ.
ಕೆಲವು ತಿಂಗಳ ಹಿಂದೆ ತನ್ನ ಜೀವನದ ಅತ್ಯಂತ ಕಠಿಣ ಮತ್ತು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ನಾನು ನನ್ನ ಆರಾಮದಾಯಕ ಮತ್ತು ಅತ್ಯಧಿಕ ಸಂಬಳದ (1 ಕೋಟಿಗೂ ಅಧಿಕ) ಉದ್ಯೋಗವನ್ನು ತೊರೆದಿದ್ದೇನೆ. ಯಾವುದೇ ಬ್ಯಾಕ್‌ಅಪ್ ಪ್ಲ್ಯಾನ್ ಇಲ್ಲ. ಬೇರೆ ಕಂಪನಿಯ ಕೆಲಸದ ಆಫರ್ ಕೂಡಾ ನನ್ನ ಬಳಿಯಿಲ್ಲ. ಸುದೀರ್ಘ ಒಂದು ದಶಕದ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಬ್ರೇಕ್ ಬೇಕು ಅನ್ನಿಸಿದೆ. ಆದ್ದರಿಂದ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ವರುಣ್ ಹಸಿಜಾ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಇದು ನಿರ್ಧಾರ ದಿಢೀರ್‌ನೇ ತೆಗೆದುಕೊಂಡ ನಿರ್ಧಾರವಲ್ಲ. ಇಷ್ಟು ವರ್ಷಗಳಲ್ಲಿ ಎಲ್ಲಿ ಮತ್ತು ಹೇಗೆ ಕೆಲಸ ಮಾಡಬೇಕೆಂಬ ನಿಯಮ ಮಾಡಿಕೊಂಡಿದ್ದೆ. ಇದಕ್ಕಾಗಿ ನಾನೇ ಸಂತೋಷ, ಪ್ರತಿಫಲ ಮತ್ತು ಹಣ ಗಳಿಸೋದು (Happiness, Impact and Wealth Creation) ಎಂಬ ಚೌಕಟ್ಟನ್ನು ಹಾಕಿಕೊಂಡಿದ್ದೆ. ಇದೀಗ ಕೆಲಸ ತೊರೆಯಲು ಈ 3 ಚೌಕಟ್ಟುಗಳು ಹೇಗೆ ಕಾರಣವಾದವು ಎಂಬುದನ್ನು ಸಹ ವರುನ್ ಎಕ್ಸ್ ಖಾತೆಯಲ್ಲಿ ವಿವರಿಸಿದ್ದಾರೆ.
ನಾವು ದಿನದ 24ಗಂಟೆಗಲ್ಲಿ ಶೇ.80ರಷ್ಟು ಸಮಯವನ್ನು ಕೆಲಸ ಮಾಡೋದರಲ್ಲಿಯೇ ಕಳೆಯುತ್ತೇವೆ. ಆದರೆ ಕೆಲಸ ಮಾಡುವ ಸ್ಥಳದಲ್ಲಿ ಸಂತೋಷವಿಲ್ಲದಿದ್ದರೆ ಏನು ಪ್ರಯೋಜನ? ನನ್ನ ಪ್ರಕಾರ ಕೆಲಸಕ್ಕಾಗಿ ಸಂತೋಷವನ್ನು ನಿರ್ಲಕ್ಷ್ಯಿಸಲು ಆಗಲ್ಲ. ಕೆಲಸ ವಾತಾವರಣ ಚೆನ್ನಾಗಿರಬೇಕಾಗುತ್ತದೆ.
ನಮ್ಮ ಕೆಲಸವು ಗ್ರಾಹಕರು, ವ್ಯಾಪಾರ ಅಥವಾ ಎರಡರ ಮೌಲ್ಯವನ್ನು ಸೃಷ್ಟಿಸಬೇಕಾಗುತ್ತದೆ. ಸಂತೋಷದಿಂದ ಗ್ರಾಹಕರ ಸಮಸ್ಯೆಗಳನ್ನು ಪರಿಹರಿಸಲು, ತಂಡವನ್ನು ಮುನ್ನಡೆಸಿದಾಗ ಹೆಚ್ಚಾಗುವ ಆದಾಯ ಕೆಲಸ ಮಾಡಲು ಪ್ರೋತ್ಸಾಹಿಸುತ್ತದೆ.
ಸಂತೋಷ, ಪ್ರತಿಫಲ ಮತ್ತು ಸಂಪತ್ತು ಒಂದೇ ಕೆಲಸದಲ್ಲಿ ಕಾಣಳು ಸಿಗಲ್ಲ. ನನ್ನ ಕೆಲಸದಲ್ಲಿ ಸಂತೋಷ ಮತ್ತು ಪ್ರತಿಫಲ ಇರಲಲ್ಲ. ಯಾವುದಕ್ಕೆ ಅದ್ಯತೆ ನೀಡಬೇಕೆಂದು ನೀವು ನಿರ್ಧರಿಸಿ ಎಂದು ವರುಣ್ ಹೇಳಿದ್ದಾರೆ.
ವರುಣ್ ಹಸಿಜಾ ಟ್ವೀಟ್‌ಗೆ ಲಕ್ಷಾಂತರ ಪ್ರತಿಕ್ರಿಯೆಗಳು ಬಂದಿವೆ. ಕೆಲಸದ ವಾತಾವರಣ ಮತ್ತು ನಮ್ಮ ಕೆಲಸಕ್ಕೆ ಸಿಗುವ ಪ್ರತಿಫಲ ಸಹ ಉದ್ಯೋಗಿಯ ಮೇಲೆ ಪರಿಣಾಮ ಬೀರುತ್ತದೆ. ಎಷ್ಟೇ ಸಂಬಳ ಸಿಕ್ಕರೂ ಮಾಡುವ ಕೆಲಸದಲ್ಲಿ ಆಸಕ್ತಿ ಮತ್ತು ಸಂತೋಷ ಕಾಣದಿದ್ದರೆ ಏನು ಪ್ರಯೋಜನ ಎಂಬ ಮಾತು ಸಹ ಕೇಳಿ ಬಂದಿದೆ.