-->
ಮಂಗಳೂರು: ವೃದ್ಧದಂಪತಿಯನ್ನು ಕೊಲೆಮಾಡಿ ಚಿನ್ನ, ನಗದು ಸುಲಿಗೆ- ಅಪರಾಧಿಗೆ 24ವರ್ಷ ಜೀವಾವಧಿ ಶಿಕ್ಷೆ

ಮಂಗಳೂರು: ವೃದ್ಧದಂಪತಿಯನ್ನು ಕೊಲೆಮಾಡಿ ಚಿನ್ನ, ನಗದು ಸುಲಿಗೆ- ಅಪರಾಧಿಗೆ 24ವರ್ಷ ಜೀವಾವಧಿ ಶಿಕ್ಷೆ


ಮಂಗಳೂರು: ವೃದ್ಧ ದಂಪತಿಯನ್ನು ಕೊಲೆಗೈದು ಮನೆಯಲ್ಲಿದ್ದ ಚಿನ್ನ - ನಗದು ಸುಲಿಗೆಗೈದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ 24ವರ್ಷ ಜೀವಾವಧಿ ಸಜೆ ವಿಧಿಸಿ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.

ಗದಗ ಜಿಲ್ಲೆಯ ಬಿ.ಸಿ.ಕೇರಿ ನಿವಾಸಿ ರಾಜು ಕಲ್ಲವಡ್ದರ್ ಶಿಕ್ಷೆಗೊಳಗಾದ ಅಪರಾಧಿ. ಈತ ಬೆಳ್ತಂಗಡಿಯ ನೆರಿಯಾ ಗ್ರಾಮದ ಬಾಂಜಾರು ಮಲೆ ಎಂಬಲ್ಲಿ ಡ್ಯಾಂ ರಚನೆಗೆಂದು ಕೂಲಿ ಕೆಲಸ ಮಾಡುತ್ತಿದ್ದ. 2016ರ ನವೆಂಬರ್ 10ರಂದು ರಾತ್ರಿ 11ರಿಂದ ಬೆಳಗ್ಗಿನ ಜಾವ 3ರ ಮಧ್ಯೆ ಬೆಳ್ತಂಗಡಿ ತಾಲೂಕು ಚಾರ್ಮಾಡಿ ಗ್ರಾಮದ ಕಕ್ಕಿಂಜೆ ಕಲೇರಿಕಲ್ ಎಂಬಲ್ಲಿ ವಾಸವಿದ್ದ ವೃದ್ಧದಂಪತಿ ವರ್ಕಿ ಕೆ.ವಿ.(85) ಮತ್ತು ಎಲಿಕುಟ್ಟಿ (80)ಯವರ ಮನೆಗೆ ಬಂದಿದ್ದಾನೆ. ಬಳಿಕ ಮೂಗನಂತೆ ನಟಿಸಿ ಕುಡಿಯಲು ನೀರು ಕೇಳಿದ್ದಾನೆ. ಆಮೇಲೆ ದಾರಿ ತೋರಿಸಬೇಕೆಂದು ನೆಪವೊಡ್ಡಿದ್ದಾನೆ. ಅದರಂತೆ ವರ್ಕಿ ಕೆ.ವಿ.ರವರು ರಾಜುವಿಗೆ ಕತ್ತಲೆಯಲ್ಲಿ ಟಾರ್ಚ್‌ಲೈಟ್ ಮೂಲಕ ದಾರಿ ತೋರಿಸುತ್ತಾ ಮುಂದೆ ಹೋಗಿದ್ದಾರೆ. ಈ ವೇಳೆ ಮನೆಯಿಂದ ಸುಮಾರು 70 ಮೀ. ದೂರದಲ್ಲಿ ಆತ ವರ್ಕಿಯವರಿಗೆ ಉರುಗೋಲಿನಿಂದ ಹಲ್ಲೆ ನಡೆಸಿ ಗಾಯಗೊಳಿಸಿದ್ದಾನೆ. ಬಳಿಕ ಉಟ್ಟಿದ್ದ ಲುಂಗಿಯಿಂದಲೇ ಅವರ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆಗೈದಿದ್ದಾನೆ

ಆಮೇಲೆ ಆತ ಮತ್ತೆ ಮನೆಯೊಳಗೆ ಪ್ರವೇಶಿಸಿ ಸೊತ್ತುಗಳನ್ನು ಜಾಲಾಡುತ್ತಿದ್ದ. ಇದರಿಂದ ಎಚ್ಚರಗೊಂಡ ಎಲಿಕುಟ್ಟಿಯವರಿಗೆ ಆರೋಪಿಯು ಮರದ ದೊಣ್ಣೆಯಿಂದ ಹಲ್ಲೆ ನಡೆಸಿ ಬಟ್ಟೆಯಿಂದ ಕುತ್ತಿಗೆ ಬಿಗಿದು ಉಸಿರು ಕಟ್ಟಿಸಿ ಕೊಲೆಗೈದಿದ್ದಾನೆ. ಬಳಿಕ ಮನೆಯ ಗೋದ್ರೇಜ್, ಕಪಾಟುಗಳ ಬಾಗಿಲು ಮುರಿದು 25 ಪವನ್ ಚಿನ್ನ ಹಾಗೂ ನಗದು ಸೇರಿದಂತೆ ಅಂದಾಜು 4,50,000 ರೂ. ಸುಲಿಗೆ ಮಾಡಿದ್ದಾನೆ.

ಸದ್ಯ ಪ್ರಕರಣವನ್ನು ಬೆಳ್ತಂಗಡಿ ಪೊಲೀಸ್ ಠಾಣೆಯ ಅಂದಿನ ಪೊಲೀಸ್ ಉಪಾಧೀಕ್ಷಕ ರಾಹುಲ್ ಕುಮಾರ್ ಆರೋಪಿಯನ್ನು ದಸ್ತಗಿರಿ ಮಾಡಿ ದೋಚಿದ ಸೊತ್ತುಗಳನ್ನು ವಶಪಡಿಸಿಕೊಂಡು ಭಾಗಶಃ ತನಿಖೆ ಪೂರೈಸಿದ್ದರು. ಪ್ರಕರಣದ ಮುಂದುವರಿದ ತನಿಖೆಯನ್ನು ಅಂದಿನ ಪೊಲೀಸ್ ಉಪಾಧೀಕ್ಷಕ ಭಾಸ್ಕರ್ ರೈ ಎನ್.ಜಿ.ರವರು ನಡೆಸಿ ಒಟ್ಟು 51 ಸಾಕ್ಷಿದಾರರನ್ನು ವಿಚಾರಣೆ ಮಾಡಿ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 302, 392, ರಡಿಯಲ್ಲಿ ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. 

ಪ್ರಕರಣದ ವಿಚಾರಣೆ 2018ರ ನವೆಂಬರ್ 13ರಂದು ಪ್ರಾರಂಭಗೊಂಡಿತ್ತು‌. ಅಭಿಯೋಜನೆಯ ಪರ ಒಟ್ಟು 38 ಸಾಕ್ಷಿದಾರರನ್ನು ವಿಚಾರಣೆ ಮಾಡಲಾಗಿತ್ತು. ಹಿಂದಿನ ಸರ್ಕಾರಿ ಅಭಿಯೋಜಕ ಶೇಖರ ಶೆಟ್ಟಿ ಕೆಲವು ಸಾಕ್ಷಿದಾರರನ್ನು ವಿಚಾರಣೆ ಮಾಡಿದ್ದರು. 2021ರಿಂದ ಉಳಿದ ಸಾಕ್ಷಿದಾರರನ್ನು ಸರ್ಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ ನಾಯಕ್ ವಿಚಾರಣೆ ಮಾಡಿ ವಾದ ಮಂಡನೆ ಮಾಡಿದ್ದಾರೆ.

ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ(ವಿಶೇಷ) ನ್ಯಾಯಾಲಯದ ನ್ಯಾಯಾಧೀಶೆ ಪ್ರೀತಿ ಕೆ.ಪಿ. ಪ್ರಕರಣದ ಸಾಕ್ಷ್ಯಾಧಾರಗಳನ್ನು ಪರಿಗಣಿಸಿ ಆರೋಪಿತ ತಪ್ಪಿತಸ್ಥನೆಂದು ತೀರ್ಪನ್ನು ನೀಡಿದ್ದಾರೆ. ಅದರಂತೆ ಆರೋಪಿಗೆ ಭಾ.ದಂ.ಸಂ ಕಲಂ 392ಕ್ಕೆ 10 ವರ್ಷಗಳ ಕಾಲ ಕಠಿಣ ಸಜೆ ಹಾಗೂ 10,000 ದಂಡ, ದಂಡ ಪಾವತಿಸಲು ವಿಫಲನಾದರೆ 3 ತಿಂಗಳ ಕಠಿಣ ಸಜೆಯನ್ನು ಅನುಭವಿಸಬೇಕು. ಭಾ.ದಂ.ಸಂ ಕಲಂ 302 ಕ್ಕೆ ಜೀವಾವಧಿ ಶಿಕ್ಷೆ ಹಾಗೂ 10,000 ರೂ. ದಂಡ ಹಾಗೂ ದಂಡ ಪಾವತಿಸಲು ವಿಫಲನಾದಲ್ಲಿ 3 ತಿಂಗಳ ಕಠಿಣ ಸಜೆಯನ್ನು ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. 

ಈ ಎರಡೂ ಶಿಕ್ಷೆಯನ್ನು ಒಂದರ ಬಳಿಕ ಒಂದರಂತೆ ಅನುಭವಿಸಲು ಆದೇಶಿಸಲಾಗಿದೆ. ಅಪರಾಧಿ ದಸ್ತಗಿರಿಯಾದ ಕಾಲದಿಂದ ಈವರೆಗೂ ನ್ಯಾಯಾಂಗ ಬಂಧನದಲ್ಲಿರುವ ಅವಧಿಯನ್ನು ಕಡಿತಗೊಳಿಸಿ ಉಳಿದ ಅವಧಿಗೆ ಕಠಿಣ ಸಜೆಯನ್ನು ಅನುಭವಿಸಲು ಆದೇಶಿಸಲಾಗಿದೆ.

Ads on article

Advertise in articles 1

advertising articles 2

Advertise under the article