ನಿರ್ದೇಶಕನಾಗಿ ಭಾರೀ ಗ್ಯಾಪ್ ತೆಗೆದುಕೊಳ್ಳಲು ಮೆಗಾಸ್ಟಾರ್ ಚಿರಂಜೀವಿ ಕಾರಣ- ಅಚ್ಚರಿ ಹೇಳಿಕೆ ನೀಡಿದ ರಿಯಲ್ ಸ್ಟಾರ್ ಉಪೇಂದ್ರ
Monday, December 16, 2024
ಚಂದನವನದ ರಿಯಲ್ ಸ್ಟಾರ್ ಉಪೇಂದ್ರ ಬಹಳ ವರ್ಷಗಳ ಬಳಿಕ ನಿರ್ದೇಶನದ ಕ್ಯಾಪ್ ಧರಿಸಿರುವುದು ನಿಮಗೆಲ್ಲರಿಗೂ ಗೊತ್ತಿದೆ. ಅವರು ನಿರ್ದೇಶಿಸಿ, ನಟಿಸಿರುವ ಬಹುನಿರೀಕ್ಷಿತ ಯುಐ ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಇದೇ ಡಿ.20ರಂದು ಸಿನಿಮಾ ಬಿಡುಗಡೆಯಾಗಲಿದೆ. ಈ ಹಿನ್ನೆಲೆಯಲ್ಲಿ ಯುಐ ಚಿತ್ರತಂಡ ಪ್ರಚಾರ ಕಾರ್ಯದಲ್ಲಿ ಬಹಳ ಬ್ಯುಸಿಯಾಗಿದೆ.
ಪ್ರಚಾರದ ಅಂಗವಾಗಿ ಸ್ಟಾರ್ ನಟರನ್ನು ಸಿನಿಮಾ ತಂಡ ಭೇಟಿಯಾಗುತ್ತಿದೆ. ಕೆಲದಿನಗಳ ಹಿಂದೆ ಬಾಕಿವುಡ್ ನಟ ಆಮೀರ್ ಖಾನ್ ಅವರನ್ನು ಭೇಟಿ ಮಾಡಿದ್ದ ಉಪೇಂದ್ರ, ಬಳಿಕ ಟಾಲಿವುಡ್ ಸ್ಟಾರ್ ನಟ ಅಲ್ಲು ಅರ್ಜುನ್‌ರನ್ನು ಭೇಟಿ ಮಾಡಿದ್ದರು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅದ್ಧೂರಿ ಬಿಡುಗಡೆಗೆ ಚಿತ್ರತಂಡ ಪ್ಲಾನ್ ಮಾಡಿದ್ದು, ಉಳಿದಿರುವ ಸಮಯದಲ್ಲಿ ಭರ್ಜರಿ ಪ್ರಚಾರದಲ್ಲಿ ತೊಡಗಿದೆ.
ಅಂದಹಾಗೆ ಉಪೇಂದ್ರರ ನಟನೆಗೆ ಎಷ್ಟು ಮಂದಿ ಅಭಿಮಾನಿಗಳಿದ್ದಾರೋ ಅದಕ್ಕಿಂತಲೂ ಹೆಚ್ಚಿನ ಅಭಿಮಾನಿಗಳ ಬಳಗ ಅವರ ನಿರ್ದೇಶನಕ್ಕಿದೆ. ಆದ್ದರಿಂದಲೇ ಯುಐ ಸಿನಿಮಾ ವೀಕ್ಷಿಸಲು ಎಲ್ಲರೂ ಎದುರು ನೋಡುತ್ತಿದ್ದಾರೆ. ನಿರ್ದೇಶಕರಾಗಿ ಆರಂಭದಲ್ಲಿ ಹೊಸಕಥೆಗಳ ಮೂಲಕ ಹಿಟ್ ಸಿನಿಮಾಗಳನ್ನು ನೀಡಿದ ಉಪೇಂದ್ರ ಬಳಿಕ ಹೀರೋ ಆಗಿ ಬದಲಾದರು. ಆರಂಭದಲ್ಲಿ ನಿರ್ದೇಶಕರಾಗಿ ಸಾಲು ಸಾಲು ಸಿನಿಮಾ ಮಾಡಿದ್ದ ಉಪೇಂದ್ರ, ಬಳಿಕ ನಿರ್ದೇಶಕರಾಗಿ ಲಾಂಗ್ ಗ್ಯಾಪ್ ತೆಗೆದುಕೊಂಡು ಸಾಂದರ್ಭಿಕ ಸಿನಿಮಾಗಳನ್ನು ಮಾಡಿದರು.
ಸದ್ಯ ಉಪೇಂದ್ರ ಯುಐ ಸಿನಿಮಾದ ಮೂಲಕ ಬಹಳಷ್ಟು ವರ್ಷಗಳ ಬಳಿಕ ಮತ್ತೆ ತೆರೆಯ ಮೇಲೆ ಬರುತ್ತಿದ್ದಾರೆ. ಹೀಗಾಗಿ ಸಿನಿಮಾ ಮೇಲೆ ಅವರ ಅಭಿಮಾನಿಗಳಿಗೆ ಬೆಟ್ಟದಷ್ಟು ನಿರೀಕ್ಷೆಯಿದೆ. ಈಗಾಗಲೇ ಹೊರಬಿದ್ದಿರುವ ಟೀಸರ್ ಹಾಗೂ ಕಂಟೆಂಟ್‌ನಿಂದಾಗಿ ಸಿನಿಮಾದ ಮೇಲೆ ಕ್ರೇಜ್ ಕೂಡಾ ಹೆಚ್ಚಾಗಿದೆ. ಈ ಸಿನಿಮಾ ತೆಲುಗಿನಲ್ಲೂ ಬಿಡುಗಡೆಯಾಗುತ್ತಿರುವ ಕಾರಣ ನಿನ್ನೆ ಯುಐ ಸಿನಿಮಾದ ಪ್ರೀ ರಿಲೀಸ್ ಈವೆಂಟ್ ನಡೆಯಿತು. ಈ ವೇಳೆ ಮಾತನಾಡಿದ ಉಪೇಂದ್ರ, ಮೆಗಾಸ್ಟಾರ್ ಚಿರಂಜೀವಿ ಬಗ್ಗೆ ಕುತೂಹಲಕಾರಿ ಕಾಮೆಂಟ್ ಮಾಡಿದ್ದಾರೆ.
ನನಗೆ ಅಲ್ಲು ಅರವಿಂದ್ ಗಾರು ಮತ್ತು ಚಿರಂಜೀವಿ ಕುಟುಂಬದೊಂದಿಗೆ ಸುಮಾರು 25 ವರ್ಷಗಳ ಸಂಬಂಧವಿದೆ. 1996-97ರಲ್ಲಿ ನಿರ್ದೇಶಕನಾಗಿ ಚಿರಂಜೀವಿ ಅವರೊಂದಿಗೆ ಸಿನಿಮಾ ಮಾಡಲು ಸುಮಾರು ಒಂದು ವರ್ಷ ಸುತ್ತಾಡಿದ್ದೆ. ನಾನು ಸ್ಕ್ರಿಪ್ಟ್ ಬರೆದು ಅವರ ಕಾಲ್‌ಶೀಟ್‌ಗಾಗಿ ಎದುರು ನೋಡುತ್ತಿದ್ದೆ. ಆಗ ನನಗೆ ಅರ್ಥವಾಗಿದ್ದೇನೆಂದರೆ, ಚಿರಂಜೀವಿ ಅವರು ಪ್ರತಿಯೊಂದು ದೃಶ್ಯ ಮತ್ತು ಸಂಭಾಷಣೆಯನ್ನು ಹತ್ತು ಬಾರಿ ಅಲ್ಲ ನೂರು ಬಾರಿ ಯೋಚಿಸುತ್ತಾರೆ. ಅದಕ್ಕೇ ಅವರು ಮೆಗಾಸ್ಟಾರ್ ಆದರು ಎಂದು ಉಪೇಂದ್ರ ಹೇಳಿದರು.
ಆ ಸಮಯದಲ್ಲಿ ನಾವು ಸರಳವಾಗಿ ಸ್ಕ್ರಿಪ್ಟ್ ಬರೆದು ಸಿನಿಮಾ ಮಾಡುತ್ತಿದ್ದೆವು. ಆದರೆ, ಇಲ್ಲಿಯವರು ಆ ಸಂದರ್ಭದಲ್ಲೇ ಬಹಳ ಶ್ರಮಿಸುತ್ತಿದ್ದರು. ಸ್ಕ್ರಿಪ್ಟ್ ವಿಚಾರದಲ್ಲಿ ಗಂಭೀರವಾಗಿ ಕೆಲಸ ಮಾಡುತ್ತಿದ್ದರು. ಇಲ್ಲಿ ಒಂದೋ ಅಥವಾ ಎರಡೋ ವರ್ಷ ಬರೀ ಸ್ಕ್ರಿಪ್ಟ್ ಮೇಲೆಯೇ ಅಧಿಕ ಕಾಲ ಶ್ರಮಿಸುತ್ತಾರೆ. ಅಷ್ಟೊಂದು ಸಮರ್ಪಣಾ ಮನೋಭಾವವಿದೆ. ಅಂದಿನಿಂದಲೇ ನಾನು ಸ್ಕ್ರಿಪ್ಟ್ ಕೆಲಸದ ಕಡೆ ಹೆಚ್ಚು ಗಮನ ಹರಿಸಲು ಆರಂಭಿಸಿದೆ. ನಿರ್ದೇಶಕನಾಗಿ ನನ್ನ ಸಿನಿಮಾಗಳ ನಡುವೆ ಹಲವು ವರ್ಷಗಳ ಗ್ಯಾಪ್ ಇರುವುದಕ್ಕೆ ಸ್ಕ್ರಿಪ್ಟ್ ವರ್ಕ್ ಕಾರಣ. ಅಂದಿನಿಂದ ಸ್ಕ್ರಿಪ್ಟ್ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ, ಸಿನಿಮಾ ಮಾಡುವುದಕ್ಕೆ ಸಮಯ ತೆಗೆದುಕೊಳ್ಳುತ್ತಿದ್ದೇನೆ ಎಂದು ಉಪೇಂದ್ರ ಹೇಳಿದರು.
ಉಪೇಂದ್ರ ಅವರು ಮಾತನಾಡಿರುವ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಮೆಗಾಸ್ಟಾರ್ ಚಿರಂಜೀವಿ ಅವರ ಅಭಿಮಾನಿಗಳು ವಿಡಿಯೋ ಹಂಚಿಕೊಂಡು ಸಂತಸ ವ್ಯಕ್ತಪಡಿಸುತ್ತಿದ್ದಾರೆ.