-->
ಯೆಮನ್‌ನಲ್ಲಿ ಮರಣದಂಡನೆ ಶಿಕ್ಷೆಗೊಳಗಾದ ಕೇರಳದ ನರ್ಸ್‌- ಅಧಿಕೃತ ಮುದ್ರೆ ಒತ್ತಿದ ಯೆಮನ್ ಅಧ್ಯಕ್ಷ

ಯೆಮನ್‌ನಲ್ಲಿ ಮರಣದಂಡನೆ ಶಿಕ್ಷೆಗೊಳಗಾದ ಕೇರಳದ ನರ್ಸ್‌- ಅಧಿಕೃತ ಮುದ್ರೆ ಒತ್ತಿದ ಯೆಮನ್ ಅಧ್ಯಕ್ಷ


ಯೆಮನ್ ಪ್ರಜೆಯೊಬ್ಬನ ಹತ್ಯೆ ಮಾಡಿರುವ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೊಳಗಾಗಿ ಯೆಮನ್‌ ಜೈಲಿನಲ್ಲಿರುವ ಕೇರಳ ಮೂಲದ ನರ್ಸ್ ನಿಮಿಷಾ ಪ್ರಿಯಾ ಅವರಿಗೆ ವಿಧಿಸಿದ್ದ ಶಿಕ್ಷೆಗೆ ಈಗ ಯೆಮನ್ ಅಧ್ಯಕ್ಷರೂ ಅಧಿಕೃತ ಮುದ್ರೆಯೊತ್ತಿದ್ದಾರೆ. ಆದ್ದರಿಂದ ಒಂದು ತಿಂಗಳ ಒಳಗೆ ನಿಮಿಷಾ ಪ್ರಿಯಾ ಅವರಿಗೆ ಶಿಕ್ಷೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. 

2017ರಿಂದಲೂ ಜೈಲು ಶಿಕ್ಷೆ ಅನುಭವಿಸುತ್ತಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾ ರ ಕ್ಷಮೆಯ ಮನವಿಯನ್ನು ಇದೀಗ ಯೆಮನ್ ಅಧ್ಯಕ್ಷ ರಷದ್ ಅಲ್ ಅಲಿಮಿ ಕೂಡ ತಿರಸ್ಕರಿಸಿದ್ದಾರೆ. ಆದ್ದರಿಂದ ಅವರಿಗೆ ಶಿಕ್ಷೆಯಾಗುವುದು ಖಚಿತವಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವೂ ಪ್ರತಿಕ್ರಿಯಿಸಿದ್ದು, ಕೇರಳದ ನಿಮಿಷ ಪ್ರಿಯಾಗೆ ಯೆಮನ್‌ನಲ್ಲಿ ಶಿಕ್ಷೆ ವಿಧಿಸುತ್ತಿರುವ ವಿಚಾರ ತಿಳಿದಿದೆ ಎಂದು ಹೇಳಿದೆ.

36ರ ಹರೆಯದ ನಿಮಿಷಾ ಪ್ರಿಯಾರನ್ನು ಮರಣದಂಡನೆಯಿಂದ ರಕ್ಷಿಸಲು ಎಲ್ಲಾ ಪ್ರಯತ್ನ ಮಾಡಿ ವಾಪಸ್ ಮನೆಗೆ ಮರಳಿದ ಕುಟುಂಬಕ್ಕೆ ಯೆಮನ್ ಅಧ್ಯಕ್ಷರ ಈ ನಿರ್ಧಾರವು ಆಘಾತವನ್ನುಂಟು ಮಾಡಿದೆ. ನಿಮಿಷಾ ತಾಯಿ ಪ್ರೇಮಾ ಕುಮಾರಿ( 57) ಈ ವರ್ಷದ ಆರಂಭದಲ್ಲಿ ಪುತ್ರಿಯನ್ನು ಉಳಿಸಿಕೊಳ್ಳಲು ಯೆಮೆನ್‌ನ ರಾಜಧಾನಿ ಸನಾವನ್ನು ತಲುಪಿದ್ದರು. ಅವರು ಮರಣದಂಡನೆ ಮನ್ನಾ ಮಾಡಿ ಅದರ ಬದಲು ಹತ್ಯೆಯಾದ ವ್ಯಕ್ತಿಯ ಕುಟುಂಬದೊಂದಿಗೆ ರಕ್ತಧನವನ್ನು(blood money) ನೀಡುವುದಕ್ಕೆ ಮಾತುಕತೆ ನಡೆಸಲು ಅಲ್ಲಿಯೇ ತಂಗಿದ್ದಾರೆಂದು ವರದಿಯಾಗಿದೆ. (ರಕ್ತಧನ ಎಂದರೆ ಮರಣದಂಡನೆಗೆ ಬದಲಾಗಿ ಮರಣದಂಡನೆಗೊಳಗಾದ ವ್ಯಕ್ತಿ ಸಂತ್ರಸ್ತನ ಕುಟುಂಬಕ್ಕೆ ನೀಡುವ ಹಣವಾಗಿದೆ.)

ಪಾಲಕ್ಕಾಡ್ ಮೂಲದ ನಿಮಿಷಾ ಪ್ರಿಯಾ ಅವರು ತರಬೇತಿ ಪಡೆದ ನರ್ಸ್ ಆಗಿದ್ದರು. ಯೆಮೆನ್‌ನ ಖಾಸಗಿ ಆಸ್ಪತ್ರೆಗಳಲ್ಲಿ ಕೆಲವು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಅವರ ಪತಿ ಮತ್ತು ಅಪ್ರಾಪ್ತ ಪುತ್ರಿಗೆ ಹಣಕಾಸಿನ ನೆರವು ನೀಡಲು 2014ರಲ್ಲಿ ಭಾರತಕ್ಕೆ ಮರಳಿದರು. ಅದೇ ವರ್ಷ, ಯೆಮನ್‌ನಲ್ಲಿ ಅಂತರಿಕ ಯುದ್ಧ ಶುರುವವಾಗಿತ್ತು. ಆದ್ದರಿಂದ ದೇಶವು ಹೊಸ ವೀಸಾಗಳನ್ನು ನೀಡುವುದನ್ನು ನಿಲ್ಲಿಸಿತ್ತು. ಇದರಿಂದ ಅವರಿಗೆ ಮತ್ತೆ ಯೆಮನ್‌ಗೆ ಹೋಗಲು ಸಾಧ್ಯವಾಗಲಿಲ್ಲ. ಬಳಿಕ 2015ರಲ್ಲಿ, ಪ್ರಿಯಾ ಯೆಮನ್‌ನ ಸನಾದಲ್ಲಿ ತನ್ನ ಕ್ಲಿನಿಕ್ ಸ್ಥಾಪಿಸಲು ಮಹದಿಯ ಬೆಂಬಲವನ್ನು ಕೋರಿದ್ದಳು. ಯೆಮನ್ ಕಾನೂನಿನ ಪ್ರಕಾರ, ಕ್ಲಿನಿಕ್ ಮತ್ತು ವ್ಯಾಪಾರ ಸಂಸ್ಥೆಗಳನ್ನು ಸ್ಥಾಪಿಸಲು ಅಲ್ಲಿನ ಪ್ರಜೆಗಳಿಗೆ ಮಾತ್ರ ಅವಕಾಶವಿದೆ. ಈ ವ್ಯವಹಾರದ ವಿವಾದವೇ ಕೊನೆಗೆ ಮಹದಿ ಕೊಲೆಯಲ್ಲಿ ಅಂತ್ಯವಾಗಿತ್ತು.

2017ರಲ್ಲಿ ಯೆಮನ್ ಪ್ರಜೆಯಾದ ತಲಾಲ್ ಅಬ್ದೋ ಮಹದಿಯನ್ನು ಕೊಂದ ಹಿನ್ನೆಲೆಯಲ್ಲಿ ನಿಮಿಷಾ ಪ್ರಿಯಾ ತಪ್ಪಿತಸ್ಥರೆಂದು ಸಾಬೀತಾಗಿದೆ. ಒಂದು ವರ್ಷದ ಬಳಿಕ, ಯೆಮನ್‌ನ ವಿಚಾರಣಾ ನ್ಯಾಯಾಲಯವು ಆಕೆಗೆ ಮರಣದಂಡನೆ ವಿಧಿಸಿತ್ತು. ಅಂದಿನಿಂದ ಆಕೆಯ ಬಿಡುಗಡೆಗಾಗಿ ಕುಟುಂಬಸ್ಥರು ಹೋರಾಟ ನಡೆಸುತ್ತಿದ್ದಾರೆ. ವಿಚಾರಣಾ ನ್ಯಾಯಾಲಯದ ಆದೇಶದ ವಿರುದ್ಧ ಅವರು ಯೆಮನಿ ಸುಪ್ರೀಂಕೋರ್ಟನ್ನು ಸಂಪರ್ಕಿಸಿದರು. ಆದರೆ ಅವರ ಮನವಿಯನ್ನು 2023 ರಲ್ಲಿ ತಿರಸ್ಕರಿಸಲಾಯಿತು. ಈಗ, ದೇಶದ ಅಧ್ಯಕ್ಷರು ಸಹ ನಿಮಿಷಾ ಪ್ರಿಯಾ ಅವರ ಮನವಿಯನ್ನು ತಿರಸ್ಕರಿದ್ದಾರೆ. ಹೀಗಾಗಿ ನಿಮಿಷ ಅವರು ಈಗ ಸಂತ್ರಸ್ತನ ಕುಟುಂಬ ಹಾಗೂ ಅವರ ಬುಡಕಟ್ಟು ಮುಖಂಡರು ಕ್ಷಮಿಸಿದರಷ್ಟೇ ಈ ಶಿಕ್ಷೆಯಿಂದ ಪಾರಾಗುವಂತ ಏಕೈಕ ಆಯ್ಕೆ ಅವರ ಬಳಿ ಉಳಿದಿದೆ. 

ಆಕೆಯ ತಾಯಿ, ಪ್ರೇಮಾ ಕುಮಾರಿ ಸಂತ್ರಸ್ತೆಯ ಕುಟುಂಬದೊಂದಿಗೆ ರಕ್ತನಿಧಿ ನೀಡುವ ಮೂಲಕ ಸಂಧಾನ ಮಾಡಲು ಪ್ರಯತ್ನಿಸುತ್ತಿದ್ದಾರೆ, ಆದರೆ ಈ ಪ್ರಕರಣದಲ್ಲಿ ಭಾರತೀಯ ರಾಯಭಾರ ಕಚೇರಿಯಿಂದ ನೇಮಕಗೊಂಡ ವಕೀಲ ಅಬ್ದುಲ್ಲಾ ಅಮೀರ್ ಸಂಧಾನದ ಪೂರ್ವ ಶುಲ್ಕ ನೀಡುವಂತೆ ಒತ್ತಾಯಿಸಿದ್ದರಿಂದ ಸಂತ್ರಸ್ತನ ಕುಟುಂಬದೊಂದಿಗಿನ ಈ ಮಾತುಕತೆ ಸೆಪ್ಟೆಂಬರ್‌ನಲ್ಲಿ ಹಠಾತ್ತನೆ ಸ್ಥಗಿತಗೊಂಡಿತು. ಕೇರಳ ಮಾಧ್ಯಮ ವರದಿಯೊಂದರ ಪ್ರಕಾರ ವಕೀಲ $20,000 (ಅಂದಾಜು Rs16.6 ಲಕ್ಷ) ಪೂರ್ವ ಸಂಧಾನ ಶುಲ್ಕ ನೀಡಲು ಬೇಡಿಕೆ ಇಟ್ಟಿದ್ದ ಎಂದು ತಿಳಿದು ಬಂದಿದೆ. 

ಆದರೆ ಈಗಾಗಲೇ ಜುಲೈನಲ್ಲಿ ಅಮೀರ್‌ಗೆ ವಿದೇಶಾಂಗ ಸಚಿವಾಲಯವೂ $19,871 ಅನ್ನು ಒದಗಿಸಿದೆ. ಆದರೆ ಅವರು ಮಾತುಕತೆಯನ್ನು ಪುನರಾರಂಭಿಸುವ ಮೊದಲು ಎರಡು ಕಂತುಗಳಲ್ಲಿ ಪಾವತಿಸಬೇಕಾದ ಒಟ್ಟು $40,000 ಶುಲ್ಕ ಪಾವತಿ ಮಾಡುವಂತೆ ಒತ್ತಾಯಿಸಿದರು ಎಂದು ವರದಿಯಾಗಿದೆ. ಈ ಮಧ್ಯೆ ಸೇವ್ ನಿಮಿಷಾ ಪ್ರಿಯಾ ಇಂಟರ್‌ನ್ಯಾಶನಲ್ ಆಕ್ಷನ್ ಕೌನ್ಸಿಲ್, ಕ್ರೌಡ್‌ಫಂಡಿಂಗ್ ಮೂಲಕ ಅಮೀರನ ಶುಲ್ಕದ ಮೊದಲ ಕಂತನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದೆ. ಆದರೆ ನಂತರ ಅವರು ನಿಧಿಯನ್ನು ಹೇಗೆ ಬಳಸಲಾಗುತ್ತಿದೆ ಎಂಬುದರ ಕುರಿತು ದಾನಿಗಳಿಗೆ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ತೊಂದರೆ ಎದುರಿಸಿದರು ಎಂದು ವರದಿಯಾಗಿದೆ.

Ads on article

Advertise in articles 1

advertising articles 2

Advertise under the article