ಫ್ಲೈಟ್‌ನಲ್ಲಿ ಸಿಕ್ಕ ರವಿಚಂದ್ರನ್‌ರಲ್ಲಿ ಆ ಒಂದು ವಿಚಾರಕ್ಕೆ ಕ್ಷಮೆ ಕೇಳಿದ ನಟಿ ಯಮುನಾ
ಕನ್ನಡದವರಾದರೂ ತೆಲುಗಿನಲ್ಲಿ ಖ್ಯಾತರಾಗಿರುವ ನಟಿ ಯಮುನಾ ಸಂದರ್ಶನವೊಂದರಲ್ಲಿ ಮಾತನಾಡಿ ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಡಾ.ರಾಜ್‌ಕುಮಾರ್ ಅವರನ್ನು ಅವರದೇ ಮನೆಯಲ್ಲಿ ಭೇಟಿಯಾಗಿದ್ದು, ಪಾರ್ವತಮ್ಮನವರೊಂದಿಗೆ ಮಾತನಾಡಿ ಶಿವರಾಜ್‌ಕುಮಾರ್ ಅವರೊಂದಿಗೆ ಸಿನಿಮಾದಲ್ಲಿ ನಟಿಸಲು ಡೇಟ್ಸ್ ಕೊಟ್ಟಿದ್ದು, ರಾಘವೇಂದ್ರ ರಾಜ್‌ಕುಮಾರ್ ಜೊತೆ ನಟಿಸಬೇಕಾಗಿದ್ದ 'ಮೋಡದ ಮರೆಯಲ್ಲಿ' ಸಿನಿಮಾಗೆ ಡೇಟ್ಸ್ ಕೊಡಲು ಸಾಧ್ಯವಾಗದೇ ಇದ್ದಿದ್ದು, ಬಳಿಕ ಶಿವರಾಜ್‌ಕುಮಾರ್ ಅವರ ಜೊತೆ ಎರಡು ಸಿನಿಮಾ ಮಾಡಿದ್ದು, ಹೀಗೆ ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ ನಟಿ ಯಮುನಾ.
ಈಗಲೂ ಸುಂದರವಾಗಿಯೇ ಇರುವ ನಟಿ ಯಮುನಾ ಅವರು 90ರ ದಶಕದಲ್ಲಿ ಕನ್ನಡ, ತಮಿಳು ಹಾಗೂ ತೆಲುಗು ಭಾಷೆಗಳ ಸಿನಿಮಾಗಳಲ್ಲಿ ಮಿಂಚಿದವರು. ಯಮುನಾ ಕನ್ನಡ ಮತ್ತು ತಮಿಳಿಗಿಂತ ಹೆಚ್ಚಾಗಿ ತೆಲುಗಿನಲ್ಲೇ ಸ್ಟಾರ್ ನಟಿಯಾಗಿ ಮೆರೆದವರು.
ಆದ್ದರಿಂದ ಕನ್ನಡ ಸಿನಿಮಾಗಳಿಗೆ ಡೇಟ್ಸ್ ಕೊಡಲು ಸಾಧ್ಯವೇ ಆಗದಷ್ಟು ಬ್ಯುಸಿ ಇದ್ದ ಯಮುನಾ ಅವರು ಆ ಬಗ್ಗೆ ಈಗ ಬೇಸರ ವ್ಯಕ್ತಪಡಿಸಿದ್ದಾರೆ. 'ನನಗೆ ಕನ್ನಡ ಸಿನಿಮಾ ಆಫರ್ ಬಂದಾಗಲೆಲ್ಲಾ ನನ್ನ ಡೇಟ್ಸ್ ಇರುತ್ತಿರಲಿಲ್ಲ. ಹೀಗಾಗಿ ಬಹಳಷ್ಟು ಕನ್ನಡ ಸಿನಿಮಾ ಮಿಸ್ ಮಾಡಿಕೊಂಡಿದ್ದೇನೆ' ಎಂದಿದ್ದಾರೆ.
ಇನ್ನು, ಒಂದು ಘಟನೆಯನ್ನು ನಟಿ ಯಮುನಾ ಹಂಚಿಕೊಂಡಿದ್ದಾರೆ. ಕನ್ನಡದಲ್ಲಿ ನಟ ರವಿಚಂದ್ರನ್‌ರೊಂದಿಗೆ 'ಚಿನ್ನ' ಸಿನಿಮಾದಲ್ಲಿ ನಟಿಸುತ್ತಿದ್ದ ದಿನಗಳು. ಆ ಸಿನಿಮಾದಲ್ಲಿ ಬರುವ 'ನನ್ನವಳು ನನ್ನವಳು' ಹಾಡಿಗೆ ಸಾಕಷ್ಟು ಸಮಯದಿಂದ ಡೇಟ್ಸ್ ಕೊಡಲು ಆಗಿರಲಿಲ್ಲವಂತೆ.
ಆ ಕಾರಣಕ್ಕೆ ನಟ ರವಿಚಂದ್ರನ್ ಅವರು ಹೆಚ್ಚುಹೆಚ್ಚಾಗಿ ಆ ಹಾಡಿನಲ್ಲಿ ನಟಿ ಯಮುನಾರ ಸ್ಟಿಲ್ ಪೋಟೋಗಳನ್ನೇ ಬಳಸಿಕೊಂಡಿದ್ದಾರಂತೆ. ಆ ಬಗ್ಗೆ ನಟಿ ಯಮುನಾ ಮಾತನಾಡಿ ಸೀಕ್ರೆಟ್ ಒಂದನ್ನು ಹಂಚಿಕೊಂಡಿದ್ದಾರೆ.
'ನನ್ನವಳು ನನ್ನವಳು' ಹಾಡಿನ ಶೂಟಿಂಗ್‌ಗೆ ರವಿ ಸರ್‌ಗೆ ಇನ್ನೂ ಹೆಚ್ಚಿನ ಡೇಟ್ಸ್ ಬೇಕಿತ್ತು. ಆದರೆ, ನನಗೆ ಬೇರೆ ತೆಲುಗು ಸಿನಿಮಾದ ಶೂಟಿಂಗ್ ಇದ್ದ ಕಾರಣಕ್ಕೆ ಅವರಿಗೆ ಬೇಕಾದಷ್ಟು ಡೇಟ್ಸ್ ಕೊಡಲು ಸಾಧ್ಯವೇ ಆಗಲಿಲ್ಲ. ನನ್ನ ಫೋಟೋ ವಿಡಿಯೋ ಯೂಸ್ ಮಾಡಿಕೊಂಡು ಅವರು ಆ ಹಾಡಿನ ಶೂಟಿಂಗ್ ಮುಗಿಸಿಕೊಂಡರು.
ಆದರೆ ಆ ಬಗ್ಗೆ ನನಗೆ ಬೇಸರವಿತ್ತು. ಒಮ್ಮೆ ನಾನು ಹೈದ್ರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದಾಗ ಫ್ಲೈಟ್‌ನಲ್ಲಿ ಸಿಕ್ಕರು. ಆಗ ಆ ಬಗ್ಗೆ ಸಾರಿ ಕೇಳಿದೆ.
ಅದಕ್ಕೆ ಅವರು 'ಅಯ್ಯೋ, ನೀನು ಅಷ್ಟು ವರ್ಷಗಳ ಹಳೆಯ ಘಟನೆಯನ್ನೂ ಇನ್ನೂ ಮನಸ್ಸಿನಲ್ಲಿ ಇಟ್ಕೊಂಡಿದೀಯಾ? ಅವೆಲ್ಲಾ ಏನೂ ಬೇಸರ ಇಟ್ಕೋಬೇಡ, ಅವೆಲ್ಲಾ ಒಮ್ಮೊಮ್ಮೆ ಆಗ್ತಾ ಇರ್ತಾವೆ' ಅಂದಿದ್ದಾರೆ. ಹಾಗೆಯೇ, ನನಗೆ ವಿಂಡೋ ಸೈಡ್ ಸಿಟ್ ಬಿಟ್ಟುಕೊಟ್ಟು ಹೆಲ್ಪ್ ಕೂಡ ಮಾಡಿದ್ದಾರೆ ಎಂದಿದ್ದಾರೆ ನಟಿ ಯಮುನಾ.