-->
ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಐಶ್ವರ್ಯಾ ರೈಯೊಂದಿಗೆ ಸ್ಪರ್ಧಾಕಣದಲ್ಲಿದ್ದ ಬರ್ಖಾ ಮದನ್ ಈಗ ಏನಾಗಿದ್ದಾಳೆ ಗೊತ್ತಾ?

ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಐಶ್ವರ್ಯಾ ರೈಯೊಂದಿಗೆ ಸ್ಪರ್ಧಾಕಣದಲ್ಲಿದ್ದ ಬರ್ಖಾ ಮದನ್ ಈಗ ಏನಾಗಿದ್ದಾಳೆ ಗೊತ್ತಾ?


ಒಮ್ಮೆ ಮಿಸ್‌ ಇಂಡಿಯಾ ಆಗಿ ಆಯ್ಕೆಯಾದರೆ ಅವರು ರಾತ್ರೋರಾತ್ರಿ ಸೆಲೆಬ್ರಿಟಿಯಾಗಿ ಬಾಲಿವುಡ್‌ನಲ್ಲಿ, ಮಾಡೆಲ್‌ ಜಗತ್ತಿನಲ್ಲಿ ಮಿಂಚತೊಡಗುತ್ತಾರೆ. ಐಶ್ವರ್ಯಾ ರೈ, ಸುಷ್ಮಿತಾ ಸೇನ್‌, ಲಾರಾ ದತ್ತಾ, ಬಿಪಾಶ ಬಸು ಮೊದಲಾದವರು ಇದಕ್ಕೆ ಉತ್ತನ ಉದಾಹರಣೆ. ಆದರೂ ಕೆಲವರು ಜನಾಕರ್ಷಣೆ, ಸೆಲೆಬ್ರಿಟಿ ಸ್ಟೇಟಸ್‌ನಿಂದ ದೂರ ಸರಿದು ಸರಳ ಜೀವನ ನಡೆಸಲು ಆಯ್ಕೆ ಮಾಡಿಕೊಳ್ಳುವವರು ಅಪರೂಪ. ಅಂಥ ಅಪರೂಪದ ಸೆಲೆಬ್ರಿಟಿಗಳಲ್ಲಿ ಬರ್ಖಾ ಮದನ್ ಕೂಡ ಒಬ್ಬರು. 

ಇವರು ಯಾರೆಂದು ನೀವು ಕೇಳಬಹುದು. ಐಶ್ವರ್ಯಾ ರೈಯವರು ಮಿಸ್‌ ಇಂಡಿಯಾ ಆಗಿ ಆಯ್ಕೆಯಾದ ಸ್ಪರ್ಧೆಯಲ್ಲಿ ಐಶ್‌ಗೆ ಪ್ರಬಲವಾದ ಪೈಪೋಟಿ ನೀಡಿದವರು ಎಂದು ಹೇಳಬಹುದು. ಅವರ ಜೀವನವೆಂದರೆ ರೂಪಾಂತರದ ಪ್ರಯಾಣ. ಬರ್ಖಾ ಮಾಡೆಲ್ ಆದರು, ನಟಿಯಾದರು. ಆದರೆ ನಟಿಯಾಗಿ ಬಹಳಕಾಲ ಉಳಿಯಲಿಲ್ಲ. ಆ ಥಳಥಳಿಸುವ ಬದುಕಿನಿಂದ ಆಚೆ ಬಂದು ಬೌದ್ಧ ಸನ್ಯಾಸಿನಿಯಾದಳು. ಪ್ರಸ್ತುತ ಆಕೆಯ ಹೆಸರು ಗ್ಯಾಲ್ಟೆನ್ ಸ್ಯಾಮ್ಟೆನ್.


ಐಶ್ವರ್ಯಾ ರೈ ಮಿಸ್‌ ಇಂಡಿಯಾ ಆಗಿ ಆಯ್ಕೆಯಾದ ಸ್ಪರ್ಧೆಯ ಕಾಲಘಟ್ಟ ಭಾರತದಲ್ಲಿ ಮುಖ್ಯವಾದದ್ದು. ಬಳಿಕ ಭಾರತದಲ್ಲಿ ಮಿಸ್‌ ಇಂಡಿಯಾ ಸೇರಿದಂತೆ ಇತರ ಸೌಂದರ್ಯ ಸ್ಪರ್ಧೆಗಳ ಕುರಿತು ತಿಳಿವಳಿಕೆ ಹೆಚ್ಚಾಯಿತು. ಊರೂರುಗಳಲ್ಲೂ ಸೌಂದರ್ಯ ಪ್ರಸಾದನಗಳ ಮಾರಾಟದ ಭರಾಟೆ ಹೆಚ್ಚಾಯಿತು. ಭಾರತೀಯರು ಹೆಣ್ಣಿನ ಸೌಂದರ್ಯವನ್ನು ನೋಡುವ ರೀತಿಯೇ ಬದಲಾಯಿತು. ಇಂಥ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಬರ್ಖಾರನ್ನು ಬಾಲಿವುಡ್ ಜೀವನ ಕೈಬೀಸಿ ಕರೆಯುತ್ತಿತ್ತು. ಕೈತುಂಬ ಆಫರ್‌ಗಳೂ ಇದ್ದವು. 

1970ರಲ್ಲಿ ಪಂಜಾಬ್‌ನಲ್ಲಿ ಜನಿಸಿದ ಬರ್ಖಾ ಮಾಡೆಲ್ ಮತ್ತು ಸೌಂದರ್ಯ ರಾಣಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 1994ರ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಸುಶ್ಮಿತಾ ಸೇನ್ ಮತ್ತು ಐಶ್ವರ್ಯಾ ರೈರೊಂದಿಗೆ ಸ್ಪರ್ಧಿಸಿದರು. ಆದರೆ ಗೆಲ್ಲಲಿಲ್ಲ. ಅವರು ಮಿಸ್ ಟೂರಿಸಂ ಇಂಡಿಯಾ ಪ್ರಶಸ್ತಿಯನ್ನು ಗೆದ್ದರು ಮತ್ತು ಉದ್ಘಾಟನಾ ಮಿಸ್ ಟೂರಿಸಂ ಇಂಟರ್ನ್ಯಾಷನಲ್ ಸ್ಪರ್ಧೆಯಲ್ಲಿ ಭಾಗವಹಿಸಿದರು. ಅದರಲ್ಲಿ ಅವರು ಮೂರನೇ ರನ್ನರ್ ಅಪ್ ಕಿರೀಟವನ್ನು ಪಡೆದರು.

ಅಕ್ಷಯ್ ಕುಮಾರ್, ರವೀನಾ ಟಂಡನ್ ಮತ್ತು ರೇಖಾ ನಟಿಸಿದ 1996ರ ಚಲನಚಿತ್ರ ಕಿಲಾಡಿಯೋನ್ ಕಾ ಕಿಲಾಡಿಯಲ್ಲಿ ನಟಿಸುವ ಮೂಲಕ ಬರ್ಖಾ ನಟನಾ ಜೀವನಕ್ಕೆ ಪದಾರ್ಪಣೆ ಮಾಡಿದರು. ಬಳಿಕ ರಾಮ್ ಗೋಪಾಲ್ ವರ್ಮಾ ಅವರ 2003ರ ಹಾರರ್‌ ಚಿತ್ರ, ಭೂತ್ ಸೇರಿದಂತೆ ಇತರ ಚಿತ್ರಗಳಲ್ಲಿ ಕಾಣಿಸಿಕೊಂಡರು. ಇದರಲ್ಲಿ ಅವರು ಭೂತದ ಪಾತ್ರವನ್ನು ನಿರ್ವಹಿಸಿದರು. ಇದರ ಅಭಿನಯಕ್ಕಾಗಿ ಪ್ರಶಂಸೆ ಪಡೆದರು.


ಮನರಂಜನಾ ಉದ್ಯಮದಲ್ಲಿ ತನ್ನ ಯಶಸ್ಸಿನ ಬಳಿಕವೂ ಬರ್ಖಾ ಅಲ್ಲಿ ನೆಲೆ ನಿಲ್ಲಲಿಲ್ಲ. ಆಕೆಯನ್ನು ಆಧ್ಯಾತ್ಮಿಕತೆ ಕೈಬೀಸಿ ಕರೆಯಿತು. ಅಂತರಂಗದ ಕರೆಗೆ ಆಕೆ ಓಗೊಟ್ಟಳು. ಟಿಬೆಟ್‌ನ ಧರ್ಮಗುರು ದಲೈ ಲಾಮಾ ಮತ್ತು ಅವರ ಬೋಧನೆಗಳಿಂದ ಬರ್ಖಾ ಆಳವಾದ ಸ್ಫೂರ್ತಿ ಪಡೆದಳು. ಅದು ಅವಳು ಬೌದ್ಧ ಧರ್ಮವನ್ನು ಸ್ವೀಕರಿಸಲು ಕಾರಣವಾಯಿತು.‌ ಟಿಬೆಟಿಯನ್ ಅಲ್ಲದಿದ್ದರೂ, ಬೌದ್ಧ ಮತದಲ್ಲಿ ಜನಿಸದಿದ್ದರೂ ಆಕೆ ಬೌದ್ಧ ಸನ್ಯಾಸಿಯಾದಳು. ಆಕೆ ಈಗ ಧ್ಯಾನ ರಿಟ್ರೀಟ್‌ಗಳು, ಬೌದ್ಧ ಅಧ್ಯಯನಗಳು ಮತ್ತು ಸಾಮಾಜಿಕ ಸೇವೆಗಳಿಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ಇತ್ತೀಚೆಗೆ ಅವರು ಲಡಾಖ್‌ನಲ್ಲಿ ಮೂರು ವರ್ಷಗಳ ಆಳವಾದ ಧ್ಯಾನದ ಏಕಾಂತವಾಸವನ್ನು ಪೂರ್ಣಗೊಳಿಸಿದ್ದಾರಂತೆ.

2012ರಲ್ಲಿ, ಬರ್ಖಾ ಬೌದ್ಧ ಸನ್ಯಾಸಿನಿಯಾಗುವ ದೀಕ್ಷೆ ಪಡೆದರು. ಗ್ಯಾಲ್ಟೆನ್ ಸ್ಯಾಮ್ಟೆನ್ ಎಂಬ ಹೆಸರನ್ನು ಪಡೆದರು. 2024ರ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಅವರು ಸನ್ಯಾಸಿಯಾದ ಬಳಿಕ ತನ್ನ ತಲೆಯನ್ನು ಬೋಳಿಸಿಕೊಂಡದ್ದನ್ನು ಹಾಕಿದ್ದರು. “ನವೆಂಬರ್ 4, 2012, ಬೆಳಿಗ್ಗೆ 11:20ಕ್ಕೆ ನಾನು ಮರುಜನ್ಮ ಪಡೆದಿದ್ದೇನೆ" ಎಂದು ಬರೆದುಕೊಂಡರು. ಇಂದು ಬರ್ಖಾ ಹಿಮಾಲಯದ ಬೌದ್ಧವಿಹಾರಗಳಲ್ಲಿ ಇರುತ್ತಾರೆ. ಅವರ ಆಧ್ಯಾತ್ಮಿಕ ಪ್ರಯಾಣದ ವಿವರಗಳನ್ನು Instagramನಲ್ಲಿ ಇತರರೊಂದಿಗೆ ಹಂಚಿಕೊಳ್ಳುತ್ತಾರೆ. ಆಕೆಯ ಬಯೋದಲ್ಲಿನ ಸಂದೇಶದಲ್ಲಿ ಹೀಗಿದೆ: “ತಾಳ್ಮೆಯಿಂದ ಮಾತ್ರ ಪ್ರಕ್ಷುಬ್ಧ ಹೃದಯಗಳನ್ನು ಮೆರುಗುಗೊಳಿಸಬಹುದು. ನೀರು ನಿಂತಾಗ ಅದು ಕನ್ನಡಿಯಾಗುತ್ತದೆ." 

Ads on article

Advertise in articles 1

advertising articles 2

Advertise under the article